ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ನೂತನ ಶಿಕ್ಷಣ ನೀತಿ ಪ್ರಮುಖ ಪಾತ್ರವಹಿಸುತ್ತದೆ: ಪ್ರಧಾನಿ ಮೋದಿ

ನವದೆಹಲಿ:ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಯನಕ್ಕಿಂತ ಮಕ್ಕಳ ಕಲಿಕೆಗೆ ಹೆಚ್ಚು ಆದ್ಯತೆ ನೀಡುತ್ತದೆ. ದೇಶದ ಜನರ ಆಶೋತ್ತರಗಳನ್ನು ಈಡೇರಿಸಲು ಶಿಕ್ಷಣ ನೀತಿ ಮತ್ತು ಶಿಕ್ಷಣ ವ್ಯವಸ್ಥೆ ಪ್ರಮುಖ ಸಾಧನಗಳು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ರಾಷ್ಟ್ರೀಯ ಶಿಕ್ಷಣ ನೀತಿಯ ಗವರ್ನರ್ ಸಮ್ಮೇಳನದ ವರ್ಚುವಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಕೇಂದ್ರ ಸರ್ಕಾರದವರೆಗೆ ಎಲ್ಲರೂ ಜವಾಬ್ದಾರರಾಗಿರುತ್ತಾರೆ. ಆದರೆ ಶಿಕ್ಷಣ ನೀತಿಯಲ್ಲಿ ಸರ್ಕಾರದ ಮಧ್ಯ ಪ್ರವೇಶ, ಅದರ ಪರಿಣಾಮ ಯಾವತ್ತಿಗೂ ಸೀಮಿತವಾಗಿರಬೇಕು ಎಂದರು.

ಶಿಕ್ಷಣ ನೀತಿಯಲ್ಲಿ ಹೆಚ್ಚೆಚ್ಚು ಶಿಕ್ಷಕರು ಮತ್ತು ಪೋಷಕರು ಒಳಗೊಂಡಿರುತ್ತಾರೆ. ಹೆಚ್ಚು ವಿದ್ಯಾರ್ಥಿಗಳು ಸಂಬಂಧ, ಸಂಪರ್ಕ ಹೊಂದಿರುತ್ತಾರೆ, ಅವರ ಪ್ರಸ್ತುತತೆ, ಆದ್ಯತೆ, ವಿಸ್ತಾರವೇ ಮುಖ್ಯವಾಗುತ್ತದೆ ಎಂದರು.ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಹೊಸ ಶಿಕ್ಷಣ ನೀತಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಹೇಳಿದರು.

ಸಮ್ಮೇಳನಕ್ಕೆ ಉನ್ನತ ಶಿಕ್ಷಣದ ರೂಪಾಂತರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪಾತ್ರ ಎಂದು ಶೀರ್ಷಿಕೆ ಇಡಲಾಗಿದ್ದು, ಶಿಕ್ಷಣ ಸಚಿವಾಲಯ ಇದನ್ನು ಆಯೋಜಿಸಿದೆ. ಪ್ರಸ್ತುತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇದನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರುಗಳು, ರಾಜ್ಯಗಳ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದಾರೆ.

ನಮ್ಮ ದೇಶದಲ್ಲಿ ಹಿಂದಿನ ಶಿಕ್ಷಣ ನೀತಿ ಜಾರಿಗೆ ಬಂದಿದ್ದು 1986ರಲ್ಲಿ. ಅದಾದ ಬಳಿಕ 34 ವರ್ಷಗಳ ನಂತರ 21ನೇ ಶತಮಾನದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೆ ತರಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!