ಹಿರಿಯ ನಾಗರಿಕರು ಕುಟುಂಬ ಹಾಗೂ ಸಮಾಜದ ಆಸ್ತಿ- ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಹಿರಿಯ ನಾಗರಿಕರು ನಮ್ಮ ಕುಟುಂಬದ ಹಾಗೂ ಸಮಾಜದ ಆಸ್ತಿಯಾಗಿದ್ದು ಅವರಿಗಿರುವ ಕಾನೂನು ಹಾಗೂ ಸವಲತ್ತುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಗಳಿಸಿ ಅವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾ ಸಭಾಭವನದಲ್ಲಿ ಧರ್ಮಪ್ರಾಂತ್ಯದ ಕುಟುಂಬ ಆಯೋಗ ವತಿಯಿಂದ ನಡೆದ ಹಿರಿಯ ನಾಗರಿಕರ ಬೃಹತ್ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ ಹಿರಿಯ ನಾಗರಿಕರಿಗೆ ಕಾನೂನುಗಳ ಅರಿವನ್ನು ನೀಡಿ ಅವರ ಮೇಲೆ ನಡೆಯುವ ದೌರ್ಜನ್ಯವನ್ನು ಹೇಗೆ ತಡೆಯ ಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.

ಉಡುಪಿ ಜಿಲ್ಲಾ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ನಿರಂಜನ ಭಟ್ ಎಮ್ ಅವರು ಹಿರಿಯ ನಾಗರಿಕರ ಜೀವನ ನಿರ್ವಹಣೆ ಮತ್ತು ಸುರಕ್ಷತೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾರ್ಕಳ ವಲಯದ ಪ್ರಧಾನ ಧರ್ಮಗುರು ವಂ|ಪಾವ್ಲ್ ರೇಗೊ, ಬಸಿಲಿಕಾದ ರೆಕ್ಟರ್ ವಂ|ಆಲ್ಬನ್ ಡಿಸೋಜಾ, ಹಿರಿಯ ನಾಗರಿಕರ ವೇದಿಕೆ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಅಲ್ಫೋನ್ಸ್ ಡಿಕೋಸ್ತಾ, ಉಪಾಧ್ಯಕ್ಷ ಅರ್ವಿನ್ ಡಿಸೋಜಾ, ಕಾರ್ಯದರ್ಶಿ ಐರಿನ್ ಮಿನೇಜಸ್, ಉಪಸ್ಥಿತರಿದ್ದರು.

ಅಲ್ಫೋನ್ಸ್ ಡಿಕೋಸ್ತಾ ಸ್ವಾಗತಿಸಿ ಅರ್ವಿನ್ ಡಿಸೋಜಾ ವಂದಿಸಿ ಕುಟುಂಬ ಆಯೋಗದ ನಿರ್ದೇಶಕ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!