ಮುಂದಿನ 5 ವರ್ಷಗಳಲ್ಲಿ ದೇಶದ ಆರ್ಥಿಕ ಪ್ರಗತಿಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ: ದೇವೇಂದ್ರ ಫಡ್ನವೀಸ್

ಉಡುಪಿ: ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕ ಪ್ರಗತಿಯನ್ನು ಕಾಣುತ್ತಿರುವ ಭಾರತದ ಆರ್ಥಿಕ ಬೆಳವಣಿಗೆಯ ಪಥವನ್ನು ಮುಂದಿನ ಐದು ವರ್ಷಗಳ ಕಾಲ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಇಂದು ಸಂಜೆ ಆಯೋಜಿಸಲಾದ ಪ್ರಬುದ್ಧರ ಚಿಂತನ ಸಭೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಮುಂದಿನ ಐದು ವರ್ಷಗಳಲ್ಲಿ ಭಾರತ, ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಭರವಸೆ ನೀಡಿದಂತೆ ವಿಶ್ವದ ಐದನೇ ಬಲಿಷ್ಠ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಫಡ್ನವೀಸ್, 2012ರಲ್ಲಿ ಭಾರತ ಅತ್ಯಂತ ಅಸ್ಥಿರವಾದ ಆರ್ಥಿಕತೆಯನ್ನು ಹೊಂದಿತ್ತು ಎಂದರು.

ದುರ್ಬಲ ವರ್ಗದವರ ಸಬಲೀಕರಣವನ್ನು ಪ್ರೋತ್ಸಾಹಿಸುವ ಆರ್ಥಿಕ ಮಾದರಿಯನ್ನು ಜಾರಿಗೊಳಿಸುವ ಮೂಲಕ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಬೆಳವಣಿಗೆಗೆ ವೇಗವನ್ನು ನೀಡಿದರು. ಮೋದಿ ಪ್ರಧಾನಿಯಾ ಗಿದ್ದ ಕಳೆದ ಹತ್ತು ವರ್ಷಗಳಲ್ಲಿ ದೇಶದ 25 ಕೋಟಿ ಜನತೆ ಬಡತನದ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ. 2014ಕ್ಕೆ ಮೊದಲು ದೇಶದಲ್ಲಿ ಶೇ.40ರಷ್ಟು ಮಂದಿ ಅತ್ಯಂತ ಬಡತನದಲ್ಲಿದ್ದರೆ, ಇಂದು ದೇಶದ ಕೇವಲ ಶೇ.3ರಷ್ಟು ಮಂದಿ ಮಾತ್ರ ಬಡತನದ ರೇಖೆಗಿಂತ ಕೆಳಗಿದ್ದಾರೆ ಎಂದು ಮಾಹಿತಿ ನೀಡಿದರು.

2014ಕ್ಕೆ ಮೊದಲು 55 ಕೋಟಿ ಭಾರತೀಯರು ಬ್ಯಾಂಕ್‌ನ ಮುಖವನ್ನು ಕಂಡಿರಲಿಲ್ಲ. ಆದರೆ ಇಂದು ಅವರೆಲ್ಲರೂ ಆರ್ಥಿಕತೆಯ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಹೇಳಿಕೊಂಡರು. 2014ಕ್ಕೆ ಮೊದಲು ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದರೆ, ಇಂದು ಸಂಪೂರ್ಣವಾಗಿ ಕಾರ್ಯಾಚರಿಸುವ 149 ವಿಮಾನ ನಿಲ್ದಾಣಗಳು ದೇಶದಲ್ಲಿವೆ. ಹೀಗಾಗಿ ಜನಸಾಮಾನ್ಯರೂ ಇಂದು ವಿಮಾನದಲ್ಲಿ ಪ್ರಯಾಣಿಸುವ ಸ್ಥಿತಿ ಇದೆ ಎಂದು ವಿವರಿಸಿದರು.

ಮತದಾರರನ್ನು ದಾರಿತಪ್ಪಿಸುವ ಹೇಳಿಕೆ ಹಾಗೂ ಸುಳ್ಳು ಭರವಸೆಗಳನ್ನು ನೀಡುತ್ತಿರುವ ರಾಜಯದ ಕಾಂಗ್ರೆಸ್ ಸರಕಾರವನ್ನು ಟೀಕಿಸಿದ ಫಡ್ನವೀಸ್, ಸಚಿವರಾದ ಪ್ರಿಯಾಂಕ ಖರ್ಗೆ ಅವರು ಧರ್ಮವನ್ನು ರೋಗ ಎಂದು ಬಣ್ಣಿಸಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ವಿಪಕ್ಷಗಳು ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂದು ಹೇಳಿದ ಫಡ್ನವೀಸ್, ಕಾಂಗ್ರೆಸ್ ಸಮಾಜವಿರೋಧಿ ಶಕಿಗಳನ್ನು ಬೆಂಬಲಿಸುತ್ತಿದೆ. ರಾಮಮಂದಿರದ ಉದ್ಘಾಟನೆಯನ್ನು ಕಾಂಗ್ರೆಸ್ ಬಹಿಷ್ಕರಿಸಿರುವುದನ್ನು ಇದಕ್ಕೆ ಉದಾಹರಣೆಯಾಗಿ ನೀಡಿದರು.

ಬಳಿಕ ನಡೆದ ಸಂವಾದದಲ್ಲಿ ಭಾಗವಹಿಸಿದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ದೇಶದ ವಿರುದ್ಧ ಯಾರೇ ಹೇಳಿಕೆ ನೀಡಿದರೂ ಆತನನ್ನು ಶಿಕ್ಷಿಸಬೇಕು. ದೇಶವಿರೋಧಿ ಶಕ್ತಿಗಳನ್ನು ಬೆಂಬಲಿಸುವ ಪಕ್ಷಗಳನ್ನು ಜನತೆ ಆಯ್ಕೆ ಮಾಡಬಾರದು ಎಂದರು.

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್‌ ಕುಮಾರ್ ಕುಂದಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಯಶಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!