ಜನರ ಬಗ್ಗೆ ಮಾತನಾಡಲು ಪಾದಯಾತ್ರೆಯಲ್ಲದೆ ಬೇರೆ ಯಾವುದೇ ದಾರಿಯೇ ಇಲ್ಲ-ರಾಹುಲ್ ಗಾಂಧಿ

ಚಾಮರಾಜನಗರ, ಸೆ.30: ಜನರ ಬಗ್ಗೆ ಮಾತನಾಡಲು ಪಾದಯಾತ್ರೆಯಲ್ಲದೆ ಬೇರೆ ಯಾವುದೇ ದಾರಿಯೇ ಇಲ್ಲ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಇಂದು ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯ ಸಮಾವೇಷವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ದೇಶ ಎದುರಿಸುತ್ತಿರುವ ಸಮಸ್ಯೆಗಳು, ನಡೆಯುತ್ತಿರುವ ಹಿಂಸೆ ಸೇರಿದಂತೆ ವಿವಿಧ ಗಂಭೀರ ವಿಷಯಗಳ ಬಗ್ಗೆ ಮಾತನಾಡಲು ಇರುವ ಮಾರ್ಗಗಳಾದ ದೇಶದ ಸಂಸತ್ತು, ಮಾಧ್ಯಮಗಳು ವಿರೋಧ ಪಕ್ಷದ ಪಾಲಿಗೆ ಮುಚ್ಚಿವೆ. ಆದ್ದರಿಂದ ಜನರ ಬಗ್ಗೆ ಮಾತನಾಡಲು ಪಾದಯಾತ್ರೆಯಲ್ಲದೆ ಬೇರೆ ದಾರಿಯೇ ಇಲ್ಲ. ಈ ಯಾತ್ರೆ ದೇಶದ ಧ್ವನಿ. ನಾನೊಬ್ಬನೇ ಅಲ್ಲ. ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಅವರ ಕಷ್ಟಗಳನ್ನು ಸಮಸ್ಯೆ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಜಾತಿ, ಧರ್ಮ, ಭಾಷೆ ಎಂಬ ಭೇದ ಭಾವ ಇಲ್ಲ. ಸಂವಿಧಾನ ರಕ್ಷಣೆಯ ಉದ್ದೇಶವನ್ನು ಹೊಂದಿರುವ ಈ ಯಾತ್ರೆಯನ್ನು ತಡೆಯಲಾಗದು ಎಂದರು.

ಬಿಜೆಪಿ, ಆರೆಸ್ಸೆಸ್ ವಿಚಾರಧಾರೆಗಳು ದೇಶದಲ್ಲಿ ದ್ವೇಷ, ಹಿಂಸೆಯನ್ನು ಸೃಷ್ಟಿಸುತ್ತಿವೆ. ದೇಶದ ಸಂವಿಧಾನ ಇಲ್ಲದಿದ್ದರೆ, ತ್ರಿವರ್ಣ ಧ್ವಜಕ್ಕೆ ಬೆಲೆ ಇಲ್ಲ. ಸಂವಿಧಾನವನ್ಜು ರಕ್ಷಿಸಬೇಕಾಗಿದೆ ಎಂದ ಅವರು, ಮಾಧ್ಯಮಗಳು ಸಂಪೂರ್ಣವಾಗಿ ಸರಕಾರದ ನಿಯಂತ್ರಣದಲ್ಲಿವೆ. ನಮ್ಮ ವಿಚಾರಗಳನ್ನು ಹೇಳುವುದಕ್ಕೆ ಅಲ್ಲಿ ಅವಕಾಶ ಇಲ್ಲ. ಸಂಸತ್ತಿನಲ್ಲಿ ನಾವು ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ. ವಿಧಾನಸಭೆಗಳಲ್ಲೂ ಮಾತನಾಡಲು ಅವಕಾಶ ಇಲ್ಲ. ಹಾಗಾಗಿ ಈ ಪಾದಯಾತ್ರೆ ಅನಿವಾರ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್, ಯಾತ್ರೆ ರಾಷ್ಟ್ರೀಯ ಸಂಯೋಜಕರಾದ ಯೋಗೇಂದ್ರ ಯಾದವ್, ಜೈರಾಮ್ ರಮೇಶ್, ಹಿರಿಯ ಸಾಹಿತಿ ದೇವನೂರು ಮಹದೇವ, ಹಿರಿಯ ಮುಖಂಡರಾದ ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಆರ್.ವಿ.ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ಸಿ.ಮಹಾದೇವಪ್ಪ, ಸಂಸದ ಡಿ.ಕೆ.ಸುರೇಶ್, ಮುಖಂಡರಾದ ಗೀತಾ ಪ್ರಸಾದ್, ಗಣೇಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!