ಉಡುಪಿ: ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನ‌ಮಾನಗಳು ಸಿಗುವುದು ಮರಿಚಿಕೆಯೇ?

ಉಡುಪಿ: (ಉಡುಪಿ ಟೈಮ್ಸ್ ವಿಶೇಷ ವರದಿ): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನ‌ಮಾನಗಳು ಸಿಗುವುದು ಮರಿಚಿಕೆಯೇ ಎಂಬ ಅನುಮಾನವು ನೂತನವಾಗಿ ಹೊರಬಂದ ಜಿಲ್ಲಾ ಮಟ್ಟದ ಚುನಾವಣಾ ಖಾತರಿಗಳ ಅನುಷ್ಠಾನದ ಮೇಲ್ವಿಚಾರಣಾ ಸಮಿತಿಯ ಪಟ್ಟಿಯಿಂದ ತಿಳಿದುಬರುತ್ತದೆ.

ರಾಜ್ಯ ಕಾಂಗ್ರೆಸ್ ಸರಕಾರವು ಚುನಾವಣಾ ಖಾತರಿಗಳ ಅನುಷ್ಠಾನದ ಮೇಲ್ವಿಚಾರಣಾ ಸಮಿತಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಒಬ್ಬರು ಅಧ್ಯಕ್ಷರು, 5 ಉಪಾಧ್ಯಕ್ಷರು ಮತ್ತು 21 ಸದಸ್ಯರನ್ನಾಗಿ ನೇಮಿಸುತ್ತದೆ. ಇದರಲ್ಲಿ ಬಹುಪಾಲು ಕಾರ್ಯಕರ್ತರಿಗೆ ನೀಡುವುದಾಗಿ ಹೇಳಿತ್ತು. ಆದರೆ ಉಡುಪಿ ಜಿಲ್ಲಾ ‌ಸಮಿತಿಯಲ್ಲಿ ಯಾವುದೇ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಈ ಸಮಿತಿಗೆ ನೇಮಿಸದೆ ಇರುವುದಕ್ಕೆ ನಿಷ್ಠಾವಂತ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಲೇ ಎರಡೆರಡು ಹುದ್ದೆ ಅನುಭವಿಸುತ್ತಿರುವವರು, ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಎಲ್ಲರಿಗೂ ಮಣೆ ಹಾಕಿದ್ದು ಮಾತ್ರವಲ್ಲದೆ ಜಿಲ್ಲಾಧ್ಯಕ್ಷ ಸಹಿತ ಬ್ಲಾಕ್ ಅಧ್ಯಕ್ಷ ಪಟ್ಟ ಇರುವ ವ್ಯಕ್ತಿಗಳಿಗೂ ಸಮಿತಿಯಲ್ಲಿ ಸ್ಥಾನಮಾನ ನೀಡಿರುವುದು ನಿಷ್ಠಾವಂತ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಪಕ್ಷಕ್ಕೆ ಚುನಾವಣೆ ಬಂದಾಗ ಕಾರ್ಯಕರ್ತರು ಬೇಕು, ಸ್ಥಾನಮಾನಗಳು ಪಡೆದುಕೊಂಡವರೇ ಹಾಗೂ ಪ್ರಸ್ತುತ ಪಕ್ಷದ ವಿವಿಧ ಹುದ್ದೆ ಹೊಂದಿರುವವರಿಗೆ ಮತ್ತೆ ಮತ್ತೆ ಹುದ್ದೆ ನೀಡುತ್ತಾ ಹೋದರೆ ಪಕ್ಷದಲ್ಲಿ ಕಾರ್ಯಕರ್ತರು ಮುನ್ನೆಲೆಗೆ ಬರುವುದು ಯಾವಾಗ ಎನ್ನುವುದು ಹಿರಿಯ ಕಾರ್ಯಕರ್ತರಾದ ಮೀನಾಕ್ಷಿ ಮಾಧವ ಬನ್ನಂಜೆ, ಸದಾಶಿವ ಅಮೀನ್ ಕಟ್ಟೆಗುಡ್ಡೆ, ಸುಕೇಶ್ ಕುಂದರ್, ಪ್ರಶಾಂತ ಪೂಜಾರಿ, ಗಿರೀಶ್ ಪೂಜಾರಿ ಇಂದ್ರಾಳಿ, ಕೀರ್ತಿ ಶೆಟ್ಟಿ ಅಂಬಲಪಾಡಿ, ಲಕ್ಷ್ಮಣ್ ಪೂಜಾರಿ ಅಂಬಲಪಾಡಿ, ಐರಿನ್ ಅಂದ್ರಾದೆ ಸಹಿತ ಹಲವರು ಪಕ್ಷದ ಮುಖಂಡರನ್ನು ಪ್ರಶ್ನಿಸಿದ್ದಾರೆ.

ಸರಕಾರ ನೀಡಿದ ಈ ಅವಕಾಶದಿಂದ ಅಧ್ಯಕ್ಷರು ಮಾಸಿಕ 50 ಸಾವಿರ ರೂ.ಗೌರವಧನ ಪಡೆಯಲಿದ್ದಾರೆ. ಕ್ಷೇತ್ರ ಮಟ್ಟದ ಸಮಿತಿಗಳು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು 11 ಸದಸ್ಯರನ್ನು ಸಹ ಹೊಂದಿರುತ್ತಾರೆ. ಈ ಅಧ್ಯಕ್ಷರು ತಿಂಗಳಿಗೆ ರೂ 20,000- 25,000 ಪಡೆಯಬಹುದಾದರೂ, ಸದಸ್ಯರು ಕುಳಿತುಕೊಳ್ಳುವ ಶುಲ್ಕವನ್ನು ಪಡೆಯುತ್ತಾರೆ. ಈ ಸಮಿತಿಯಲ್ಲಿರುವ ಎಲ್ಲಾ ವ್ಯಕ್ತಿಗಳು ಪಕ್ಷದ ಕಾರ್ಯಕರ್ತರಾಗಿರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.

ಈ ಸಮಿತಿಗೆ ರಾಜ್ಯಸರಕಾರದ ಖಜಾನೆಯಿಂದ 16 ಕೋಟಿ ವೆಚ್ಚವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!