ನೀವು ಸೌಹಾರ್ದ ಸೊಸೈಟಿಗಳಲ್ಲಿ ಇಟ್ಟಿರುವ ಠೇವಣಿ ಎಷ್ಟು ಸೇಫ್….

ಬೆಂಗಳೂರು ನ.5: ರಾಜ್ಯದ ಸೌಹಾರ್ದ ಸೊಸೈಟಿಗಳಲ್ಲಿ ಹೂಡಿಕೆಯಾಗಿರುವ 20 ಸಾವಿರ ಕೋಟಿ ರೂ. ಠೇವಣಿಯನ್ನು ಆಡಳಿತ ಮಂಡಳಿಗಳು ನುಂಗಿ ಹಾಕಿವೆ ಎಂದು ಆರೋಪಿಸಿ ಠೇವಣಿದಾರರು  ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಕಾರ್ಯಾ ಚರಿಸುತ್ತಿರುವ ಸಹಕಾರಿ ಬ್ಯಾಂಕ್ ಮತ್ತು ಕ್ರೆಡಿಟ್ ಸೌಹಾರ್ದ ಸೊಸೈಟಿಗಳಾದ ಶೈಲಗಿರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್ ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕ್ ಮತ್ತು ಸೌಹಾರ್ದ ಸೊಸೈಟಿಗಳಲ್ಲಿ ಹಣ ಹೂಡಿರುವ ಠೇವಣಿದಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದು ಹೂಡಿಕೆಯಾಗಿರುವ ಒಟ್ಟು ನಿಶ್ಚಿತ ಠೇವಣಿ ಹಣದ ಪೈಕಿ ಅಂದಾಜು 20,000 ಕೋಟಿ ಹಣವನ್ನು ಆಡಳಿತ ಮಂಡಳಿಗಳು ನುಂಗಿ ಹಾಕಿವೆ ಎಂದು ಆರೋಪಿಸಿದ್ದಾರೆ.

ಈ ಪತ್ರದಲ್ಲಿ ಕುರುಹೀನ ಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್ ಲಿಮಿಟೆಡ್, ಶ್ರೀ ವೈಭವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಕಣ್ವ, ಮಹಾಗಣಪತಿ, ನಾಗರತ್ನ, ಮಿಲಿನೇಯಂ, ಕಲ್ಪವೃಕ್ಷ ಕ್ರೆಡಿಟ್ ಸೇರಿದಂತೆ ಒಟ್ಟು ರಾಜ್ಯದ 1,000ಕ್ಕೂ ಹೆಚ್ಚು ಸೌಹಾರ್ದ ಸೊಸೈಟಿಗಳಲ್ಲಿನ ಠೇವಣಿದಾರರಿಗೆ ಅಪಾರ ಪ್ರಮಾಣದಲ್ಲಿ ವಂಚನೆಯಾಗಿದೆ ಎಂದು ತಿಳಿಸಲಾಗಿದೆ.

 ಪ್ರಾಥಮಿಕ ಹಂತದಲ್ಲಿ 20 ಕೋಟಿ ರೂ. ಅವ್ಯವಹಾರವಾಗಿದೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಸೊಸೈಟಿಯ ಅಧ್ಯಕ್ಷ ನವೀನ್ ಡಿ.ಪಿ., ಅನಿಲ್‌ಕುಮಾರ್, ಸಿಇಒ ಪಲ್ಲವಿ ಎನ್  ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಬೆಂಗಳೂರಿನ ಬಸವನಗುಡಿಯ ಗಾಂಧಿಬಝಾರ್‌ನಲ್ಲಿರುವ ಶ್ರೀ ಶೈಲಗಿರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್‌ನಲ್ಲಿ ವಂಚನೆಗೊಳಗಾದ 200 ಮಂದಿ ಠೇವಣಿದಾರರು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಹಕಾರಿಯ ಚಟುವಟಿಕೆಗಳು ಸಂಶಯಾಸ್ಪದವಾಗಿದ್ದು ಮೋಸದ ಉದ್ದೇಶ ಹೊಂದಿರುವ ಸಾಧ್ಯತೆ ಇದೆ,’ ಎಂದು ದೂರು ಸಲ್ಲಿಸಿದ್ದರು. ಸೊಸೈಟಿಯ ಅಧ್ಯಕ್ಷರು, ಸಿಇಒ ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ನಂಬಿಕೆ ದ್ರೋಹ, ಮೋಸ, ವಂಚನೆ ಮತ್ತು ಅಧಿಕಾರ ದುರುಪಯೋಗ ಎಸಗಿರುವ ಆರೋಪಗಳಡಿಯಲ್ಲಿ ಐಪಿಸಿ 1860 (406, 415, 417,419, 420, 465,470,468, 471 ಅಡಿಯಲ್ಲಿ ಮತ್ತು ಕೆಪಿಡಬ್ಲ್ಯುಐಐಡಿ ಅಡಿಯಲ್ಲಿಯೂ ಎಫ್‌ಐಆರ್ ದಾಖಲಾಗಿರುವುದು ಗೊತ್ತಾಗಿದೆ.

ಹಾಗೂ ಬಸವನಗುಡಿಯ ಪೊಲೀಸ್ ಠಾಣೆಯಲ್ಲಿ 2022ರ ಮಾರ್ಚ್‌ನಲ್ಲಿ ದಾಖಲಾಗಿರುವ ಎಫ್‌ಐಆರ್ ಕುರಿತು ನೊಂದ ಹೂಡಿಕೆದಾರರು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಿದ್ದಾರೆ. ದೂರು ನೀಡಿರುವ ಹೆಗಡೆ ನಾಗಪತಿ, ವೀಣಾ ಹೆಗಡೆ ಮತ್ತು ಕುಮಾರ್ ಸಿಎ ಎಂಬವರು ಶ್ರೀ ಶೈಲಗಿರಿ ಸೌಹಾರ್ದ ಕ್ರೆಡಿಟ್ ಕೋ ಅಪರೇಟೀವ್‌ನಲ್ಲಿ ಒಟ್ಟು 43.50 ಲಕ್ಷ ರು.ಗಳನ್ನು ಹೂಡಿದ್ದರು. ಆದರೆ ಈ ಸಹಕಾರಿ ಸಂಸ್ಥೆಯು ಈ ಹಣವನ್ನು ಪಾವತಿಸದೇ ಸಂಯುಕ್ತ ಸಹಕಾರಿ ಸೂಚನೆಯನ್ನು ಉಲ್ಲಂಘಿಸಿದೆ ಎಂಬುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

‘ರಾಜ್ಯದಲ್ಲಿ ಸುಮಾರು 20 ಲಕ್ಷ ಠೇವಣಿದಾರರು ತೊಂದರೆಯಲ್ಲಿ ಸಿಕ್ಕಿಕೊಂಡಿದ್ದಾರೆ. ಠೇವಣಿ ಹಣಕ್ಕೆ ಮೋಸವಾಗಿರುವುದು ಮಾತ್ರವಲ್ಲದೇ ಸಹಕಾರಿ ಸಂಸ್ಥೆಗಳ ಮೇಲೆ ವಿಶ್ವಾಸವೇ ಕಳೆದುಹೋಗಿದೆ. ಹೀಗಾಗಿ ಸೆಬಿ, ರಿಸರ್ವ್ ಬ್ಯಾಂಕ್‌ಗಳ ಮೂಲಕ ಸಹಕಾರ ಬ್ಯಾಂಕ್, ಸೌಹಾರ್ದ ಕ್ರೆಡಿಟ್ ಸೊಸೈಟಿಗಳಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಸೊಸೈಟಿ ಮತ್ತು ಸಹಕಾರ ಬ್ಯಾಂಕ್‌ ಗಳ ಆರಂಭಕ್ಕೆ ಬಿಗಿಯಾದ ಮಾರ್ಗಸೂಚಿಗಳನ್ನು ರೂಪಿಸಬೇಕು. ಇಲ್ಲವಾದಲ್ಲಿ ಠೇವಣಿ ಹೂಡಿಕೆದಾರರು ಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇದೆ’ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಠೇವಣಿದಾರರು ಅಳಲು ತೋಡಿಕೊಂಡಿದ್ದಾರೆ.

ನಗರ ಸಹಕಾರಿ ಬ್ಯಾಂಕ್‌ ಗಳಲ್ಲಿ 4,167 ಹೆಚ್ಚು ನಕಲಿ ಕಂಪೆನಿಗಳು ವಹಿವಾಟು ನಡೆಸಿವೆ ಎಂದು ರಾಜ್ಯಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಸಹಕಾರ ಇಲಾಖೆಯೇ ಮಾಹಿತಿ ಒದಗಿಸಿದ್ದರೂ ರಾಜ್ಯ ಸರಕಾರದ ಗಮನಕ್ಕೆ ಬಂದಿಲ್ಲ ಎಂದು ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ಅವರು ಸದನದ ದಾರಿತಪ್ಪಿಸಿದ್ದರು. ಈ ಯಾವ ವ್ಯವಹಾರಗಳೂ ತನ್ನ ಗಮನಕ್ಕೆ ಬಂದಿಲ್ಲ ಎಂದು ಉತ್ತರಿಸುವ ಮೂಲಕ ರಾಜ್ಯ ಸರಕಾರದ ಸಹಕಾರ ಇಲಾಖೆಯೇ ರಾಜ್ಯಮಟ್ಟದ ಸಮನ್ವಯ ಸಮಿತಿ ಸಭೆಗೆ ಮಂಡಿಸಿದ್ದ  ಕಾರ್ಯಸೂಚಿ ಮತ್ತು ವಿವರಣೆಯನ್ನು ತಳ್ಳಿ ಹಾಕಿದ್ದರು. ನಕಲಿ ಕಂಪೆನಿಗಳು ಆದಾಯ ತೆರಿಗೆ ಕುರಿತಾದ ವಿವರಗಳನ್ನು ಸಲ್ಲಿಸದಿರುವ ಕುರಿತು ಕಾರ್ಯಸೂಚಿ ಪಟ್ಟಿಯಲ್ಲಿ ಸೇರಿಸಿತ್ತು. ಕಂಪೆನಿಗಳ ನೋಂದಣಿ ಇಲಾಖೆ (ಆರ್‌ಒಸಿ) ಬೆಂಗಳೂರು ವ್ಯಾಪ್ತಿಯಲ್ಲಿ ಅಕ್ರಮ ವ್ಯವಹಾರ, ಅಕ್ರಮ ಆಸ್ತಿಗಳನ್ನು ಅಡಗಿಸಿಡುವುದಕ್ಕೆ ಪೂರಕವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು  ಗುರುತಿಸಲಾಗಿರುವ ಒಟ್ಟು ನಕಲಿ (ಶೆಲ್) ಕಂಪೆನಿಗಳ ಪೈಕಿ 4,167 ಕಂಪೆನಿಗಳು ವಾರ್ಷಿಕ ರಿಟರ್ನ್ಸ್ ಸಲ್ಲಿಸಿರಲಿಲ್ಲ.  ಅಲ್ಲದೆ ಈ ನಕಲಿ ಕಂಪೆನಿಗಳು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿಯೇ ಖಾತೆ ತೆರೆದು ಕೋಟ್ಯಂತರ  ರೂ. ವಹಿವಾಟು ನಡೆಸಿವೆ ಎಂಬ ಸಂಗತಿಯು ರಾಜ್ಯಮಟ್ಟದ ಸಮನ್ವಯ ಸಮಿತಿಯು 2022ರ ಜೂನ್ 27ರ ಇಂದು ನಡೆದಿದ್ದ 56ನೇ ಸಭೆಗೆ ಸಲ್ಲಿಸಿರುವ ಕಾರ್ಯಸೂಚಿ ಪಟ್ಟಿಯಲ್ಲಿ ವಿವರಣೆ ಒದಗಿಸಿತ್ತು ಎಂದು ತಿಳಿಸಲಾಗಿದೆ.

 ರಿಜಿಸ್ಟ್ರರ್ ಆಫ್ ಕಂಪೆನೀಸ್ ಮಾಹಿತಿ ಪ್ರಕಾರ ಶೆಲ್ ಕಂಪನಿಗಳು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿವೆ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್, ನಗರ ಸಹಕಾರಿ ಬ್ಯಾಂಕ್‌ಗಳಿಂದ ಮಾಹಿತಿಯನ್ನು ಬಯಸಿದೆ ಎಂಬುದು ಕಾರ್ಯಸೂಚಿ ಪಟ್ಟಿಯಿಂದ ತಿಳಿದು ಬಂದಿತ್ತು.

 ಎಸ್‌ಎಲ್‌ಸಿಸಿ (ಸ್ಟೇಟ್ ಲೆವೆಲ್ ಕೋ ಆರ್ಡಿನೇಷನ್ ಕಮಿಟಿ)ಯ 54ನೇ ಸಭೆಯಲ್ಲಿ ಕಂಪೆನಿಗಳ  ಕೆವೈಸಿ ವಿವರಗಳ ಕ್ರೋಢೀಕೃತ ಮಾಹಿತಿ ಒದಗಿಸುವ  ಕುರಿತು ಚರ್ಚೆ ನಡೆದಿತ್ತು. ಆದರೆ ಬ್ಯಾಂಕ್‌ಗಳು ಈ ಮಾಹಿತಿಯನ್ನು ಆರ್‌ಬಿಐನೊಂದಿಗೆ ಹಂಚಿಕೊಂಡಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಅಲ್ಲದೆ ರಾಜ್ಯದಲ್ಲಿ ಕಳೆದ 6 ತಿಂಗಳಿನಲ್ಲಿ ಹಲವು ಕ್ರೆಡಿಟ್ ಸೌಹಾರ್ದ ಸೊಸೈಟಿಗಳು ಮತ್ತು 40,000 ಸಹಕಾರಿ ಬ್ಯಾಂಕ್‌ಗಳಲ್ಲಿ ಹೂಡಿಕೆಯಾಗಿರುವ 20 ಲಕ್ಷಕ್ಕೂ ಅಧಿಕ ಸದಸ್ಯರ ನಿಶ್ಚಿತ ಠೇವಣಿ ಅಂದಾಜು 20,000 ಕೋಟಿ ರೂ.ಗಳನ್ನು ಆಡಳಿತ ಮಂಡಳಿಗಳು ನುಂಗಿ ಹಾಕಿವೆ. ಈ ಹಣವನ್ನು ಆಡಳಿತ ಮಂಡಳಿಗಳು ಹವಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಯಲ್ಲದೇ ಇನ್ನೂ ಹಲವು ಆಡಳಿತ ಮಂಡಳಿಗಳು ಠೇವಣಿ ಮೊತ್ತವನ್ನು ದುರುಪಯೋಗಪಡಿಸಿಕೊಂಡಿವೆ ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಮಾಡಿವೆ  ಎಂದು ಹೂಡಿಕೆದಾರರು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!