ಭಟ್ಕಳ: ವೋಲ್ವೋ ಬಸ್-ಟೆಂಪೊ ಅಪಘಾತ, 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಭಟ್ಕಳ ಅ.1: ತಾಲೂಕಿನ ತೆರ್ನಮಕ್ಕಿ ಚರ್ಚ್ ಸಮೀಪ ಕೆಎಸ್ಸಾರ್ಟಿಸಿ ವೋಲ್ವೋ ಬಸ್ ಹಾಗೂ ಟೆಂಪೊ ಒಂದರ ನಡುವೆ ಸಂಭವಿಸಿದ ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಬಸ್ ನ ಮುಂಬದಿ ಸೀಟ್‍ನಲ್ಲಿ ಕುಳಿತ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಡಿಕ್ಕಿಯ ತೀವ್ರತೆಗೆ ಬಸ್ ಮುಂಭಾಗದ ಎಡಭಾಗಕ್ಕೆ  ಹಾಗೂ ಟೆಂಪೋದ ಹಿಂಭಾಗದಲ್ಲಿ ಭಾರೀ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಕಾರವಾರದಿಂದ ಮಂಗಳೂರು ಕಡೆಗೆ ಹೊರಟಿದ್ದ ಐರಾವತ ಬಸ್, ಹೊನ್ನಾವರದಿಂದ ಭಟ್ಕಳ ಕಡೆಗೆ ಬರುತ್ತಿದ್ದ ಟೆಂಪೋಗೆ ಹಿಂದಿನಿಂದ ಡಿಕ್ಕಿಯಾಗಿದೆ ಎನ್ನಲಾಗಿದ್ದು, ಸ್ಥಳಕ್ಕೆ ಮುರುಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತದ ವಿಷಯ ತಿಳಿದು ಭಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾದ ಗೋವಿಂದ ನಾಯ್ಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!