ಉಡುಪಿ ಸಾಫಲ್ಯ ಟ್ರಸ್ಟ್: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವರ್ಷದಲ್ಲಿ 75 ಸಮಾಜಮುಖಿ ಕಾರ್ಯ

ಉಡುಪಿ ಆ.16 (ಉಡುಪಿ ಟೈಮ್ಸ್ ವರದಿ): ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಉಡುಪಿಯ ಸಾಫಲ್ಯ ಟ್ರಸ್ಟ್ ವತಿಯಿಂದ ಒಂದು ವರ್ಷದ ಅವಧಿಯಲ್ಲಿ 75 ಸಾಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

2021 ರ ಆ.15 ರಿಂದ 2022 ರ ಆ.15 ರ ನಡುವಿನ ಒಂದು ವರ್ಷದ ಅವಧಿಯಲ್ಲಿ ಸಾಫಲ್ಯ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ 75 ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಯೋಜನೆಗಳನ್ನು ಕೈಗೊಳ್ಳಲಾಗಿತ್ತು. ಹಾಗೂ ಈ ಕಾರ್ಯಗಳನ್ನು ಸದಸ್ಯರ ಸಹಕಾರದೊಂದಿಗೆ ಸಾಫಲ್ಯ ಟ್ರಸ್ಟ್ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.

ಸಾಫಲ್ಯ ಟ್ರಸ್ಟ್ ವತಿಯಿಂದ ನಿಗದಿತ ಸಮಯದಲ್ಲಿ ತುರ್ತಾಗಿ ಅಗತ್ಯ ಉಳ್ಳವರಿಗೆ ಸಹಾಯ, ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ನಿವೇಶನದ ರಿಪೇರಿಗಾಗಿ ಸಹಾಯ, ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಹಾಗೂ ಪುಸ್ತಕಗಳ ಕೊಡುಗೆ, ಕಲಾ ಪ್ರತಿಭೆಗಳಿಗೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ, ಕೋವಿಡ್ ಪೀಡಿತರಾಗಿ ನಿಶಕ್ತತೆಯಿಂದ ಅಸಹಾಯಕತೆಯಲ್ಲಿ ಬಳಲುತ್ತಿರುವವರಿಗೆ ಆಟೋಟ ಚಟುವಟಿಕೆಗಳಿಗೆ ಪ್ರೋತ್ಸಾಹ.

ಪರಿಸರ ಸಂರಕ್ಷಣೆಗೆ ಔಷಧಿಯ ತೋಟ ರಚಿಸಲು ಪ್ರೋತ್ಸಾಹ, ಆರೋಗ್ಯ ತಪಾಸಣಾ ಶಿಬಿರಗಳು, ಆರೋಗ್ಯ ಮಾಹಿತಿ ಹಾಗೂ ಆಪ್ತ ಸಮಾಲೋಚನೆ, ಅಸಹಾಯಕರಿಗೆ ಅಗತ್ಯವಿರುವ ಅಕ್ಕಿ, ಬಟ್ಟೆ, ಔಷಧಿಗಳ ಪೂರೈಕೆ, ವಿಶೇಷ ಮಕ್ಕಳ ಶಾಲೆಗೆ ಅಗತ್ಯ ಸಾಮಗ್ರಿಗಳ ಪೂರೈಕೆ, ಕೇಂದ್ರೀಯ ವಿದ್ಯಾಲಯದಲ್ಲಿ ಬೊಟಾನಿಕಲ್ ಗಾರ್ಡನ್ ನಿರ್ಮಾಣ, ಬೋರ್ಡ್ ಹೈಸ್ಕೂಲ್,

ಬಿಲ್ಲಾಡಿ ಪ್ರೌಢಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡ್ಕದಲ್ಲಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ, ಶ್ರವಣ ಸಾಧನ, ಗಾಲಿ ಕುರ್ಚಿಯಂತಹ ಪರಿಕರಗಳ ವಿತರಣೆ ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗುತ್ತಿದೆ.

2019ನೇ ಜುಲೈ 13ರಂದು ನೋಂದಣಿ ಮಾಡಿಕೊಂಡ ಸಾಫಲ್ಯ ಟ್ರಸ್ಟ್ ಜುಲೈ 14 ರಂದು ಅಜ್ಜರಕಾಡಿನ ಉಡುಪಿ ಮಹಿಳಾ ಸಭಾಭವನದಲ್ಲಿ ವಿದ್ಯುಕ್ತವಾಗಿ ಆರಂಭಗೊಂಡಿತು. ಸಾಫಲ್ಯ ಟ್ರಸ್ಟ್ ನಲ್ಲಿ  40 ಮಂದಿ ಸಮಾನ ಮನಸ್ಕರುಳ್ಳ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸಮಾಜಮುಖಿ ಮನೋಭಾವ ಹೊಂದಿರುವ ಮಹಿಳೆಯರು ಸದಸ್ಯರಾಗಿದ್ದಾರೆ.

ಇವರಲ್ಲಿ ಅನೇಕರು ನಿವೃತ್ತ ಪ್ರಾಂಶುಪಾಲೆಯರು, ಮುಖ್ಯೋಪಾಧ್ಯಾಯಿನಿಯರು, ಮೆಡಿಕಲ್ ಕಾಲೇಜ್ ಗಳಲ್ಲಿ ಡಾಕ್ಟರೇಟ್ ಪದವಿ ಪೂರೈಸಿ ದುಡಿಯುತ್ತಿರುವವರು, ಎಂ.ಎಸ್.ಡಬ್ಲ್ಯೂ ಪದವಿ ಮುಗಿಸಿ ಸಮಾಜ ಸೇವೆ ಮಾಡುತ್ತಿರುವವರು, ದಾದಿ ವೃತ್ತಿಯನ್ನ ಮಾಡುತ್ತಿರುವವರು, ವಿದ್ಯಾರ್ಥಿನಿಯರು, ಕಾನೂನು ಪದವೀಧರರು, ವೈದ್ಯರು, ಉಪಾಧ್ಯಾಯಿನಿಯರು, ಗೃಹಿಣಿಯರು, ಉದ್ದಿಮೆದಾರರು, ಕಲಾವಿದರು ಹೀಗೆ ವಿವಿಧ ವಿಷಯಗಳ ಪರಿಣಿತರು ಸೇರಿದ್ದಾರೆ.

ಪ್ರತಿಯೊಂದು ಆತ್ಮವು ಸಮರ್ಥವಾಗಿ ದೈವಿಕವಾಗಿದೆ ಎಂಬ ಸ್ವಾಮಿ ವಿವೇಕಾನಂದರವರ ವಾಣಿಯಂತೆ ಸಾಫಲ್ಯ ಟ್ರಸ್ಟ್ ಕಳೆದ ಮೂರು ವರ್ಷಗಳಿಂದ ಪ್ರತಿಯೊಬ್ಬ ಸದಸ್ಯರಲ್ಲಿನ ಅಂತರ್ಗತವಾದ ಶಕ್ತಿಯನ್ನು ಉಪಯೋಗಿಸಿಕೊಂಡು ತಾವೇ ಕ್ರೋಡೀಕರಿಸಿಕೊಂಡ ಸಂಪನ್ಮೂಲಗಳ ಸಹಕಾರದಿಂದ ತಮ್ಮಿಂದಾದ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದೆ.

ಹಾಗೂ ಸಾಂವಿಧಾನಿಕ ಮೌಲ್ಯಗಳನ್ನ ಎತ್ತಿ ಹಿಡಿದು ತಮ್ಮಿಂದಾದ ಸಮಾಜ ಸೇವೆಗಳನ್ನ ಮಾಡುತ್ತಾ ಬಂದಿದೆ. ಮಾತ್ರವಲ್ಲದೆ ಉತ್ತಮ ಸೇವಾ ಕಾರ್ಯಕ್ರಮಗಳಿಗೆ ಕೈಜೋಡಿಸುವಂತಹ 10 ಮಹಿಳೆಯರನ್ನ ಸೇರ್ಪಡೆಗೊಳಿಸಿ ಸಾಫಲ್ಯ ಮಹಿಳಾ ಯಕ್ಷಗಾನ ಬಳಗವು ಅಸ್ತಿತ್ವಕ್ಕೆ ಬಂದಿದೆ ಈ ಮೂಲಕ ಸಾಫಲ್ಯ ಟ್ರಸ್ಟ್ ಉಡುಪಿ ತನ್ನ ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡಿದೆ. ಇಲ್ಲಿ ಈ ಸದಸ್ಯರು ಪ್ರತಿ ತಿಂಗಳು ಸಭೆಯನ್ನು ಏರ್ಪಡಿಸಿ ತಾವು ಕೈಗೊಳ್ಳುವ ಸಮಾಜಮುಖಿ ಕಾರ್ಯಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸುತ್ತಾರೆ ಹಾಗೂ ನಮ್ಮದೇ ವಾಟ್ಸಪ್ ಗುಂಪನ್ನು ರಚಿಸಿಕೊಂಡು ಬೇಡಿಕೆ, ಕೋರಿಕೆಗಳು ಹಾಗೂ ಅಗತ್ಯತೆಗಳನ್ನ ಚರ್ಚಿಸಿ ಅತೀ ಅಗತ್ಯಗಳ ಅಗತ್ಯತೆಗಳನ್ನ ಪರಿಗಣಿಸಿ ಸ್ಪಂದಿಸುತ್ತಾರೆ. ಈ ಮೂಲಕ ಸಹೃದಯಿ ಸದಸ್ಯರ ದೇಣಿಗೆಯಿಂದ ಈ ಸೇವೆಗಳನ್ನು ಸಾಧಿಸುವಲ್ಲಿ ಸಾಫಲ್ಯ ಟ್ರಸ್ಟ್ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

error: Content is protected !!