ಅರುಂಧತಿ ನಾಗ್‌ಗೆ “ರಂಗಭಾರತಿ” ರಂಗಭೂಮಿ ಪ್ರಶಸ್ತಿ ಪ್ರದಾನ

ಉಡುಪಿ: ರಂಗಭೂಮಿ ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪ ದಲ್ಲಿ ಹಮ್ಮಿಕೊಳ್ಳಲಾಗಿ ರುವ ರಂಗಭೂಮಿ ರಂಗೋತ್ಸವದ ಮೂರನೇ ದಿನವಾದ ಶನಿವಾರ ಹಿರಿಯ ಕಲಾವಿದೆ ಪದ್ಮಶ್ರೀ ಅರುಂಧತಿ ನಾಗ್ ಅವರಿಗೆ ರಂಗಭಾರತಿ ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಂಗ ಶಂಕರ್ ಥಿಯೇಟರ್‌ನ್ನು ಕಟ್ಟಿ ನಡೆಸಿಕೊಂಡು ಹೋಗುವುದು ಇಷ್ಟು ಕಷ್ಟ ಇದೆ ಎಂಬುದು ಕಲ್ಪನೆಯೇ ಮಾಡಿರಲಿಲ್ಲ. ಕಟ್ಟುವಾಗ ಎಲ್ಲರೂ ಇದ್ದರೂ ಮುನ್ನಡೆಸುವಾಗ ಯಾರು ಇಲ್ಲ. ಮಕ್ಕಳನ್ನು ಹೆತ್ತು ಬೆಳೆಸಿದಷ್ಟೇ ಅನುಭವವಾಗುತ್ತದೆ. ರಂಗ ಶಂಕರಗೆ ಎಲ್ಲವನ್ನು ಕೊಟ್ಟಿದ್ದೇನೆ. ಅದು ಸಮಾಜಕ್ಕೆ ಸಂಪತ್ತನ್ನೇ ಕೊಟ್ಟಿದೆ ಎಂದು ತಿಳಿಸಿದರು.

ರಂಗ ಶಂಕರ ಹುಟ್ಟಿ 19ವರ್ಷಗಳಾದರೂ ಇನ್ನೊಂದು ರಂಗ ಶಂಕರ ಇಡೀ ದೇಶದಲ್ಲಿ ಎಲ್ಲೂ ಹುಟ್ಟಿಲ್ಲ. ರಂಗ ಶಂಕರ ಮಾದರಿಯ ಥಿಯೇಟರನ್ನು ರಂಗ ಭೂಮಿಯವರು ಉಡುಪಿಯಲ್ಲಿ ಸ್ಥಾಪಿಸಬೇಕು. ಆ ಸಾಮರ್ಥ್ಯ ಉಡುಪಿಯ ವರಿಗೆ ಇದೆ ಎಂದು ಅವರು ಹೇಳಿದರು.

ಅಭಿನಂದನಾ ಭಾಷಣ ಮಾಡಿದ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ, ರಂಗಭೂಮಿಯಿಂದ ಬೆಳೆದು ಸಿನೆಮಾ ನಟರಾದವರು ವರ್ಷಕ್ಕೆ ಒಂದೇ ಸಿನೆಮಾ ಮಾಡಿ ಕೋಟ್ಯಂತರ ರೂ. ದುಡಿಯುತ್ತಿದ್ದಾರೆ. ಅವರು ಯಾರು ಕೂಡ ರಂಗಭೂಮಿಗೆ ತನ್ನ ಯಾವುದೇ ಕೊಡುಗೆಯನ್ನು ನೀಡಿಲ್ಲ. ಆದರೆ ಶಂಕರ್ ನಾಗ್ ಹಾಗೂ ಅರುಂದತಿ ನಾಗ್ ರಂಗಭೂಮಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಮಾಹೆ ಸಹಕುಲಾಧಿಪತಿ, ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಬಿ.ವಿ.ರಾಜಾ ರಾಮ್, ಯುವ ಉದ್ಯಮಿ ಅಜಯ್ ಪಿ.ಶೆಟ್ಟಿ ಮಾತನಾಡಿದರು.

ವೇದಿಕೆಯಲ್ಲಿ ಹಿರಿಯ ರಂಗಕರ್ಮಿ ಗುಂಡಣ್ಣ ಸಿ.ಕೆ., ಚಲನಚಿತ್ರ ನಿರ್ದೇಶಕ ಕೆ.ಎಂ.ಚೈತನ್ಯ, ರಂಗಭೂಮಿ ಉಪಾಧ್ಯಕ್ಷ ರಾದ ಭಾಸ್ಕರ್ ರಾವ್ ಕಿದಿಯೂರು, ಎನ್.ಆರ್. ಬಲ್ಲಾಳ್ ಉಪಸ್ಥಿತರಿದ್ದರು.

ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಚಂದ್ರ ಕುತ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಷ್ಣುಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದಿಂದ ಹ್ಯಾಂಗ್ ಆನ್ ಕನ್ನಡ ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

error: Content is protected !!