ರಾಜ್ಯ ಸರಕಾರದಿಂದ ಆರೋಗ್ಯ ಸೇವೆಯ ಡಿಜಿಟಲೀಕರಣ: ಡಾ. ಆರತಿ ಕೃಷ್ಣ

ಮಣಿಪಾಲ, ಜ.5: ಭಾರತೀಯ ಸಂಜಾತ ಅಮೆರಿಕನ್‌ ವೈದ್ಯರ ಒಕ್ಕೂಟ (AAPI) ವತಿಯಿಂದ ಮಣಿಪಾಲದ ಫಾರ್ಚೂನ್‌ ವ್ಯಾಲಿವ್ಯೂ ಹೋಟೆಲ್‌ನಲ್ಲಿ ಆಯೋಜಿಸಿದ್ದ ಜಾಗತಿಕ ಆರೋಗ್ಯ ಶೃಂಗಸಭೆಯನ್ನು ಕರ್ನಾಟಕ ಸರ್ಕಾರದ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ರಾಜ್ಯ ಸರಕಾರವು ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಆರೋಗ್ಯ ಸೇವೆಯನ್ನು ಡಿಜಿಟಲೀಕರಣ ಗೊಳಿಸುತ್ತಿದೆ. ಅದೇ ರೀತಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯನ್ನು ಇಟ್ಟಿದೆ ಎಂದರು.

“ಭಾರತೀಯ ಸಂಜಾತ ಅಮೆರಿಕನ್‌ ವೈದ್ಯರ ಒಕ್ಕೂಟವು ಕರ್ನಾಟಕದಲ್ಲಿ ಹೆಲ್ತ್‌ ಸಮ್ಮಿಟ್ ಆಯೋಜಿಸಿದ್ದು, ನನಗೆ ಸಂತಸ ತಂದಿದೆ. ತಂತ್ರಜ್ಞಾನ ಅಭಿವೃದ್ಧಿಗೆ ಸರ್ಕಾರ ಪೂರಕವಾಗಿ ಸಹಕರಿಸಲಿದೆ. ಅಮೆರಿಕದ ಸಹಯೋಗದೊಂದಿಗೆ ರಾಜ್ಯದಲ್ಲಿ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವುದಾಗಿ” ಹೇಳಿದರು. ಅಲ್ಲದೆ ಮಣಿಪಾಲದವಳಾಗಿದ್ದಕ್ಕಾಗಿ ಹೆಮ್ಮೆ ವ್ಯಕ್ತಪಡಿಸಿದರು.

ಐಟಿ ಮತ್ತು ಅವಿಷ್ಕಾರಗಳ ಕೇಂದ್ರವಾಗಿರುವ ಕರ್ನಾಟಕ ಇದೀಗ ಆರೋಗ್ಯ ಕ್ಷೇತ್ರದ ಬಗ್ಗೆಯೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಈ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದ ಅವರು, ಆರೋಗ್ಯ ಕ್ಷೇತ್ರದ ಡಿಜಿಟಲೀಕರಣದಿಂದ ಆಡಳಿತಾಧಿಕಾರಿಗಳು ಹಾಗೂ ನಾಗರಿಕರಿಗೂ ಅನುಕೂಲವಾಗುತ್ತಿದೆ ಎಂದರು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಹೊಸ ಆರೋಗ್ಯ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಗುರುತಿಸಲು, ಮೌಲ್ಯಮಾಪನ ಮಾಡಲು ರಾಜ್ಯವು ಆರೋಗ್ಯ ತಂತ್ರಜ್ಞಾನ ಆವಿಷ್ಕಾರ ಪ್ರಯೋಗಾಲಯ ವನ್ನು ಸ್ಥಾಪಿಸಲು ಸಿದ್ಧವಾಗಿದೆ. ಈ ಸೌಲಭ್ಯವು ಎಲ್ಲಾ ಆರೋಗ್ಯ ತಂತ್ರಜ್ಞಾನ ಸಂಬಂಧಿತ ಉಪ ಕ್ರಮಗಳಿಗೆ ಸಂಪರ್ಕ ಸಾಧಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಭಾರತೀಯ ಸಂಜಾತ ಅಮೆರಿಕನ್‌ ವೈದ್ಯರಒಕ್ಕೂಟದ ಮುಖ್ಯಸ್ಥರಾದ ಡಾ.ಸಂಪತ್‌ ಶಿವಾಂಗಿ, “ಎಎಪಿಐ ಕುರಿತಾಗಿ ವಿವರಿಸಿದ್ದಲ್ಲದೆ ಕರ್ನಾಟಕದಲ್ಲಿ ಮೊದಲ ಬಾರಿ ಸಮಾವೇಶ ಏರ್ಪಡಿಸಿದರ ಕುರಿತಾಗಿ ವಿವರಣೆ ನೀಡಿದರು. ಅಲ್ಲದೆ ಒಂದೇ ವೇದಿಕೆಯಲ್ಲಿ ವಾಸಂತಿ ಪೈ ಹಾಗೂ ಅವರ ಪುತ್ರ ಎಂಇಎಂಜಿ ಮುಖ್ಯಸ್ಥ ಡಾ.ರಂಜನ್‌ ಪೈ ಅವರ ಉಪಸ್ಥಿತಿಯನ್ನು ಪ್ರಶಂಸಿಸಿದರು”.

ಎಎಪಿಐ ಯುಎಸ್ ಅಧ್ಯಕ್ಷರು ಡಾ. ಅಂಜನಾ ಸಮದ್ದಾರ್‌ ಮಾತನಾಡಿ “ಅಮೆರಿಕದಲ್ಲಿ ಅತಿದೊಡ್ಡ ಸಂಖ್ಯೆಯ ಭಾರತೀಯರು ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಎಎಪಿಐ ಈ ಜಾಗತಿಕ ಆರೋಗ್ಯ ಸಮ್ಮೇಳನವನ್ನು ಆಯೋಜಿಸಿದ್ದು, ವಿನೂತನ ತಂತ್ರಜ್ಞಾನಗಳ ಪ್ರಸ್ತುತತೆಯನ್ನು ಚರ್ಚಿಸುವ ಉದ್ದೇಶ ಹೊಂದಿದೆ. ಈಗಾಗಲೆ ಜಗತ್ತು ಎಐ ತಂತ್ರಜ್ಞಾನದ ಕಡೆಗೆ ದೃಷ್ಟಿ ನೆಟ್ಟಿದ್ದು, ಆರೋಗ್ಯ ಕ್ಷೇತ್ರದಲ್ಲಿಯೂ ಅದರ ಸಾಧ್ಯತೆಗಳನ್ನು ಈ ಸಮಾವೇಶದಲ್ಲಿ ಪ್ರಸ್ತಾಪಿಸಲಾಗುತ್ತದೆ. ಎಎಪಿಐ ಮುಖ್ಯ ಉದ್ದೇಶವೇ ಏಮ್ಸ್‌ ಹಾಗೂ ಮಣಿಪಾಲದಂತಹ ಪ್ರತಿಷ್ಟಿತ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿ ಕಾರ್ಯ ನಿರ್ವಹಿಸುವುದಾಗಿದೆ” ಎಂದು ಹೇಳಿದರು.

ಇದೇ ವೇಳೆ ಮಣಿಪಾಲ ಶಿಕ್ಷಣ ಸಂಸ್ಥೆಯ (ಮಾಹೆ) ಕುಲಪತಿ ಡಾ. ರಾಮದಾಸ್‌ ಪೈ ಅವರಿಗೆ ಜೀವಮಾನ ಶ್ರೇಷ್ಠ ಗೌರವ ನೀಡಲಾಯಿತು. ಅವರ ಅನುಪಸ್ಥಿತಿಯಲ್ಲಿ ಗೌರವ ಸ್ವೀಕರಿಸಿದ ವಾಸಂತಿ ಪೈ ಅವರು “ರಾಮದಾಸ ಪೈ ಅವರ ಕುರಿತಾಗಿ ಮತ್ತು ಅವರ ಸಾಧನೆಗಳ ಕುರಿತಾಗಿ ಮಾತನಾಡಿದರು. ಅಲ್ಲದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೈದ್ಯರೆಲ್ಲರಿಗೂ ಮಣಿಪಾಲ ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಿದರು.

ಇದೇ ವೇಳೆ ಮಣಿಪಾಲ್ ನ 17ನೇ ಎಎಪಿಐ ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್ ನ ಕುರಿತಾದ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು.

ವೇದಿಕೆಯಲ್ಲಿ ಜಾಗತಿಕ ಆರೋಗ್ಯ ಸಮ್ಮಿಟ್‌ನ ಭಾರತೀಯ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ ವೆಂಕಟೇಶ್‌, ಮಾಹೆಯ ಪ್ರೊ. ಚಾನ್ಸಲರ್‌ ಡಾ. ಹೆಚ್.ಎಸ್.‌ ಬಲ್ಲಾಳ್ ಮತ್ತು ಎಂಇಎಂಜಿ ಮುಖ್ಯಸ್ಥ ಡಾ. ರಂಜನ್‌ ಪೈ ಉಪಸ್ಥಿತರಿದ್ದರು.

ವೈದ್ಯಕೀಯ ಲೋಕದ ವಿಚಾರ ವಿನಿಮಯ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ಸಮ್ಮಿಲನಗೊಂಡು ಶುಕ್ರವಾರದ ಕಾರ್ಯಕ್ರಮ ಗಮನ ಸೆಳೆಯಿತು. ವಿಚಾರ ಸಂಕೀರಣವು ವೈದ್ಯಕೀಯ ಲೋಕದ ಆಕರ್ಷಕ ಮಾಹಿತಿಯನ್ನು ಪ್ರಸ್ತುತ ಪಡಿಸುವ ಸರಣಿಗೆ ಸಾಕ್ಷಿಯಾಯಿತು. ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ಅಂಶಗಳ ಪರಿಶೀಲನೆಗಾಗಿ ವೈದ್ಯಕೀಯ ವೃತ್ತಿಪರರು ಹಾಗೂ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿತು.

ಡಾ. ಅಮಿತ್‌ ಚಕ್ರವರ್ತಿ ಅವರ “ಪಿಎಸ್‌ಎ ಪರೀಕ್ಷೆ – ಇಕ್ಕಟ್ಟುಗಳು ಮತ್ತು ಗೊಂದಲಗಳು” ಎಂಬ ವಿಷಯದ ಚರ್ಚೆಯೊಂದಿಗೆ ಶುಕ್ರವಾರದ ಬೆಳಗಿನ ಅವಧಿ ಪ್ರಾರಂಭ ಆಯಿತು. ಡಾ.ಟಾಮ್ ದೇವಾಸಿಯಾ ಅವರು “ಇಂಟ್ರಾಕಾರ್ನರಿ ಇಮೇಜಿಂಗ್‌ ಇನ್‌ ಕಾಂಪ್ಲೆಕ್ಸ್‌ ಕೊರೊನರಿ ಇಂಟ್ರವೆನ್ಶನ್ಸ್‌ : ಇಂಡಿಯನ್‌ ಟ್ರೆಂಡ್ಸ್‌ ವಿಥ್‌ ಎ ಫೋಕಸ್‌ ಆನ್‌ ಮಣಿಪಾಲ್‌ ಎಕ್ಸ್‌ಪೀರಿಯನ್ಸ್‌” ಎಂಬ ವಿಚಾರದಲ್ಲಿ ಮಾಹಿತಿಯನ್ನು ನೀಡಿದರು. ಇವುಗಳ ಜೊತೆ ಡಾ. ದಯಾನಂದ್‌ ನಾಯಕ್‌ ಅವರಿಂದ “SGLT2-1 & HFrEF”, ಡಾ. ರಾಜ್ ಆಲಪ್ಪನ್‌ರಿಂದ “ಕಾರ್ಡಿಯೋ-ರೀನಲ್ ಸಿಂಡ್ರೋಮ್ ವಿಥ್ ನ್ಯೂವರ್‌ ಥೆರಪ್ಯೂಟಿಕ್ ಅಪ್ರೋಚಸ್‌” ಮತ್ತು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಡಾ. ರಾಮದಾಸ್ ಜಿ ಪೈ ಅವರಿಂದ “ಟ್ರಾನ್ಸ್‌ಕ್ಯುಟೇನಿಯಸ್ ವಾಲ್ವ್ ರಿಪ್ಲೇಸ್‌ಮೆಂಟ್ ಮತ್ತು ಎಐ ತಂತ್ರಜ್ಞಾನ” ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆದವು.

ನಂತರ ಜೋಯಿಸ್ ಕೃಷ್ಣಮೂರ್ತಿ ಅವರು “ಅಮೆರಿಕ ಮತ್ತು ಭಾರತ ಝೂನೋಟಿಕ್ ಕಾಯಿಲೆಗಳ ಹೋಲಿಕೆ”ಯ ವಿಷಯದ ಬಗ್ಗೆ ಆಕರ್ಷಕ ಮಾಹಿತಿಯನ್ನು ನೀಡಿದರು. ಬಳಿಕ ಪ್ರೊ. ಬಂಟ್ವಾಳ ಸುರೇಶ್ ಬಾಳಿಗಾ ಅವರು “ಇನ್ನೋವೇಟಿವ್ ಎಐ ಮ್ಯಾನೆಜ್ಮೆಂಟ್‌ ಆಫ್ ಡಯಾಬಿಟಿಸ್ ಮೆಲ್ಲಿಟಸ್” ವಿಚಾರವನ್ನು ಪ್ರಸ್ತುತಪಡಿಸಿದರು. ಇನ್ನು, ಡಾ. ಶಿರಾನ್ ಶೆಟ್ಟಿ ಅವರು “ಜಿಐ ಎಂಡೋಸ್ಕೋಪಿಯಲ್ಲಿ ಮುಂದುವರಿದ ಮತ್ತು ಭವಿಷ್ಯದ ಪ್ರವೃತ್ತಿಗಳು” ಮತ್ತು ಡಾ. ವಾಣಿ ವಿಜಯ್‌ಕುಮಾರ್ ಅವರು “ಮ್ಯಯೋಕಾರ್ಡಿಯಲ್ ಸ್ಪೆಕ್ಟ್ ಮತ್ತು ಪಿಇಟಿ ಪರ್ಫ್ಯೂಷನ್ ಇಮೇಜಿಂಗ್‌ನಲ್ಲಿ ಎಐನ ಹೆಚ್ಚುವರಿ ಮೌಲ್ಯ” ಎಂಬ ವಿಚಾರಗಳ ಬಗ್ಗೆ ಮಾತನಾಡಿದರೆ, ಡಾ. ಕಾರ್ತಿಕ್ ಉಡುಪ ಅವರು “ಇಮ್ಯುನೋಥೆರಪಿಯ ತತ್ವಗಳು ಮತ್ತು ಕ್ಲಿನಿಕಲ್ ಅಭ್ಯಾಸದಲ್ಲಿ ಅದರ ಬಳಕೆ” ಬಗ್ಗೆ ಮಾತನಾಡಿದರು.

ಗಮನ ಸೆಳೆದ ಸಾಂಸ್ಕೃತಿಕ ಸಂಜೆ
ಸಂಜೆ “ಕಾಂತಾರ” ಖ್ಯಾತಿಯ ಮಾನಸಿ ಸುಧೀರ್‌ ನೇತೃತ್ವದ ತಂಡದಿಂದ ಆಕರ್ಷಕ ಕಾವ್ಯಾನಭಿಯ ಪ್ರದರ್ಶನ ನೆರೆದವರನ್ನು ಗಮನ ಸೆಳೆಯಿತು. ಇದರ ಜೊತೆ ಅನಿರುದ್ಧ್ ಶಾಸ್ತ್ರಿ ಅವರ ಸಂಗೀತ ಸಂಜೆಯೊಂದಿಗೆ ದಿನದ ಕಾರ್ಯಕ್ರಮಗಳಿಗೆ ತೆರೆಬಿತ್ತು. ಎಎಪಿಐನ ವೈದ್ಯಕೀಯ ವಿಚಾರ ಸಂಕೀರಣವು ಶನಿವಾರ ಅದ್ಧೂರಿಯಾಗಿ ಸಮಾರೋಪಗೊಳ್ಳಲಿದ್ದು, ಕೊನೆಯ ದಿನದಂದು ಇನ್ನೂ ಉತ್ತಮ ಮಾಹಿತಿಯುಳ್ಳ ಚರ್ಚೆಗಳು ಮತ್ತು ಸಾಂಸ್ಕೃತಿಕ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

Leave a Reply

Your email address will not be published. Required fields are marked *

error: Content is protected !!