ಗ್ಯಾರಂಟಿಗಳ ಅಸಮರ್ಪಕ ಅನುಷ್ಠಾನ- ಜನತೆ ಕಾಂಗ್ರೆಸ್ ಮುಖಂಡರ ತಲೆ ಬೋಳಿಸಿದರೂ ಆಶ್ಚರ್ಯವಿಲ್ಲ: ಕೆ. ರಾಘವೇಂದ್ರ ಕಿಣಿ

ಉಡುಪಿ: ಪಂಚ ಗ್ಯಾರoಟಿಗಳ ಆಮಿಷವೊಡ್ಡಿ ಅಧಿಕಾರಕ್ಕೇರಿದ ಕಾಂಗ್ರೆಸ್ ಗ್ಯಾರಂಟಿಗಳ ಅಸಮರ್ಪಕ ಅನುಷ್ಠಾನದಿಂದ ಜನತೆಯ ಆಕ್ರೋಶಕ್ಕೆ ಗುರಿಯಾಗಿದೆ. ಕಾಂಗ್ರೆಸ್ಸಿನ ಗೋಸುoಬೆತನದ ನಡೆಯಿಂದ ರೋಸಿ ಹೋಗಿರುವ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರ ತಲೆ ಬೋಳಿಸಿದರೂ ಆಶ್ಚರ್ಯವಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಐದೂ ಉಚಿತ ಗ್ಯಾರಂಟಿಗಳನ್ನು ಯಾವುದೇ ಬದಲಾವಣೆ ಇಲ್ಲದೆ ಯಥಾವತ್ತಾಗಿ ಜಾರಿಗೆ ತಂದಲ್ಲಿ ತನ್ನ ತಲೆ ಬೋಳಿಸುವುದಾಗಿ ಹೇಳಿಕೆ ನೀಡಿದ್ದ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ತನ್ನ ಮಾತಿಗೆ ಈಗಲೂ ಬದ್ದರಾಗಿದ್ದಾರೆ. ಆದರೆ ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಐದೂ ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬಳಿಕ ಯೂ ಟರ್ನ್ ಹೊಡೆದು ಎಲ್ಲಾ ಗ್ಯಾರಂಟಿಗಳಿಗೆ ಹಲವಾರು ಶರತ್ತುಗಳನ್ನು ವಿಧಿಸಿ ಕೊಟ್ಟ ಮಾತು ತಪ್ಪಿರುವ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಜಿಲ್ಲಾಧ್ಯಕ್ಷರು ನೀಡಿದ ಹೇಳಿಕೆಯನ್ನು ಕೆದಕಲು ಕಾಂಗ್ರೆಸ್ಸಿಗರಿಗೆ ಯಾವುದೇ ನೈತಿಕತೆ ಉಳಿದಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ತಿಳಿಸಿದ್ದಾರೆ.

ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಖಜಾನೆಯನ್ನು ಬರಿದಾಗಿಸಿ, ರಾಜ್ಯವನ್ನು ದಿವಾಳಿಯ ಅಂಚಿನತ್ತ ಕೊಂಡೊಯ್ಯುವ ಹಪಾಹಪಿಯಲ್ಲಿರುವ ರಾಜ್ಯ ಸರಕಾರದ ವೈಫಲ್ಯಗಳನ್ನು ಮುಚ್ಚಿ ಹಾಕುವ ಸಲುವಾಗಿ ಕಾಂಗ್ರೆಸ್ ಮುಖಂಡರು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ತಲೆ ಬೋಳಿಸಿಕೊಳ್ಳುವ ಸಲಕರಣೆಗಳನ್ನು ಕಳುಹಿಸಿಕೊಡುತ್ತೇವೆ ಎಂದಿರುವುದು ತಮ್ಮ ಮುಖಕ್ಕೆ ತಾವೇ ಉಗಿದುಕೊಂಡಂತಿದೆ.

ಯಾವುದೇ ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ ಜಾರಿಗೊಳಿಸಲು ಅಸಮರ್ಥವಾಗಿರುವ ರಾಜ್ಯ ಕಾಂಗ್ರೆಸ್ ಸರಕಾರ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಯಾವುದೇ ಶಾಸಕರಿಗೂ ಅನುದಾನದ ಒಂದು ರೂಪಾಯಿ ಚಿಕ್ಕಾಸನ್ನೂ ಬಿಡುಗಡೆ ಮಾಡದ ಅಭಿವೃದ್ಧಿ ವಿರೋಧಿ ರಾಜ್ಯ ಸರಕಾರ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ಪಕ್ಷದ ಸ್ವoತ ನಿಧಿಯನ್ನು ಬಳಸುವ ಬದಲು ರಾಜ್ಯದ ಜನತೆಯ ತೆರಿಗೆ ಹಣವನ್ನು ಫೋಲು ಮಾಡುತ್ತಿರುವುದು ಖಂಡನೀಯ.

ಚುನಾವಣಾ ಪೂರ್ವದಲ್ಲಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಹಿತ ಕಾಂಗ್ರೆಸ್ ಮುಖಂಡರಿಗೆ ಒಂದು ಕಾಳು ಅಕ್ಕಿಯನ್ನು ನೀಡಲೂ ಸಾಧ್ಯವಾಗಿಲ್ಲ. 5 ಕೆಜಿ ಅಕ್ಕಿಯ ಬದಲು ಹಣವನ್ನು ನೀಡುತ್ತೇವೆ ಎಂದರೂ ಸಮರ್ಪಕವಾಗಿ ತಲುಪಿಲ್ಲ. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನೀಡುತ್ತಿರುವ 5 ಕೆಜಿ ಅಕ್ಕಿಯಲ್ಲಿ ಅಯೋಧ್ಯೆಯ ಶ್ರೀ ರಾಮ ಮಂದಿರದ ಮಂತ್ರಾಕ್ಷತೆಯನ್ನು ಹಂಚುತ್ತಿದ್ದಾರೆ ಎಂದು ಲೇವಡಿ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಅಧ:ಪತನದ ಮುನ್ಸೂಚನೆಯಾಗಿದೆ.

ಎಲ್ಲಾ ನಿರುದ್ಯೋಗಿ ಪದವೀಧರರಿಗೆ ಮಾಶಾಸನ ನೀಡುವ ವಾಗ್ದಾನ ಮಾಡಿದ್ದ ಕಾಂಗ್ರೆಸ್ ಅದರಲ್ಲೂ ನಿಯಮ ರೂಪಿಸಿದೆ. ಗೃಹಲಕ್ಷ್ಮಿ ಯೋಜನೆ ಹಳ್ಳ ಹಿಡಿದಿದೆ. ಉಚಿತ ಬಸ್ ಪ್ರಯಾಣ ದುಸ್ತರವಾಗಿದೆ. ಗೃಹ ಜ್ಯೋತಿಯ ಸಲುವಾಗಿ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬರೆಯ ಜೊತೆಗೆ ಅಸಮರ್ಪಕ ವಿದ್ಯುತ್ ಪೂರೈಕೆಯ ಶಾಕ್ ನೀಡಿರುವುದು ವಿಷಾದನೀಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಗ್ಯಾರಂಟಿಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ.

ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿ ನೀಡುತ್ತೇನೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯದ ರೈತರ ಸಾಲು ಸಾಲು ಆತ್ಮಹತ್ಯೆಗಳು ಕಾಣುತ್ತಿಲ್ಲ. ಬರ ಪರಿಹಾರಕ್ಕೆ ನೀಡಲು ಸರಕಾರದಲ್ಲಿ ಹಣ ಹಣಕಾಸಿನ ಬರ ಇದೆ. 500 ವರ್ಷಗಳ ಸುದೀರ್ಘ ಹೋರಾಟ, ತ್ಯಾಗ, ಬಲಿದಾನದ ಪರಿಣಾಮವಾಗಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರದ ಲೋಕಾರ್ಪಣೆಗೆ ಹೋಗಬಾರದೆಂದು ಕಾಂಗ್ರೆಸ್ ತೀರ್ಮಾನಿಸಿರುವುದು ಬಹುಸಂಖ್ಯಾತ ಹಿಂದೂಗಳಿಗೆ ಮಾಡಿದ ಘೋರ ಅಪಮಾನವಾಗಿದೆ. ರಾಜ್ಯದ ಲೂಟಿ, ಭ್ರಷ್ಟಾಚಾರ, ದುರಾಡಳಿತದಿಂದ ಬೇಸತ್ತ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ನೀಡಲಿರುವ ಜನಾದೇಶದ ಸಂದರ್ಭದಲ್ಲಿ ಕಾಂಗ್ರೆಸ್ಸಿಗರಿಗೆ ತಮ್ಮ ತಲೆಯನ್ನು ಬೋಳಿಸಿಕೊಳ್ಳಲು ಬ್ಲೇಡುಗಳು ಸಾಕಾಗಲಿಕ್ಕಿಲ್ಲ ಎಂದು ಕಿಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!