ಮಂಗಳೂರು: ಮೊಬೈಲ್’ಗಾಗಿ ಚಾಲಕನ ಹತ್ಯೆ-  ನಾಲ್ವರ ಬಂಧನ

ಮಂಗಳೂರು, ಏ.19: ನಗರದ ಸ್ಟೇಟ್ ಬ್ಯಾಂಕ್‌‌ನಲ್ಲಿರುವ ಪುಟ್ಬಾಲ್ ಮೈದಾನದ ಬಳಿ ಮಲಗಿದ್ದ ಕಾರು ಚಾಲಕ ಜನಾರ್ದನ ಪೂಜಾರಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು‌ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳ ಮೂಲದ ಪ್ರಶಾಂತ್ (40), ಕುಶಲನಗರದ ಜಿ.ಕೆ ರವಿಕುಮಾರ್ @ ನಂದೀಶ (38), ಕೊಣಾಜೆಯ ವಿಜಯ ಕುಟಿನ್ಹಾ (28) ,ಬಂಟ್ವಾಳದ ಶರತ್.ವಿ (36) ಎಂದು ಗುರುತಿಸಲಾಗಿದೆ. ಏ.18 ರಂದು ಸಂಜೆ ಸ್ಟೇಟ್ ಬ್ಯಾಂಕ್ ನಲ್ಲಿರುವ ಪುಟ್ಬಾಲ್ ಮೈದಾನದ ಬಳಿ ಮಲಗಿದ್ದ ಜನಾರ್ದನ ಪೂಜಾರಿ ಅವರ ಹತ್ತಿರ ಬಂದು ಆರೋಪಿಗಳು ಜನಾರ್ದನ ಅವರ ಮೊಬೈಲ್‌ ಕೊಡುವಂತೆ ಹೇಳಿದ್ದಾರೆ. ಇದೇ ಮಾತಿಗೆ ಆರೋಪಿಗಳ ಜೊತೆ ಘರ್ಷಣೆ ಉಂಟಾಗಿದೆ.

ಈ ವೇಳೆ ಒಬ್ಬಾತ ತನ್ನ ಕಾಲಿನಿಂದ ಜನಾರ್ದನ ಪೂಜಾರಿ ಅವರ ಎದೆಗೆ ಒದ್ದಾಗ ಅವರು ಸುಮಾರು 6 ಅಡಿ ಮೇಲಿನಿಂದ ಕೆಳಗಡೆ ಬಿದ್ದಿದ್ದರು. ಬಳಿಕ ಅಲ್ಲೂ ಹೋಗಿ ಆರೋಪಿಗಳು ಜನಾರ್ದನ ಪೂಜಾರಿಗೆ ಹಲ್ಲೆ ಮಾಡಿ ತಮ್ಮ ಕಾಲಿನಿಂದ ತುಳಿದು ಕೊಲೆಯನ್ನು ಮಾಡಿದ್ದಾರೆ. ಈ ಬಗ್ಗೆ ಜನಾರ್ದನ ಪೂಜಾರಿ ರವರ ಅಣ್ಣ ಉಮೇಶ್ ಪೂಜಾರಿ ದೂರು ನೀಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಸುಲಿಗೆ ಉದ್ದೇಶದಿಂದಲೇ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಬಂಧಿತರಾಗಿರುವ ಆರೋಪಿಗಳ ಮೇಲೆ ಈಗಾಗಲೇ ಹಲವು ಕ್ರಿಮಿನಲ್‌ ಕೇಸ್‌ ದಾಖಲಾಗಿದ್ದು,ಜಿ.ಕೆ. ರವಿ ಕುಮಾರ್ ಎಂಬಾತನ ಮೇಲೆ 2009 ರಲ್ಲಿ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಶರತ್ ಎಂಬಾತನ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯಲ್ಲಿ 2007 ರಲ್ಲಿ ಮನೆ ಕಳವು ಪ್ರಕರಣ, ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ 2022 ರಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ. ಈತ ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾಗಿದ್ದ. ಆರೋಪಿ ವಿಜಯ ಕುಟಿನ್ಹಾ ಎಂಬಾತನ ಮೇಲೆ ಕೋಣಾಜೆ ಪೊಲೀಸ್‌ ಠಾಣೆಯಲ್ಲಿ 2022 ರಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!