IPL ವೇಳಾಪಟ್ಟಿ‌ ಬಿಡುಗಡೆ: ಸೆ.19ರಿಂದ ನ.‌ 3ರವರೆಗೆ

ದುಬೈ: ಅಂತೂ ಇಂತೂ ಐಪಿಎಲ್ ಟ್ವೆಂಟಿ–20 ಟೂರ್ನಿಯ ವೇಳಾಪಟ್ಟಿಯು ಭಾನುವಾರ ಬಿಡುಗಡೆಯಾಯಿತು.

ಇದೇ 19ರಂದು ಅಬುಧಾಬಿಯಲ್ಲಿ ನಡೆಯಲಿರುವ ಉದ್ಘಾಟನೆ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ಸ್ ಅಪ್ ಚೆನ್ನೈ ಸೂಪರ್ ಕಿಂಗ್ಸ್‌ ಮುಖಾಮುಖಿಯಾಗಲಿವೆ.

20ರಂದು ನಡೆಯುವ ಟೂರ್ನಿಯ ಎರಡನೇ  ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಣಕ್ಕಿಳಿಯಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಸೆ.21ರಂದು ಸನ್‌ರೈಸರ್ಸ್‌ ಎದುರು ಸೆಣಸಲಿದೆ.  ಈ ಎರಡೂ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

ಸದ್ಯ ನವೆಂಬರ್‌ 3ರವರೆಗೆ ನಡೆಯುವ ಲೀಗ್ ಹಂತದ 48 ಪಂದ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟೂರ್ನಿಯ ಹತ್ತು  ಡಬಲ್ ಹೆಡರ್ (ಒಂದೇ ದಿನ ಎರಡು ಪಂದ್ಯಗಳು) ನಡೆಯಲಿವೆ.  ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಪಂದ್ಯಗಳು ಆರಂಭವಾಗುತ್ತವೆ.

ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಮತ್ತು ಶಾರ್ಜಾದಲ್ಲಿ 12 ಪಂದ್ಯಗಳು ನಡೆಯಲಿವೆ.

ಪ್ಲೇಆಫ್‌ ಮತ್ತು ಫೈನಲ್‌ ಪಂದ್ಯಗಳ ಸ್ಥಳ ಹಾಗೂ ದಿನಾಂಕಗಳನ್ನು ಪ್ರಕಟಿಸಿಲ್ಲ. ನವೆಂಬರ್ 10ರಂದು ಫೈನಲ್ ನಡೆಸಲಾಗುವುದು ಎಂದು ಈ ಮೊದಲು ಹೇಳಲಾಗಿದೆ.

ಭಾರತದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಟೂರ್ನಿಯನ್ನು ಯುಎಇಯಲ್ಲಿ ನಡೆಸಲಾಗುತ್ತಿದೆ. ಪಂದ್ಯಗಳು ನಡೆಯುವ ನಗರಗಳಲ್ಲಿ ಕ್ವಾರಂಟೈನ್ ನಿಯಮಗಳು ಭಿನ್ನವಾಗಿದ್ದ ಕಾರಣ ವೇಳಾಪಟ್ಟಿ ಸಿದ್ಧಪಡಿಸುವುದು ವಿಳಂಬವಾಗಿದೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!