ಹಿಜಾಬ್ ನಿಷೇಧ: ವಿಚಾರಣಾ ಅರ್ಜಿ ಸೆ.7 ಕ್ಕೆ ಮುಂದೂಡಿಕೆ- ಸುಪ್ರೀಂ

ಹೊಸದಿಲ್ಲಿ ಸೆ.5 : ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಇರುವ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೀಠವು ಸೆ.7 ಕ್ಕೆ ಮುಂದೂಡಿದೆ.

ಇಂದು ಹೈಕೋರ್ಟ್ ಆದೇಶದ ವಿರುದ್ಧದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಹೆಗ್ಡೆ ತಮ್ಮ ವಾದ ಮಂಡಿಸುವ ವೇಳೆ “ಹಿಜಾಬ್ ವಿಚಾರವನ್ನೇ ಮುಂದಿಟ್ಟುಕೊಂಡು ಶಿಕ್ಷಣವನ್ನು ನಿರಾಕರಿಸಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟಿಸ್ ಗುಪ್ತಾ, ಅವರು “ಸಮವಸ್ತ್ರ ಧರಿಸಬೇಕೆಂದು ಸರಕಾರ ಹೇಳುತ್ತಿದೆ ಆದರೆ ಅದರ ಮೇಲೆ ಬೇರೆ ವಸ್ತ್ರ ಧರಿಸಲು ಅನುಮತಿಸಬೇಕೆಂದು ನೀವು ಹೇಳುತ್ತಿದ್ದೀರಿ. ಇದೊಂದು ಧಾರ್ಮಿಕ ಪದ್ಧತಿಯಾಗಿರಬಹುದು, ಆದರೆ ಸಮವಸ್ತ್ರ ವಿಧಿಸಲಾಗಿರುವ ಶಾಲೆಯಲ್ಲಿ ಹಿಜಾಬ್ ಧರಿಸಬಹುದೇ ಎಂಬ ಪ್ರಶ್ನೆಯಿದೆ,” ಎಂದರು.

ಈ ಸಂದರ್ಭ ಮಧ್ಯ ಪ್ರವೇಶಿಸಿದ ಜಸ್ಟಿಸ್ ಧುಲಿಯಾ “ಇದು ಧಾರ್ಮಿಕ ಪದ್ಧತಿ ಹೇಗಾಗಬಹುದು. ಧಾರ್ಮಿಕ ಪದ್ಧತಿಯಲ್ಲ ಆದರೆ ಧಾರ್ಮಿಕ ಅಂಶವಿರಬಹುದು,” ಎಂದರು.

ಪ್ರಕರಣಕ್ಕೆ ಸಂಬಂಧಿಸಿ 23 ಅರ್ಜಿಗಳನ್ನು ಪೀಠದ ಮುಂದೆ ಪಟ್ಟಿ ಮಾಡಲಾಗಿದ್ದು, ಅವುಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವ ಹಕ್ಕನ್ನು ಕೋರಿ ಸುಪ್ರೀಂ ಕೋಟ್ರ್ಗೆ ನೇರವಾಗಿ ಸಲ್ಲಿಸಲಾದ ರಿಟ್ ಅರ್ಜಿಗಳಾಗಿವೆ. ಇನ್ನು ಕೆಲವು ವಿಶೇಷ ರಜೆ ಅರ್ಜಿಗಳಾಗಿದ್ದು, ಮಾರ್ಚ್ 15 ರಂದು ಕರ್ನಾಟಕ ಹೈಕೋರ್ಟ್ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದ ತೀರ್ಪನ್ನು ಇವು ಪ್ರಶ್ನಿಸುತ್ತವೆ.

Leave a Reply

Your email address will not be published. Required fields are marked *

error: Content is protected !!