ಕೊರೋನಾ ಸೋಂಕಿತೆಯ ಮೇಲೆ ಆ್ಯಂಬುಲೆನ್ಸ್ ಚಾಲಕನಿಂದ ಅತ್ಯಾಚಾರ

ತಿರುವನಂತಪುರ: ಕೊರೋನಾ ಸೋಂಕಿತೆಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದ ಆ್ಯಂಬುಲೆನ್ಸ್ ಚಾಲಕನೋರ್ವ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಪಥನಂತ್ತಟ್ಟದ ಅರಣ್ಮುಲಾದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, 19 ವರ್ಷದ ಕೊರೊನಾ ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ, ಆಕೆಯ ಮೇಲೆ ಅಂಬ್ಯುಲೆನ್ಸ್‌ ಚಾಲಕ ಕಾಯಂಕುಲಂ ಮೂಲದ 28 ವರ್ಷ ನೌಫಲ್‌ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಆ್ಯಂಬುಲೆನ್ಸ್ ಚಾಲಕ ನೌಫಲ್‌ ಇಬ್ಬರು ಯುವತಿಯನ್ನು ಅಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಬರುತ್ತಿದ್ದ. ಒಬ್ಬಳನ್ನು ಒಂದು ಆಸ್ಪತ್ರೆಯ ಸಮೀಪ ಡ್ರಾಪ್‌ ಮಾಡಿದ್ದ. ಆದರೆ 19 ವರ್ಷದ ಯುವತಿಗೆ ಕೊರೊನಾ ಸೋಂಕು ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಆಸ್ಪತ್ರೆಗೆ ದಾಖಲು  ಮಾಡುವಂತೆ ಹೇಳಲಾಯಿತು. ಹೀಗಾಗಿ ಆಕೆಯನ್ನು ಕರೆದುಕೊಂಡು ಹೋಗುವಾಗ ನೌಫಲ್‌, ಆಂಬುಲೆನ್ಸ್ ಅನ್ನು ನಿರ್ಜನ ಸ್ಥಳಕ್ಕೆ ಓಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ಪಾಂಡಲಂ ಆಸ್ಪತ್ರೆಯಲ್ಲಿ ಇಳಿಸಿ ಹೋಗಿದ್ದಾನೆ. ವಿಷಯ ತಿಳಿಯುತ್ತಲೇ ಪೊಲೀಸರು ಕೂಡಲೇ ಆರೋಪಿಯನ್ನು  ಬಂಧಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಗೆ ಹಲವಾರು ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನೌಫಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ವೇಳೆ ಈತ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಈ ಚಾಲಕನನ್ನು ಏಜೆನ್ಸಿಯೊಂದು ನೇಮಕ ಮಾಡಿದ್ದು, ಆತನ ಪೂರ್ವಾಪರಗಳನ್ನು ತಿಳಿದುಕೊಳ್ಳದೇ ನೇಮಕ ಮಾಡಿಕೊಳ್ಳಲಾಗಿದೆಯೇ ಎಂಬ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಪ್ರಕರಣಕ್ಕೆ  ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದು, ಈ ರೀತಿ ಹಿಂದೆಂದೂ ಆಗಿರಲಿಲ್ಲ. ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!