ಸರ್ಕಾರದ ಸವಲತ್ತುಗಳನ್ನು ಆದಿವಾಸಿಗಳಿಗೆ ತಲುಪಿಸಿ ಅವರನ್ನು ಮುಖ್ಯವಾಹಿನಿಗೆ ತನ್ನಿ: ಶಾಸಕ ಗುರ್ಮೆ ಸುರೇಶ್

ಕಾಪು: ಹುಟ್ಟಿನಿಂದ ಯಾರು ಶ್ರೇಷ್ಠರಲ್ಲ. ನಾವು ಮಾಡುವ ಸಾಧನೆಯಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅದಿವಾಸಿ ಸಮುದಾಯದವರಿಗೆ ಸರಕಾರದಿಂದ ಲಭ್ಯವಿರುವ ಸವಲತ್ತುಗಳನ್ನು ತಲುಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಅವರುಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಅವರು ಇಂದು ಕಾಪು ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ವಿಶ್ವನಾಥ ಲಚ್ಚಿಲ್ ಇಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ, ಗ್ರಾಮ ಪಂಚಾಯತ್ ಮಜೂರು, ಐ. ಟಿ.ಡಿ.ಪಿ ಉಡುಪಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಯುಷ್ಮಾನ್ ಭಾರತ್ -ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ- ಮುಖ್ಯ ಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೊರಗ ಸಮುದಾಯದ ಜನರು ಆಸಕ್ತಿ ವಹಿಸಿ ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಕಾರ್ಯನಿರ್ವಹಿಸಬೇಕು ಎಂದ ಅವರು, ಸಮಾಜದಲ್ಲಿರುವ ಎಲ್ಲಾ ಸಮುದಾಯಗಳ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಿಲ್ಲೆಯಲ್ಲಿರುವ ಕೊರಗ ಸಮುದಾಯಗಳಿಗೆ ಆರೋಗ್ಯ, ವಸತಿ ಹಾಗೂ ಶಿಕ್ಷಣ ಕ್ಕೇ ಪೂರಕವಾಗಿ ಅವರ ಅವಶ್ಯಕತೆಗಳನ್ನು ಸರ್ವೇ ನಡೆಸಿ ಅದನ್ನು ಒದಗಿಸಲು ಈ ಕಾರ್ಯಕ್ರಮದಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಆದಿವಾಸಿ ಸಮುದಾಯಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಎಂಬ ಅಪೌಷ್ಟಿಕ ಸಮಸ್ಯೆಯಿಂದ ಸಮುದಾಯದಲ್ಲಿ ಕೆಲವರು ಅಸಹಜ ಸಾವಿಗೆ ಬಲಿಯಾಗುತ್ತಿದ್ದು, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸುವುದರೊಂದಿಗೆ
ಸಮುದಾಯಗಳಿಗೆ ಶಾಲೆ ಹಾಗೂ ಅಂಗನವಾಡಿಗಳ ಅವಶ್ಯಕತೆ ಇದ್ದಲ್ಲಿ ಆ ವ್ಯಾಪ್ತಿಯಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಆರೋಗ್ಯ ತಪಾಸಣೆಗೆ ಮನೆ ಮನೆಗೆ ಭೇಟಿ ನೀಡುವ ಆರೋಗ್ಯ ಅಧಿಕಾರಿಗಳಿಗೆ ಸಮುದಾಯದ ಮುಖಂಡರು ಹಾಗೂ ಪ್ರತಿಯೊಬ್ಬ ಸಮುದಾಯದವ ರು ಸೂಕ್ತ ಮಾಹಿತಿ ನೀಡುವುದರೊಂದಿಗೆ ಸಹಕರಿಸ ಬೇಕು. ಕೊರಗ ಜನಾಂಗದ ಜನರು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ವ್ಯಕ್ತ ಪಡಿಸಿ, ಮೂಲಭೂತ ವ್ಯವಸ್ಥೆ ಹಾಗೂ ತಮಗಿರುವ ಯೋಜನೆಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾಧ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಆರೋಗ್ಯ ಕಾರ್ಡ್ ಗಳನ್ನು ಸಮುದಾಯದ ಜನರಿಗೆ ವಿತರಿಸಲಾಯಿತು.

ಕಾಪು ತಾಲೂಕು ತಹಶೀಲ್ದಾರ್ ಪ್ರತಿಭಾ, ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಸದಸ್ಯೆ ವನಿತಾ ಆಚಾರ್ಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮ್ ರಾವ್., ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಕಾಪು ವೈದ್ಯಾಧಿಕಾರಿ ಡಾ.ರೋಶನಿ ಪುಂಜ, ಇ .ಓ ಜೇಮ್ಸ್ ಡಿ ಸಿಲ್ವ , ಕೊರಗ ಸಮುದಾಯದವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕುಷ್ಠ ರೋಗ ನಿವಾರಣಾ ಅಧಿಕಾರಿ ಡಾ.ಲತಾ ನಾಯಕ್ ಸ್ವಾಗತಿಸಿದರೆ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಶಿಧರ್ ಹೆಚ್ ನಿರೂಪಿಸಿದರೆ, ಜಿಲ್ಲಾ ಉಪ ಆರೋಗ್ಯ ಶಿಕ್ಷಣ ಅಧಿಕಾರಿ ಚಂದ್ರಕಲಾ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!