ಮತದಾರರು ವಿವೇಚನೆಯಿಂದ ಮತ ಚಲಾಯಿಸಿ, ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಿ: ನ್ಯಾ.ಶಾಂತವೀರ ಶಿವಪ್ಪ

ಉಡುಪಿ, ಜ.25: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಆಯ್ಕೆಗೆ ಮತದಾರರಿಗೆ ಅವಕಾಶವಿದ್ದು,
ಮತದಾರರು ವಿವೇಚನೆಯಿಂದ ಯಾವುದೇ ಆಮೀಷಗಳಿಗೆ ಒಳಗಾಗದೇ ಮತ ಚಲಾಯಿಸಿ, ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರೊಂದಿಗೆ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.

ಅವರು ಇಂದು ನಗರದ ಅಜ್ಜರಕಾಡು ಪುರಭವನದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟಿçÃಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂವಿಧಾನದಲ್ಲಿ ವಯಸ್ಕ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಯುವ ಮತದಾರರು ಮತದಾನವನ್ನು ಮಾಡುವಾಗ ಯಾವುದೇ ಆಮೀಷಗಳಿಗೆ ಒಳಗಾಗದೇ, ಜಾತಿ, ಮತ, ಬೇಧಗಳನ್ನು ಪರಿಗಣಿಸದೇ ಉತ್ತಮ ಅಭ್ಯರ್ಥಿಗಳಿಗೆ ಮತ ಹಾಕುವುದರೊಂದಿಗೆ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಚುನಾವಣೆ ಒಂದು ಪ್ರಜಾಪ್ರಭುತ್ವ ದೇಶದಲ್ಲಿ ಅತೀ ಮುಖ್ಯವಾದುದು. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ತಳವೂರಲು ಚುನಾವಣೆ ಅತ್ಯಗತ್ಯ. ಅರ್ಥಪೂರ್ಣವಾದ ಪಾರದರ್ಶಕ ಸರ್ಕಾರ ಜಾರಿಗೆ ತರುವ ಜವಾಬ್ದಾರಿ ನಮ್ಮ ಕೈಯಲ್ಲಿದ್ದು, ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬ ಮತದಾರರು ಅರ್ಹ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು ಎಂದರು.
ಜವಾಬ್ದಾರಿ ಹೀನತೆಯಿಂದ ಮತದಾನದಿಂದ ದೂರವುಳಿದ ನಾಗರಿಕರಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಸಲುವಾಗಿ ಚುನಾವಣಾ ಆಯೋಗವು ಎಲ್ಲರೂ ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಸ್ವೀಪ್- ಮತದಾರರ ಅರಿವಿನ ಕಾರ್ಯಕ್ರಮವನ್ನು ಜಾರಿಗೊಳಿಸಿ, ಆ ಮೂಲಕ ಎಲ್ಲ ಮತದಾರರಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದರೊಂದಿಗೆ ಶಾಲಾ-ಕಾಲೇಜು ಹಂತಗಳಲ್ಲಿಯೂ ಸಹ ವಿವಿಧ ಸ್ಫರ್ಧೆಗಳನ್ನು ಆಯೋಜಿಸಿ, ಮತದಾನದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಲ್ಲೆಯ ಅರ್ಹ ಪ್ರತಿಯೊಬ್ಬ ನಾಗರಿಕರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಪ್ರತಿಶತಃ ನೂರರಷ್ಟು ಮತದಾನ, ಉಡುಪಿ ಜಿಲ್ಲೆಯ ವಾಗ್ದಾನ ಎಂದು ಗೋಷಣೆ ಮಾಡಿದರು. ಕ್ವಿಜ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾದ ಆಲೂರು ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಬೆಸ್ಟ್ ನ್ಯಾಷನಲ್ ಲೆವೆಲ್ ಮಾಸ್ಟರ್ ಟ್ರೆöÊನರ್ ಪ್ರಶಸ್ತಿ ಪಡೆದ ಡಯಟ್‌ನ ಪ್ರಾಂಶುಪಾಲ ಅಶೋಕ್ ಕಾಮತ್‌ಗೆ ಅಭಿನಂದನೆ ಸಲ್ಲಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸಾಂವಿಧಾನಿಕವಾಗಿ ನೀಡಿರುವ ಮತದಾನದ ಹಕ್ಕನ್ನು ಜವಾಬ್ದಾರಿ ಎಂದು ಅರಿತು ಮತದಾನ ಮಾಡಬೇಕು ಹಾಗೂ ಸಂವಿಧಾನದಲ್ಲಿ ತಿಳಿಸಿರುವಂತೆ ಹಕ್ಕು ಮತ್ತು ಕರ್ತವ್ಯಗಳ ಅನುಸರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ತಪ್ಪದೇ ಪಾಲಿಸಬೇಕು ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಮಾತನಾಡಿ, ಯುವ ಮತದಾರರು ಯೋಚಿಸಿ, ಮತದಾನ ಮಾಡಿದ್ದಲ್ಲಿ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ನಾಗರಿಕರು ಮತದಾನ ಮಾಡುವುದು ಕರ್ತವ್ಯವೆಂದು ಅರಿತು ಮತದಾನ ಮಾಡಬೇಕು. ಆಗ ಮಾತ್ರ ಸದೃಢ ಪ್ರಜಾಪ್ರಭುತ್ವ ನಿರ್ಮಾಣ ಮಾಡಲು ಸಾಧ್ಯ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಮತದಾರರ
ದಿನಾಚರಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಸಾಂಕೇತಿಕವಾಗಿ ಹಾಗೂ ರಾಷ್ಟಿçÃಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ
ಆಯೋಜಿಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಎಸ್‌ಪಿ ಸಿದ್ಧಲಿಂಗಪ್ಪ, ರಾಷ್ಟಿçÃಯ ಮತದಾರರ ದಿನಾಚರಣೆಯ ಅಂಗವಾಗಿ ಜಿಲ್ಲಾ ವತಿಯಿಂದ ನೇಮಿಸಲಾದ ರಾಯಭಾರಿಗಳಾದ ರಾಷ್ಟಿçÃಯ ಕ್ರೀಡಾಪಟು ರೋಹಿತ್ ಕುಮಾರ್ ಶೆಟ್ಟಿ, ಕಲಾವಿದೆ ಮಾನಸಿ ಸುಧೀರ್, ರಂಗಭೂಮಿ ನಟಿ ಆರ್.ಜೆ ಕಾಜಲ್, ಕ್ರಿಕೇಟ್ ಆಟಗಾರ ಪೃಥ್ವಿರಾಜ್ ಶೆಟ್ಟಿ ಹುಂಚಣಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಜಾಥಾವು ಸರ್ವೀಸ್ ಬಸ್ ನಿಲ್ದಾಣದಿಂದ ಪ್ರಾರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪುರಭವನವನ್ನು ತಲುಪಿತು. ಜಾಥಾದಲ್ಲಿ ಕಲಾತಂಡಗಳು, ಅಧಿಕಾರಿಗಳು, ಸಾರ್ವಜನಿಕರು ಹಾಗೂ

2000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!