ನಾನು ಫೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡುತ್ತೇನೆ, ಗೆಲ್ಲುತ್ತೇನೆ: ಶೋಭಾ ಕರಂದ್ಲಾಜೆ

ವಿಜಯಪುರ: 17ನೆಯ ಲೋಕಸಭೆಗಾಗಿ ನಾಳೆ ಅಥವಾ ನಾಡಿದ್ದು ಚುನಾವಣೆ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆಯಿದೆ. ಅದರ ಜೊತೆಜೊತೆಗೆ ಆಡಳಿತಾರೂಢ ಬಿಜೆಪಿ ಪಕ್ಷವು ಎರಡನೇ ಸುತ್ತಿನ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಶೋಭಾ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಕ್ಷೇತ್ರದಲ್ಲಿ ಗೊಂದಲವಿದೆ, ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲೋ ಕ್ಷೇತ್ರ ಹಾಗಾಗಿ ಬೇಡಿಕೆಯಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿನ ಜನರು ‌ನನ್ನನ್ನು ಎರಡು ಬಾರಿ ಗೆಲ್ಲಿಸಿದ್ದಾರೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಮಾಡಿದ್ದೇನೆ. ಗೋ ಬ್ಯಾಕ್​ ಅನ್ನುವುದು ಶೋಭಾಯಮಾನವಲ್ಲ, ನಾನು ಪಕ್ಷಕ್ಕಾಗಿ ತಳಮಟ್ಟದಿಂದ ದುಡ್ಡಿದಿದ್ದೇನೆ, ಕ್ಯಾಬಿನೆಟ್​​ನಲ್ಲಿ ಸೇವೆ ಸಲ್ಲಿಸಿದ್ದೇನೆ, ಒಟ್ಟಿನಲ್ಲಿ ಬಿಜೆಪಿಗಾಗಿ ನನ್ನನ್ನೇ ಅರ್ಪಿಸಿಕೊಂಡಿದ್ದೇನೆ. ಹೀಗಿರುವಾಗ ನನ್ನನ್ನು ಗೋ ಬ್ಯಾಕ್ ಎನ್ನುವುದು ಸರ್ವತಾಸಾಧುವಲ್ಲ ಎಂದಿದ್ದಾರೆ.

ಬೇರೆಯವರು ಟಿಕೆಟ್ ಕೇಳಿದ್ದು ತಪ್ಪಲ್ಲ, ಆದ್ರೆ ಹಾಲಿ ಸಂಸದೆಯಾಗಿ ನನಗೆ ಅವಮಾನ ಮಾಡುವ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಹೊರಗಿನವರು ಬಂದು ಗೋಬ್ಯಾಕ್​ ಅಭಿಯಾನ ಮಾಡುತ್ತಿದ್ದಾರೆ.ಇದು ಎಷ್ಟರಮಟ್ಟಿಗೆ ಸರಿ? ‌ನಾನು ವಿಚಲಿತಳಾಗಿಲ್ಲ, ನಮ್ಮ ಕಾರ್ಯಕರ್ತರು ಸಹ ವಿಚಲಿತರಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನೂ ತಮಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್​ ನೀಡ್ತಾರೆಂಬ ವಿಚಾರವನ್ನು ಪ್ರಸ್ತಾಪಿಸಿದ ಶೋಭಾ ನಾನು ಫೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡುತ್ತೇನೆ, ಗೆಲ್ಲುತ್ತೇನೆ. ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್​ ನೀಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಾರಾಸಗಟಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿಚಟುವಟಿಕೆ ಆರೋಪದ ಬಗ್ಗೆ ಮಾತನಾಡಿದ ಅವರು ನಾನು ಹೆತ್ತ ತಾಯಿಗೆ ದ್ರೋಹ ಮಾಡಿಲ್ಲ. ಒಮ್ಮೆ ಟಿಕೆಟ್ ಕೊಟ್ಟರೆ ಮುಗೀತು, ಅವರ ಪರವಾಗಿಯೇ ಕೆಲಸ ಮಾಡ್ತೇವೆ ಎಂಬುದ ಅರ್ಥ ಮಾಡಿಕೊಳ್ಳಬೇಕು. ಹಾಗಂತ ಯಾರೇ ಅಭ್ಯರ್ಥಿಯಾಗಲಿ ತಮ್ಮ ಸೋಲನ್ನು ಮತ್ತೊಬ್ಬರ ಮೇಲೆ ಹೇಳೋದು ದ್ರೋಹ ಬಗೆದಂತೆ. ಯಾರಿಗೆ ಟಿಕೆಟ್​ ನೀಡಬೇಕೆಂದು ನಮ್ಮ ಹಿರಿಯರು ತೀರ್ಮಾನಿಸ್ತಾರೆ ಎಂದು ವಿಜಯಪುರ ನಗರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇರ ನುಡಿಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!