ಕೊರಿಯರ್‌ ಕಂಪೆನಿಯ ಲಿಂಕ್‌ ಕಳುಹಿಸಿ ಖಾತೆಯಲ್ಲಿದ್ದ ರೂ.72 ಸಾವಿರ ಕನ್ನ

ಮಂಗಳೂರು: ಅಪರಿಚಿತ ವ್ಯಕ್ತಿಯೋರ್ವ ಕೊರಿಯರ್‌ ಕಂಪೆನಿಯವನೆಂದು ನಂಬಿಸಿ ಲಿಂಕ್‌ ಕಳುಹಿಸಿ 72,444 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರ ವ್ಯಕ್ತಿಯೋರ್ವರು ಪಾರ್ಸೆಲ್‌ಗಾಗಿ ಗೂಗಲ್‌ನಲ್ಲಿ ಕೊರಿಯರ್‌ ಕಂಪೆನಿಯೊಂದರ ಬಗ್ಗೆ ಮಾಹಿತಿ ಹುಡುಕಾಡುತ್ತಿದ್ದಾಗ ಅವರಿಗೆ 9827698553 ಮೊಬೈಲ್‌ ಸಂಖ್ಯೆ ದೊರೆತಿತ್ತು. ಆ ಸಂಖ್ಯೆಗೆ ಕರೆ ಮಾಡಿದಾಗ ಆತ ಕೊರಿಯರ್‌ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿ ಲಿಂಕ್‌ವೊಂದನ್ನು ಕಳುಹಿಸಿದ್ದ. ಅದರ ಮೂಲಕ ಗೂಗಲ್‌ ಪೇನಲ್ಲಿ 5 ರೂ. ಕಳುಹಿಸುವಂತೆ ತಿಳಿಸಿದ್ದ. ದೂರುದಾರ ವ್ಯಕ್ತಿ ಹಣ ಪಾವತಿಸಿದ್ದರು. ಆದರೆ ಪಾರ್ಸೆಲ್‌ ಕೊಂಡು ಹೋಗಲು ಯಾರೂ ಬಂದಿರಲಿಲ್ಲ.

ಎ. 15ರಂದು ಅವರ ಬ್ಯಾಂಕ್‌ ಖಾತೆಗೆ ಪರ್ಸನಲ್‌ ಲೋನ್‌ ಮಂಜೂರಾದ ಸಂದೇಶ ಬಂದಿತ್ತು. ಅವರು ಖಾತೆಯನ್ನು ಪರಿಶೀಲಿಸಿದಾಗ ಅವರ ಖಾತೆಯಿಂದ ಒಟ್ಟು 72,444 ರೂ. ಕಡಿತಗೊಂಡಿತ್ತು. ಕೊರಿಯರ್‌ ಕಂಪೆನಿಯವನೆಂದು ಪರಿಚಯಿಸಿಕೊಂಡ ವ್ಯಕ್ತಿ ಕಳುಹಿಸಿದ ಲಿಂಕ್‌ಗೆ ಬ್ಯಾಂಕ್‌ನ ವಿವರ ನೀಡಿದ್ದರಿಂದ ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!