ಶಿವಮೊಗ್ಗ: ಚಾಕು ಇರಿಯಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಟ

ಶಿವಮೊಗ್ಗ ನ.5: ಇಲ್ಲಿನ ಬಿ.ಹೆಚ್.ರಸ್ತೆಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ.

ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಅಸ್ಲಂ ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಈತ ಪುರಲೆ ರಸ್ತೆಯಲ್ಲಿ ನಿರ್ಮಾಣವಾಗಿರುವ ಬಡಾವಣೆಯೊಂದರಲ್ಲಿ ಅವಿತುಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ದೊಡ್ಡಪೇಟೆ ಠಾಣೆ ಪೊಲೀಸರು, ಠಾಣೆಯ ಪಿಎಸ್ಐ ವಸಂತ್ ಅವರ ನೇತೃತ್ವದಲ್ಲಿ ಆರೋಪಿ ಬಂಧನಕ್ಕೆ ತೆರಳಿದ್ದರು. ಈ ಸಂದರ್ಭ ಆರೋಪಿ ಅಸ್ಲಂ ಪೊಲೀಸ್ ಸಿಬ್ಬಂದಿ ರಮೇಶ್ ಅವರ ಮೇಲೆ ಚಾಕುವಿನಿಂದ ಹಲ್ಲೆಗೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಅಸ್ಲಂನ ಎಡಗಾಲಿಗೆ ಗುಂಡು ತಾಗಿದ್ದು, ಆತ ಗಾಯಗೊಂಡಿದ್ದಾನೆ. ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ರಮೇಶ್ ಅವರು ಕೂಡಾ ಗಾಯಗೊಂಡಿದ್ದಾರೆ. ಕೂಡಲೆ ಪೊಲೀಸ್ ಸಿಬ್ಬಂದಿ ರಮೇಶ್ ಮತ್ತು ಆರೋಪಿ ಅಸ್ಲಂನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. 

ಇನ್ನು ಬಂಧಿತ ಆರೋಪಿ ಅಸ್ಲಂಗೆ ಅಪರಾಧ ಹಿನ್ನೆಲೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ.

ಆ.30ರಂದು ರಾತ್ರಿ ಬಿ.ಹೆಚ್.ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಅಶೋಕ್ ಪ್ರಭು ಎಂಬಾತನ ಜೊತೆಗೆ ನಾಲ್ವರು ಕ್ಷುಲಕ ವಿಚಾರಕ್ಕೆ ಜಗಳವಾಡಿದ್ದರು. ಹರಿತವಾದ ಆಯುಧದಿಂದ ಅಶೋಕ್ ಪ್ರಭು ಎಡಗಲ್ಲದ ಮೇಲೆ ಹಲ್ಲೆ ಮಾಡಿದ್ದರು. ಗಾಯಗೊಂಡಿದ್ದ ಅಶೋಕ್ ಪ್ರಭು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಪ್ರಕರಣ ಸಂಬಂಧ ಸಾಗರದ ಆಸೀಫ್ ಅಲಿಯಾಸ್ ಚೆಲ್ಲಿ (26) ಎಂಬಾತನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಮತ್ತೊಬ್ಬ ಆರೋಪಿ ಅಸ್ಲಂ ಎಂಬಾತ ಪುರಲೆ ರಸ್ತೆಯಲ್ಲಿ ಬಡಾವಣೆಯಲ್ಲಿ ಅಡಗಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಬಂಧನಕ್ಕೆ ತೆರಳಿದ್ದರು.

Leave a Reply

Your email address will not be published.

error: Content is protected !!