ತುಳು ಭಾಷೆಗೆ ಮಾನ್ಯತೆ ವಿಧಾನ ಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಹೋರಾಟಕ್ಕೆ ಸಿದ್ಧನಿದ್ದೇನೆ- ಯಶ್ಪಾಲ್

ಉಡುಪಿ: ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಗೆ ಸಾಕಷ್ಟು ಹೋರಾಟ ನಡೆಸಲಾಗಿದ್ದರೂ ಅದು ಸಾಧ್ಯವಾಗದಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ತಾನು ಕರಾವಳಿಯ ಇತರ ಶಾಸಕರೊಂದಿಗೆ ವಿಧಾನಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಹೋರಾಟ ನಡೆಸುವುದಕ್ಕೆ ಸಿದ್ಧನಿದ್ದೇನೆ ಎಂದು ಉಡುಪಿಯ ನೂತನ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.

ಅವರು ಉಡುಪಿ ತುಳುಕೂಟದ ವತಿಯಿಂದ ನಡೆದ 28ನೇ ವರ್ಷದ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ಬಾರಿಯ ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ಕಾವೂರಿನ ಕನ್ನಡ – ತುಳು ಸಾಹಿತಿ ಯಶೋಧಾ ಮೋಹನ್ ಅವರ ‘ದೇರಮಾಮುನ ದೂರನೋಟಲು’ ಕಾಂದಬರಿಗೆ ಪ್ರದಾನ ಮಾಡಿ, ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಶಾಸಕ ಯಶಪಾಲ್ ಸುವರ್ಣ, ಯು.ಎಸ್.ಪಣಿಯಾಡಿ ಅವರ ಪುತ್ರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಹರಿಣಿ, ಗಿನ್ನೆಸ್ ದಾಖಲೆಯ ಯೋಗಪಟು ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು. ಜನಪದ ವಿದ್ವಾಂಸ ಡಾ.ಗಣನಾಥ್ ಎಕ್ಕಾರ್ ಅವರು ಪ್ರಶಸ್ತಿ ಪುರಸ್ಕೃತ ಕೃತಿಯನ್ನು ಪರಿಚಯಿಸಿದರು, ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ತುಳುಕೂಟದ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಅಖಿಲ ಭಾರತ ತುಳು ಒಕ್ಕೂಟದ ಸಂಚಾಲಕಿ ವಿಜಯಲಕ್ಷ್ಮೀ ಶೆಟ್ಟಿ, ಸಮಾಜಸೇವಕ ಯು.ವಿಶ್ವನಾಥ ಶೆಣೈ, ಕೂಟದ ಪ್ರ.ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಎಂ.ಜಿ. ಚೈತನ್ಯ ವೇದಿಕೆಯಲ್ಲಿದ್ದರು. ಯಶೋದಾ ಕೇಶವ್ ಮತ್ತು ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!