ಸೂಕ್ತ ಮಾರ್ಪಾಡಿನೊಂದಿಗೆ ಜಲಜೀವನ್ ಮಿಷನ್ ಯೋಜನೆ ಕಾರ್ಯಗತವಾಗಲಿ

ಕೆಮ್ಮಣ್ಣು : ಗ್ರಾಮದ ಜನರ ಮತ್ತು ಗ್ರಾ ಪಂ ಆಡಳಿತ ಮಂಡಳಿಯ ಗಮನಕ್ಕೆ ತಾರದೇ, ಸರಿಯಾದ ಮಾಹಿತಿಯನ್ನೂ ನೀಡದೇ ಪಡುತೋನ್ಸೆ ಗ್ರಾಮ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನಕ್ಕೆ ಡಿಪಿಆರ್ ತಯಾರಿಸಲಾಗಿರುವುದರಿಂದ ಅದನ್ನು ಗ್ರಾಮಕ್ಕೆ ಪೂರಕವಾಗುವಂತೆ ಸೂಕ್ತ ಮಾರ್ಪಾಡಿನೊಂದಿಗೆ ಕಾರ್ಯಗತಗೊಳಿಸಬೇಕು.

ಜನರ ತೆರಿಗೆಯ ಹಣದಲ್ಲಿನ ಈ ಯೋಜನೆ ಜನರಿಗೆ ಉಪಯುಕ್ತವಲ್ಲದ ರೀತಿಯಲ್ಲಿ ಮೇಲಿನ ಹಂತದಲ್ಲಿ ಸಿದ್ಧಪಡಿಸಿದ್ದು, ಗ್ರಾಪಂ ನ ಆಡಳಿತ ಮಂಡಳಿಯನ್ನೂ ಒಳಗೊಳ್ಳದೇ ಇರುವುದರಿಂದ ಗ್ರಾ ಪಂ ವ್ಯಾಪ್ತಿಯ ಪ್ರದೇಶಗಳಲ್ಲಿ ಸರಿಯಾಗಿ ಸಮೀಕ್ಷೆ ನಡೆಸಿ, ಪರಿಶೀಲಿಸಿ ಕೊಂಡು ಸೂಕ್ತ ಮಾರ್ಪಾಡು ಮಾಡಬೇಕೇ ಹೊರತು ಅನುದಾನ ವ್ಯರ್ಥವಾಗಿ ವಿನಿಯೋಗವಾಗ ಬಾರದು ಹಾಗಾಗಿ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಸಭೆ ನಡೆಸಿ, ಅದರಲ್ಲಿ ತಾಂತ್ರಿಕ ಪರಿಣಿತರು ಮತ್ತು ಮೇಲಿನ ಹಂತದ ಅಧಿಕಾರಿ ವರ್ಗದವರು ಕೂತು ಚರ್ಚಿಸಿ ಡಿಪಿಆರ್ ಬದಲಾವಣೆ ಮಾಡಿ ಅನುಷ್ಠಾನಿಸಬೇಕು ಎಂದು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಫೆಬ್ರವರಿ,10 ರಂದು ಮಧ್ಯಾಹ್ನ ಜಲಜೀವನ್ ಮಿಷನ್ ಯೋಜನೆಯ ವಿಶೇಷ ಗ್ರಾಮ ಸಭೆಯನ್ನು ಕೆಮ್ಮಣ್ಣು ಚರ್ಚ್ ನ ಮಿನಿ ಹಾಲ್ ನಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲತಾ ಅವರ ಅಧ್ಯಕ್ಷತೆಯಲ್ಲಿ ಜರುಗಿಸಲಾಗಿತ್ತು.

ಆ ಸಭೆಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಬೆಂಬಲ ಸಂಸ್ಥೆಯ ಪ್ರತಿನಿಧಿ ನೇತ್ರಾವತಿಯವರು ಯೋಜನೆಯ ವಿವರವಾದ ಮಾಹಿತಿ ನೀಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ ಶ್ರೀ ಶಶಿಧರ ನಾಯ್ಕ್ ಅವರು ಸದ್ಯ ಗ್ರಾಮದಲ್ಲಿ ಇರುವ ನೀರಿನ ಮೂಲಗಳಿಂದಲೇ ಯೋಜನೆ ಕಾರ್ಯಗತವಾಗುತ್ತಿದೆ. ನೀರಿನ ಸಂಗ್ರಹಕ್ಕೆ ಎರಡು ಟ್ಯಾಂಕ್ ಗಳ ನಿರ್ಮಾಣ ಮತ್ತು ವಿತರಣಾ ಜಾಲದ ವ್ಯವಸ್ಥೆಯನ್ನು ಡಿಪಿಆರ್ ನಲ್ಲಿ ಅಳವಡಿಸಿ ಕೊಳ್ಳಲಾಗಿದೆ. ನೀರಿನ ಮೂಲಕ್ಕಾಗಿ ವಾರಾಹಿ ಯೋಜನೆಯ ನೀರನ್ನು ಉಡುಪಿ ನಗರ ಸಭೆಯ ಮೂಲಕ ಮುಂದಿನ ದಿನಗಳಲ್ಲಿ ತರುವುದಾಗಿದೆ ಎಂದು ಯೋಜನೆಯ ತಾಂತ್ರಿಕ ವಿವರದ ಮಾಹಿತಿ ನೀಡಿದರು.

ಆ ಬಳಿಕ ಯೋಜನೆಯ ಅನುಷ್ಠಾನದ ಬಗ್ಗೆ ಗ್ರಾಮಸ್ಥರು ಇನ್ನಷ್ಟು ವಿವರಣೆ ಬಯಸಿ ಚರ್ಚೆಗೆ ಮುಂದಾದರು. ಜಲ ಜೀವನ್ ಮಿಷನ್ ಯೋಜನೆ ಗ್ರಾಮದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಕೇಂದ್ರ ಸರಕಾರದ ಮಹತ್ವದ ಯೋಜನೆ ಎಂದು ಕಳೆದ ಮೂರು ವರ್ಷಗಳಿಂದ ಪ್ರಚಾರ ಮಾಡಲಾಗುತ್ತಿದೆ. ಒಂದು ವರ್ಷದ ಹಿಂದೆ ಯೋಜನೆಯ ಬಗೆಗಿನ ಗ್ರಾಮ ಸಭೆ ನಡೆಸಲಾಗಿದೆ. ಆ ಗ್ರಾಮ ಸಭೆಯಲ್ಲಿ ಈ ಯೋಜನೆಯಲ್ಲಿ ಗ್ರಾಮದಲ್ಲಿ ಎರಡು ಹೊಸ ಬಾವಿ ಮತ್ತು ನಾಲ್ಕು ಟ್ಯಾಂಕ್ ಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಂಡು ಡಿಪಿಆರ್ ಸಿದ್ಧಪಡಿಸಬೇಕು. ಇಲಾಖೆಯ ವೆಬ್ ಸೈಟಿನಲ್ಲಿ ಹ್ಯಾಬಿಟೇಷನ್ ಗಳ ಮತ್ತು ಈಗಾಗಲೇ ಇರುವ ಕುಡಿಯುವ ನೀರಿನ ಮೂಲಗಳ ಹಾಗೂ ನೀರು ವಿತರಣಾ ವ್ಯವಸ್ಥೆಯ ಬಗೆಗಿನ ಮಾಹಿತಿ ತಪ್ಪಾಗಿ ದಾಖಲಾಗಿರುವುದನ್ನು ಸರಿಪಡಿಸಿಕೊಳ್ಳಲು ನಿರ್ಣಯ ಕೈಗೊಳ್ಳಲಾಗಿತ್ತಾದರೂ ಡಿಪಿಆರ್ ನಲ್ಲಿ ಒಂದು ಲಕ್ಷ ಲೀಟರ್ ನೀರು ಸಂಗ್ರಹದ ಒಂದು ಮತ್ತು ಐವತ್ತು ಸಾವಿರ ಲೀಟರಿನ ಒಂದು ಟ್ಯಾಂಕ್ ಸಹಿತ ಒಟ್ಟು ಎರಡು ಟ್ಯಾಂಕ್ ಗಳನ್ನು ಅಳವಡಿಸಿಕೊಂಡಿದ್ದು, ಕುಡಿಯುವ ನೀರಿನ ಮೂಲವಾದ ಹೊಸ ತೆರೆದ ಬಾವಿ ನಿರ್ಮಾಣ ಇಲ್ಲವಾಗಿದೆ. ಅದಲ್ಲದೇ ಈಗ ಇರುವ ನೀರಿನ ವಿತರಣಾ ಜಾಲದ ಬದಲಾವಣೆಯ ಬಗ್ಗೆ ಸಮರ್ಪಕ ಅಧ್ಯಯನ ನಡೆಸಿ, ಪೂರಕ ವ್ಯವಸ್ಥೆ ಮಾಡಬೇಕಾಗಿದ್ದರೂ ಅದನ್ನು ಮಾಡಿರುವ ಮಾಹಿತಿ ಸ್ಪಷ್ಟವಾಗಿಲ್ಲದಿರುವುದರಿಂದ ಡಿಪಿಆರ್ ಬದಲಾವಣೆ ಅಗತ್ಯವಾಗಿದೆ ಎಂದು ಜನರು ಒತ್ತಾಯಿಸಿದರು.

ಇದ್ಯಾವುದನ್ನೂ ಮಾಡದೇ ಟೆಂಡರ್ ಕರೆದು ಯೋಜನೆ ಕಾರ್ಯಗತಕ್ಕೆ ಮುಂದಾಗಿರುವುದು ಹಿಂದಿನ ಗ್ರಾಮ ಸಭೆಯ ನಿರ್ಣಯಕ್ಕೆ ಬೆಲೆ ಇಲ್ಲದಂತೆ ಮಾಡಿದೆ.

ಆದುದರಿಂದ ಈ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಸೂಕ್ತ ಬದಲಾವಣೆಯೊಂದಿಗೆ ಯೋಜನೆ ಕಾರ್ಯಗತಗೊಳಿಸಬೇಕೇ ಹೊರತು ಗ್ರಾಮ ಸಭೆ ಕಾಟಾಚಾರಕ್ಕೆ ನಡೆದಿರುವುದು ಎಂದಾಗಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.

ದೂರದ ವಾರಾಹಿಯಿಂದ ನೀರು ಒದಗಿಸುವುದು, ಅದನ್ನು ಉಡುಪಿ ನಗರಸಭೆಯ ಕುಡಿಯುವ ನೀರಿನ ಯೋಜನೆಯ ಮೂಲಕ ಅನುಷ್ಟಾನಕ್ಕೆ ತರುವುದರಿಂದ ಗ್ರಾಮದ ಜನರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಗಳುಂಟಾಗಬಹುದು. ಈ ಹಿಂದೆ ಉಡುಪಿ ನಗರ ಸಭೆಯ ಮೂಲಕ ಕುಡಿಯುವ ನೀರು ಪಡಕೊಂಡಿದ್ದ ನೆರೆಯ ಕೆಲವು ಗ್ರಾ ಪಂ ಗಳು ನೀರಿನ ತೆರಿಗೆಯ ಜೊತೆಗೇ ಮೂರು ಪಟ್ಟು ಬಡ್ಡಿಯನ್ನೂ ಪಾವತಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಅದರ ಬದಲು ಕೇಂದ್ರ ಸರಕಾರದ ಈ ಯೋಜನೆಗೆ ನೀರಿನ ಮೂಲ, ಸಂಗ್ರಹದ ವ್ಯವಸ್ಥೆ ಮತ್ತು ವಿತರಣಾ ಜಾಲದ ವ್ಯವಸ್ಥೆ ಗ್ರಾಮದ ಹಂತದಲ್ಲೇ ಇರಬೇಕಿದೆ. ಹಾಗಿದ್ದಲ್ಲಿ ಮಾತ್ರ ಸರಕಾರದ ಆಶಯ – ಜನರ ತೆರಿಗೆ ಹಣದ ಬಳಕೆ ಸಮರ್ಪಕವಾಗಿ ಉಪಯುಕ್ತತೆ ಪಡೆಯಲಿದೆ ಎಂದು ಗ್ರಾಮಸ್ಥರು ಸಲಹೆ ನೀಡಿದರು.

ವಾರಾಹಿಯ ನೀರು ಪಡೆಯುವುದಾದರೇ ಅದು ಬಹುಗ್ರಾಮ ನೀರಿನ ಯೋಜನೆ ಆಗಲಿದ್ದು, ಬಹುಗ್ರಾಮ ನೀರಿನ ಯೋಜನೆಗೆ ಸರಕಾರದ ನಿಯಮಾವಳಿಯಂತೆ ಸಾರ್ವಜನಿಕ ವಂತಿಗೆ ಪಡೆಯುವ ಅವಕಾಶವಿಲ್ಲವಾಗಿರುವುದರಿಂದ ನಮ್ಮ ಗ್ರಾಮಕ್ಕೆ ವಾರಾಹಿ ನೀರು ತರುವುದೇ ಆಗಿದ್ದಲ್ಲಿ ಸಾರ್ವಜನಿಕ ವಂತಿಗೆಗೆ ನಿಗದಿಪಡಿಸಿರುವ ಮೊತ್ತವನ್ನು ಕೈ ಬಿಡಬೇಕು ಅಥವಾ ಗ್ರಾಮದಲ್ಲೇ ನೀರಿನ ಮೂಲ ಇರುವಂತೆ ಬದಲಾವಣೆ ಮಾಡಬೇಕಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗ್ರಾಮದ ಆಡಳಿತ ವ್ಯವಸ್ಥೆಯೊಂದಿಗೆ ಸರಿಯಾದ ಸಂಬಂಧ ಇಟ್ಟುಕೊಂಡು ಮಾಹಿತಿ ಸಂಹವನ ನಡೆಸುತ್ತಿರಬೇಕು. ಗ್ರಾಮದ ಜನರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಇದು ಮಹತ್ವ ಹೊಂದಿದ್ದು ಅದಿಲ್ಲದೇ ಹೋದಾಗ ಇಂತಹ ಅವ್ಯವಸ್ಥೆಗಳಿಗೆ ಕಾರಣವಾಗುತ್ತದೆ ಎಂದು ಸಭೆ ಅಭಿಪ್ರಾಯ ವ್ಯಕ್ತಪಡಿಸಿತು.

ಇಂಜಿನಿಯರ್ ಶಶಿಧರ ನಾಯ್ಕ್ ಅವರು ಈ ಬಗ್ಗೆ ಮೇಲಾಧಿಕಾರಿಗಳು ಮತ್ತು ಜಿ ಪಂ ನೊಂದಿಗೆ ಚರ್ಚಿಸಿ ಬದಲಾವಣೆಗೆ ಅವಕಾಶ ಒದಗಿಸುವಂತೆ ತಿಳಿಸುವುದಾಗಿ ಮತ್ತು ಮುಂದಿನ ವಾರ ಮೇಲಾಧಿಕಾರಿಗಳು, ಟೆಂಡರ್ ವಹಿಸಿಕೊಂಡ ಸಂಸ್ಥೆಯ ಪ್ರತಿನಿಧಿಗಳ ಜೊತೆ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಸಭೆ ನಡೆಸಿ ಗ್ರಾಮದ ಭಾಗಗಳಿಗೆ ತೆರಳಿ ಪರಿಶೀಲಿಸಿ ಯೋಜನೆಯು ಗ್ರಾಮಕ್ಕೆ ಬೇಕಾದ ರೀತಿಯಲ್ಲಿ ಕಾರ್ಯಗತವಾಗುವಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿ ಗ್ರಾ ಪಂ ಉಪಾಧ್ಯಕ್ಷ ಅರುಣ್ ಫೆರ್ನಾಂಡೀಸ್, ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಖಜಾಂಚಿ ರೆನೋಲ್ಡ್ ಮಿನೇಜಸ್, ಪಿಡಿಒ ಕಮಲಾ, ಗ್ರಾ ಪಂ ಆಡಳಿತ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ಗ್ರಾ ಪಂ ನ ಆಡಳಿತ ಸಮಿತಿ ಸದಸ್ಯರುಗಳು ಮತ್ತು ನೀರು ನೈರ್ಮಲ್ಯ ಸಮಿತಿ ಸದಸ್ಯರುಗಳು ಹಾಗೂ ಮಾಜಿ ಆದ್ಯಕ್ಷ ಶ್ರೀ ವೆಂಕಟೇಶ ಜಿ ಕುಂದರ್,ಫೌಜಿಯಾ ಪರ್ವಿನ್, ಮಾಜಿ ಉಪಾಧ್ಯಕ್ಷ ಉಸ್ತಾದ್ ಸಾದಿಕ್, ಮಾಜಿ ಸದಸ್ಯರುಗಳಾದ ಗಂಗಾಧರ ಪಾಲನ್, ರವೀಂದ್ರ ಶ್ರೀಯಾನ್, ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟದ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು

ಸಭೆಯನ್ನು ನಡೆಸುವಲ್ಲಿ ಅನುಷ್ಟಾನ ಬೆಂಬಲ ಸಂಸ್ಥೆಗಳ ಪ್ರತಿನಿಧಿಗಳಾದ ರಾಕೇಶ್, ರಂಜಿತ್, ಜೇಮ್ಸ್, ಗ್ರಾ ಪಂ ಸಿಬಂದಿಗಳಾದ ಸಂತೋಷ್ ಮತ್ತು ಪ್ರಕಾಶ್ ಸಹಕರಿಸಿದ್ದರು.ದಿನಕರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!