ಕಾರ್ಕಳ: ಲಕ್ಷ್ಮೀಗೋಲ್ಡ್ ಜ್ಯುವೆಲ್ಲರಿ ಸುಲಿಗೆ ಪ್ರಕರಣ- ಆರೋಪಿಗಳಿಬ್ಬರಿಗೆ ಶಿಕ್ಷೆ

ಉಡುಪಿ, ಫೆ.17: ಕಾರ್ಕಳ ಲಕ್ಷ್ಮೀಗೋಲ್ಡ್ ಜ್ಯುವೆಲ್ಲರಿ ಸುಲಿಗೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರ್ಕಳ ಸಂಚಾರಿ ನ್ಯಾಯಾಲಯವು ಏಳು ವರ್ಷಗಳ ಕಠಿಣ ಸಜೆ ನೀಡಿ ಫೆ.14ರಂದು ಆದೇಶಿಸಿದೆ.

ಶಿಕ್ಷೆಗೆ ಗುರಿಯಾದ ಆರೋಪಿಗಳನ್ನು ಕಾರ್ಕಳ ವರಂಗ ಬಂಡಿಮಠ ನಿವಾಸಿ ಮಧುಕರ ಆಚಾರ್ಯ(36) ಹಾಗೂ ಕುಂದಾಪುರ ಕುಂಭಾಸಿಯ ಪ್ರಶಾಂತ್ ಆಚಾರ್ಯ(36) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋಪಿಗಳಿದ್ದು, ಉಳಿದ ನಾಲ್ವರ ಪೈಕಿ ಶಾಹಿದ್ ಅಲಿ ಮತ್ತು ಚಂದ್ರ ಆಚಾರ್ಯರನ್ನು ಸಾಕ್ಷಾಧಾರದ ಕೊರತೆ ಯಿಂದ ದೋಷಮುಕ್ತಗೊಳಿಸಲಾಗಿದೆ. ಉಳಿದ ಇಬ್ಬರು ಮೋಹನ್ ಮೊಗವೀರ ಮತ್ತು ಸಂದೀಪ್ ಮೊಗವೀರ ವಿಚಾರಣೆ ಅವಧಿಯಲ್ಲಿ ಸಾವನ್ನಪ್ಪಿದ್ದರು.
2013ರ ಸೆ.17ರಂದು ರಾತ್ರಿ ವೇಳೆ ರಾಮಚಂದ್ರ ಮಾನೆ ಎಂಬವರ ಜ್ಯುವೆಲ್ಲರಿಗೆ ನುಗ್ಗಿದ ಆರೋಪಿಗಳ ಪೈಕಿ ಇಬ್ಬರು ಮಾಲಕರ ಕಣ್ಣಿಗೆ ಖಾರದ ಪುಡಿ ಎರಚಿ, 42.67ಲಕ್ಷ ರೂ. ವೌಲ್ಯದ 1500ಗ್ರಾಮ್ ಚಿನ್ನಾಭರಣಗಳನ್ನು ದೋಚಿ ಕಾರಿನಲ್ಲಿ ಪರಾರಿಯಾಗಿದ್ದರು. ಇವರಲ್ಲಿ ಮಧುಕರ ಆಚಾರ್ಯನನ್ನು ಹಿರಿಯಡ್ಕದಲ್ಲಿ ಅದೇ ದಿನ ಬಂಧಿಸಲಾಗಿತ್ತು. ಉಳಿದ ಐವರು ಕಾರಿನಿಂದ ಇಳಿದು ಪರಾರಿಯಾಗಿದ್ದರು. ಮುಂದೆ ಅವರನ್ನು ಬಂಧಿಸಿ ಎಲ್ಲ ಚಿನ್ನಾಭರಣ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಆಗಿನ ಕಾರ್ಕಳದ ವೃತ್ತ ನಿರೀಕ್ಷಕ ಜಿ.ಎಂ.ನಾಯ್ಕರ್ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಇಬ್ಬರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಏಳು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ತಲಾ 5000ರೂ. ದಂಡ ವಿಧಿಸಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ವಾದಿಸಿದ್ದರು

Leave a Reply

Your email address will not be published. Required fields are marked *

error: Content is protected !!