ಮಣಿಪಾಲದ ಅಂಗಡಿಗಳಿಗೆ ದಾಳಿ- 1.55 ಲ. ರೂ. ಮೌಲ್ಯದ ವಿದೇಶಿ ಹಾಗೂ ನಿಷೇಧಿತ ಇ- ಸಿಗರೇಟ್ ಗಳು ವಶ

ಮಣಿಪಾಲ ಎ.19 (ಉಡುಪಿ ಟೈಮ್ಸ್ ವರದಿ): ಎರಡು ದಿನಗಳ ಹಿಂದೆಯಷ್ಟೇ ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ 4.79 ಲಕ್ಷ ರೂ. ಮೌಲ್ಯದ ಅಕ್ರಮ ಸಿಗರೇಟ್ ಪತ್ತೆಯಾದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರ ಸೂಚನೆ ಮೇರೆಗೆ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಮಣಿಪಾಲದ ಎರಡು ಅಂಗಡಿಗೆ ದಾಳಿ ನಡೆಸಿ 1.55 ಲಕ್ಷ ರೂ ಮೌಲ್ಯದ ನಿಷೇದಿತ ಇ- ಸಿಗರೇಟ್ ಹಾಗೂ ವಿದೇಶಿ ಕಂಪೆನಿಯ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಇ- ಸಿಗರೇಟ್ ಸಂಗ್ರಹ ಹಾಗೂ ವಿದೇಶಿ ಕಂಪನಿಯ ಸಿಗರೇಟುಗಳನ್ನು ಎಂ.ಆರ್.ಪಿ ದರ ನಮೂದಿಸದೆ ಕೋಟ್ಪಾ ಕಾಯಿದೆ ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಣಿಪಾಲದಲ್ಲಿನ ಶೀಶಾ ಪ್ಯಾರಡೈಸ್ ಮತ್ತು ಸ್ಮೋಕ್ ಕೋ ಎಂಬ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಎರಡೂ ಅಂಗಡಿಗಳಿಂದ ಸುಮಾರು 1,50,000 ರೂ ಮೌಲ್ಯದ 113 ವಿವಿಧ ಕಂಪನಿಯ ನಿಷೇದಿತ ಇ- ಸಿಗರೇಟ್ ಗಳು ಹಾಗೂ 5,000 ರೂ ಮೌಲ್ಯದ ವಿದೇಶಿ ಕಂಪನಿಯ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಕಾಸರಗೋಡು ಜಿಲ್ಲೆಯ ಶೀಶಾ ಪ್ಯಾರಡೈಸ್ ಅಂಗಡಿ ಮಾಲೀಕ ಅನ್ಸಾರ್ ಹಾಗೂ ಸ್ಮೋಕ್ ಕೋ ಅಂಗಡಿಯ ಮಾಲೀಕ ಮುಫೀನ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿಚಾರಣೆಯ ವೇಳೆ ಐ.ಟಿ.ಸಿ ಕಂಪನಿಯ ನಕಲಿ ಸಿಗರೇಟು ಗಳನ್ನು ತಯಾರಿಸಿ ಮಾರಾಟ ಮಾಡಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಅನ್ಸಾರ್ ಭಾಗಿಯಾಗಿದ್ದು, ಅದೇ ರೀತಿ ಮುಫೀನ್ ಎಂಬುವವನು ಮುಂಬೈನ ಕ್ರಾಫ್ಟ್ ಮಾರುಕಟ್ಟೆಯಲ್ಲಿ ನಿಷೇದಿತ ಇ- ಸಿಗರೇಟುಗಳನ್ನು ಖರೀದಿಸಿರುವುದಾಗಿ ತಿಳಿದು ಬಂದಿದೆ.

ಸದ್ಯ ಸರ್ಕಾರವು ಇ-ಸಿಗರೇಟ್‍ನ್ನು ನಿಷೇಧ ಮಾಡಿದ್ದು, ಐ.ಟಿ.ಸಿ ಕಂಪೆನಿಯ ನಕಲಿ ಗೋಲ್ಡ್ ಫ್ಲೇಕ್ ಸಿಗರೇಟ್ , ವಿದೇಶಿ ಕಂಪನಿಯ ಸಿಗರೇಟ್ ಹಾಗೂ ನಿಷೇಧಿತ ಇ- ಸಿಗರೇಟ್ ಗಳನ್ನು ಪಡುಬಿದ್ರಿ ಮತ್ತು ಮಣಿಪಾಲದಲ್ಲಿ ಪತ್ತೆ ಹಚ್ಚಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ಹಾಗೂ ಪಡುಬಿದ್ರೆ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುತ್ತದೆ. ಈ 3 ಪ್ರಕರಣಗಳಲ್ಲಿ 6,34,970 ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು 4 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದ ಕುರಿತು ತನಿಖೆ ಮುಂದುವರೆದಿದ್ದು, ಸಾರ್ವಜನಿಕರಿಗೆ ನಿಷೇದಿತ ಇ- ಸಿಗರೇಟು ಹಾಗೂ ನಕಲಿ ಸಿಗರೇಟುಗಳ ಮಾರಾಟ ಮಾಡುವ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾನ್ಯ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!