ನಾವು ಇನ್ನೊಬ್ಬರ ಜೀವನದ ಕತ್ತಲನ್ನೋಡಿಸುವ ದೀಪವಾಗೋಣ- ಫಾ. ಲಿಯೋ ಪ್ರವೀಣ್

ಉಡುಪಿ : ಯಾವುದೇ ಜಾತಿ ಧರ್ಮದವರೂ ಹಾಗೂ ಎಲ್ಲರೂ ಆಶಿಸುವುದು ಶಾಂತಿ. ನಮ್ಮ ಯಾವುದೇ ಹಬ್ಬ ನಡೆಯಬೇಕಾದರೆ ಅಥವಾ ಆಚರಿಸಬೇಕಾದರೆ ನಾವು ಒಂದೇ ಮತದವರು, ಮನುಷ್ಯ ಜಾತಿಯವರು ಎಂಬುದನ್ನು ಮನಸ್ಸಿನಲ್ಲಿಡಬೇಕು. ಆವಾಗ ನಿಜವಾದ ಪ್ರೀತಿ, ಮಮತೆ, ಏಕತೆಯಿಂದ ಹಬ್ಬವನ್ನು ಆಚರಿಸಲು ಸಾಧ್ಯವಾಗುತ್ತದೆ ಎಂದು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಸಹಾಯಕ ಧರ್ಮಗುರು ವಂ.ಫಾ.ಲಿಯೋ ಪ್ರವೀಣ್ ಡಿಸೋಜ ತಿಳಿಸಿದರು.

ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಮುಂಭಾಗದಲ್ಲಿ ಸೌಹಾರ್ದ ಸಮಿತಿ ಉದ್ಯಾವರದ ನೇತೃತ್ವದಲ್ಲಿ ನಡೆದ ಸೌಹಾರ್ದ ದೀಪಾವಳಿಯ ಸಂಭ್ರಮದಲ್ಲಿ ತಮ್ಮ ಸಂದೇಶವನ್ನು ನೀಡಿ ಅವರು ಮಾತನಾಡಿದರು.

ದೀಪ ಅಥವಾ ಮೊಂಬತ್ತಿ ಬೆಳಗಿಸುವಾಗ ನಾವು ಯಾರ ಮುಖವನ್ನೂ ಅಥವಾ ಅವರು ಯಾವ ಜಾತಿಯವನು ಎಂಬುದನ್ನು ನೋಡುವುದಿಲ್ಲ. ಬದಲಾಗಿ ಆ ವ್ಯಕ್ತಿ ಮತ್ತು ಆ ವ್ಯಕ್ತಿಯ ಬಳಿಯಲ್ಲಿರುವ ಮೊಂಬತ್ತಿಯನ್ನು ಮಾತ್ರ ನೋಡುತ್ತೇವೆ. ಹೃದಯದ ಹತ್ತಿರವಿರುವ ದೀಪವನ್ನು ಬೆಳಗಿಸುವ ಕತ್ತಲೆ ದೂರವಾಗಿ ಬೆಳಕು ಪ್ರಜ್ವಲಿಸುತ್ತದೆ. ಅದೇ ರೀತಿ ನಮ್ಮ ಜೀವನವೂ ಕೂಡ ಆಗಬೇಕು. ನಾವು ಯಾವುದೇ ಹಬ್ಬ ಆಚರಿಸುವಾಗ ಮಾತ್ರವಲ್ಲದೆ ಎಲ್ಲಾ ದಿನಗಳಲ್ಲೂ ಇನ್ನೊಬ್ಬರ ಜೀವನದ ಕತ್ತಲನ್ನು ಓಡಿಸುವ ದೀಪವಾಗಬೇಕು. ಆಗ ಮಾತ್ರ ಯಾವುದೇ ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.

ದೇವಾಲಯದ ಮುಂಭಾಗದಲ್ಲಿ ಸರ್ವ ಧರ್ಮೀಯರೂ ಜೊತೆಯಾಗಿ ಹಣತೆಯನ್ನು ಹಚ್ಚಿ ದೀಪಾವಳಿ ಸಂಭ್ರಮವನ್ನು ಆಚರಿಸಿದರು. ಇದೇ ಸಂದರ್ಭದಲ್ಲಿ ತೂಗುದೀಪವನ್ನು ಅಳವಡಿಸಲಾಗಿತ್ತು. ಮಕ್ಕಳ ಸಹಿತ ಹಾಜರಿದ್ದ ಎಲ್ಲರೂ ಸುಡುಮದ್ದು ಸಿಡಿಸಿ ಸಂಭ್ರಮಿಸಿದರು. ಹಾಜರಿದ್ದ ಎಲ್ಲರಿಗೂ ದೀಪಾವಳಿ ಹಬ್ಬದ ಸಂಭ್ರಮದ ಸಿಹಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಾವರ ಬಿಲ್ಲವ ಮಹಾಜನ ಸಂಘದ ಮಾಜಿ ಅಧ್ಯಕ್ಷ ಪ್ರತಾಪ್ ಕುಮಾರ್ ಉದ್ಯಾವರ, ಉದ್ಯಮಿ ರೊನಾಲ್ಡ್ ಮನೋಹರ್ ಕರ್ಕಡ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಝ್ ಪಳ್ಳಿ, 20 ಆಯೋಗಗಳ ಸಂಯೋಜಕ ಜೆರಾಲ್ಡ್ ಪಿರೇರಾ, ಸ್ತ್ರೀ ಸಂಘಟನೆ ಅಧ್ಯಕ್ಷೆ ಐರಿನ್ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು.

ಸೌಹಾರ್ದ ಸಮಿತಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!