‘ನಾವೇನೂ ಬಳೆ ತೊಟ್ಟಿಲ್ಲ’ ಎಂಬುದು ಆಡು ಭಾಷೆ- ಜಿಲ್ಲಾಧ್ಯಕ್ಷರ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ- ವೀಣಾ ಶೆಟ್ಟಿ

ಉಡುಪಿ: ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್. ಮತ್ತು ಭಜರಂಗ ದಳವನ್ನು ನಿಷೇಧಿಸುವ ಬಗ್ಗೆ ಮಾಡಿರುವ ಪ್ರಸ್ತಾಪವನ್ನು ಖಂಡಿಸುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಆಡು ಭಾಷೆಯಲ್ಲಿ ‘ನಾವೇನೂ ಬಳೆ ತೊಟ್ಟಿಲ್ಲ’ ಎಂದಿರುವ ಕ್ಷುಲ್ಲಕ ವಿಚಾರವನ್ನು ದೊಡ್ಡ ವಿವಾದವನ್ನಾಗಿಸಲು ಹೊರಟಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆಯವರ ನಡೆಯನ್ನು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತೀಕ್ಷ್ಣವಾಗಿ ಖಂಡಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ ಎಂದು ತಿರುಗೇಟು ನೀಡಿದ್ದಾರೆ.

ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಮೋಸದಿಂದ ಚುನಾವಣೆಯನ್ನು ಗೆದ್ದಿರುವ ಕಾಂಗ್ರೆಸ್ ಇದೀಗ ಗ್ಯಾರಂಟಿ ಕಾರ್ಡಿನ ಭರವಸೆಗಳನ್ನು ಜಾರಿ ಮಾಡಲಾಗದೇ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಕ್ಷುಲ್ಲಕ ವಿಚಾರಗಳನ್ನು ಅನಾವಶ್ಯಕವಾಗಿ ಮುನ್ನೆಲೆಗೆ ತರುತ್ತಿದೆ.

ಹಿಂದೂ ಸಂಸ್ಕೃತಿಯ ಆಚಾರ ವಿಚಾರದಲ್ಲಿ ಮಹಿಳೆಯರಿಗೆ ಬಳೆಯ ಪ್ರಾಮುಖ್ಯತೆ ಏನು ಎಂಬುದನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಈ ಬಗ್ಗೆ ಪಾಠ ಮಾಡಲು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ಸಿಗೆ ಯಾವ ನೈತಿಕತೆಯೂ ಇಲ್ಲ.

ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಐದೂ ಕ್ಷೇತ್ರಗಳಲ್ಲಿ ಹೀನಾಯ ಸೋಲನ್ನು ಅನುಭವಿಸುವ ಮೂಲಕ ವಿಚಲಿತಗೊಂಡಿದೆ. ಇದರ ಪರಿಣಾಮವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಿಗೆ ಹತಾಶ ಭಾವದಿಂದ ಹಿಂದುತ್ವದ ನೆನಪಾಗಿದೆ.

ಮಹಿಳೆಯರ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಈ ಹಿಂದೆ ಉಡುಪಿ ನಗರ ಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯರು ಮಹಿಳಾ ಸದಸ್ಯೆಯನ್ನು ಯಾವ ರೀತಿ ಅವಮಾನಕರವಾಗಿ ನಡೆಸಿಕೊಂಡಿದ್ದಾರೆ ಎಂಬುದನ್ನು ಮೊದಲು ನೆನಪಿಸಿಕೊಳ್ಳುವುದು ಸೂಕ್ತ.

ಹೌದು, ಬಿಜೆಪಿ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಘೋಷಿಸಿರುವ 5 ಉಚಿತಗಳ ಗ್ಯಾರಂಟಿಗಳನ್ನು 5 ವರ್ಷ ಪೂರ್ತಿ ಯಥಾವತ್ತಾಗಿ ಜಾರಿಗೊಳಿಸಿದರೆ ತಲೆ ಬೋಳಿಸಿ ಕೆಪಿಸಿಸಿ ಕಛೇರಿಯ ಎದುರು ಕುಳಿತುಕೊಳ್ಳುತ್ತೇನೆ ಅಂದಿದ್ದಾರೆ. ಆದರೆ ಅಂತಹ ಪ್ರಮೇಯ ಖಂಡಿತವಾಗಿ ಬರಲಾರದು. ಕಾಂಗ್ರೆಸ್ಸಿಗೆ ಇನ್ನೂ ಮೊದಲನೇ ವರ್ಷಕ್ಕೇ ಗ್ಯಾರಂಟಿಗಳ ಜಾರಿಗೆ ಮುಹೂರ್ತ ಸಿಕ್ಕಿಲ್ಲ.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಈಡೇರಿಸುವ ಜೊತೆಗೆ ವಿನೂತನ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ. ಕ್ಷುಲ್ಲಕ ವಿಚಾರಗಳನ್ನು ಕೆದಕುತ್ತಾ ಜನರ ದಾರಿ ತಪ್ಪಿಸುವ ಬದಲು ಕಾಂಗ್ರೆಸ್ ಜನತೆಗೆ ನೀಡಿರುವ 5 ಉಚಿತಗಳ ಗ್ಯಾರಂಟಿಗಳನ್ನು ಅತಿ ಶೀಘ್ರವಾಗಿ ಜಾರಿಗೊಳಿಸಲು ಮುಂದಾಗುವುದು ಸೂಕ್ತ ಎಂದು ವೀಣಾ ಎಸ್. ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!