ದೇಶದ ಸ್ವಾತಂತ್ರ್ಯಕ್ಕೆ ನಾವೇ ಕಾರಣ ಎಂದು ಕಾಂಗ್ರೆಸ್ಸಿಗರು ಪೋಸು ಕೊಡುತ್ತಾರೆ- ಶೋಭಾ ಕರಂದ್ಲಾಜೆ

ಉಡುಪಿ, ಆ.13: ದೇಶದ ಸ್ವಾತಂತ್ರ್ಯಕ್ಕೆ ನಾವೇ ಕಾರಣ ಎಂದು ಕಾಂಗ್ರೆಸ್ಸಿಗರು ಪೋಸು ಕೊಡುತ್ತಾರೆ. ಚೀನಾ ಪಾಕಿಸ್ತಾನ ಜೊತೆ ಕೈಜೋಡಿಸಿದವರು. ಇಟಲಿ ಯುರೋಪಿಗೆ ಹೋಗಿ ಭಾರತವನ್ನು ಅವಹೇಳನ ಮಾಡಿ ಭಾಷಣ ಮಾಡಿದವರಿಂದ ನಾವು ರಾಷ್ಟ್ರಭಕ್ತಿ ಕಲಿಯಬೇಕಾಗಿಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಆರ್.ಎಸ್.ಎಸ್ ಅನ್ನು ಅವಹೇಳನ ಮಾಡಿದವರಿಗೆ ತಿರುಗೇಟು ನೀಡಿದ ಅವರು, ಸ್ವಾತಂತ್ರ್ಯದ ಜನಾಂದೋಲನಕ್ಕಾಗಿ ರೂಪಗೊಂಡ ಕಾಂಗ್ರೆಸನ್ನು ವಿಸರ್ಜಿಸಲು ಗಾಂಧೀಜಿ ಹೇಳಿದ್ದರು. ಆದರೆ ಅಜ್ಜ ನೆಟ್ಟ ಆಲದ ಮರಕ್ಕೆ ಕಾಂಗ್ರೆಸ್ ನಾಯಕರು ನೇತು ಹಾಕಿಕೊಂಡಿದ್ದಾರೆ. ಇಂತಹ ಕಾಂಗ್ರೆಸ್ ಆರ್.ಎಸ್.ಎಸ್ ಮತ್ತು ಬಿಜೆಪಿಗೆ ಬುದ್ಧಿ ಹೇಳುತ್ತದೆ ಎಂದ ಅವರು, ಆರ್‍ಎಸ್‍ಎಸ್ ಮೇಲೆ ಕಾಂಗ್ರೆಸ್ ಕಾನೂನಾತ್ಮಕ ಕ್ರಮ ಕೈಗೊಂಡು ವಿಫಲವಾಗಿದ್ದಾರೆ. ಆರ್.ಎಸ್.ಎಸ್ ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ಉಳಿವಿಗಾಗಿ. ದೇಶಭಕ್ತಿ ಪ್ರೇರೇಪಿಸುವುದೇ ಆರ್‍ಎಸ್‍ಎಸ್ ಉದ್ದೇಶ ಎಂದರು.

ಜಾತಿ ಧರ್ಮ ಪಕ್ಷದ ಬಂಧನಗಳನ್ನು ಹೊರತುಪಡಿಸಿ ಅಮೃತ ಮಹೋತ್ಸವ ನಡೆಯುವ ವಿಶ್ವಾಸವಿದೆ. ಮನೆ ಮನೆಯಲ್ಲಿ ತಿರಂಗ ಹಾರಾಡುತ್ತದೆ ಹಾರಾಡಬೇಕು. ಮಕ್ಕಳು ಮತ್ತು ಯುವ ಜನಾಂಗಕ್ಕೆ ದೇಶಭಕ್ತಿಯ ಮರುಪೂರಣವಾಗಬೇಕು. ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿ ಟೀಕಿಸುವವರ ಮನಸ್ಸು ಕಲುಶಿತವಾಗಿದೆ. ಸ್ವಾತಂತ್ರ್ಯಕ್ಕಾಗಿ ಮಡಿದವರು ಮತ್ತು ದೇಶದ ಗಡಿ ಕಾಯುತ್ತಿರುವ ಯೋಧರಿಗಾಗಿ ತಿರಂಗ ಹಾರಿಸಿ. ರಾಜಕೀಯ ಮಾತುಗಳು ರಾಷ್ಟ್ರಧ್ವಜದ ವಿಚಾರದಲ್ಲಿ ಬೇಡ ಎಂದು ಹೇಳಿದ್ದಾರೆ.ಪರೇಶ್ ಮೇಸ್ತಾ ಆರೋಪಿಗಳಿಗೆ ಬಿಜೆಪಿ ಮಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆ ನೋಡಿದ್ದೇನೆ. ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ಸರ್ಕಾರ ಗಮನ ಹರಿಸಿ ಕ್ರಮ ಜರುಗಿಸಬೇಕು.

ಪರೇಶ್ ಮೆಸ್ತನ ಸಾವಿನ ಹಿನ್ನೆಲೆಯಲ್ಲಿ ನಾವೆಲ್ಲರೂ ಹೋರಾಟ ಮಾಡಿದ್ದೇವೆ. ಪರೇಶ್ ಮೇಸ್ತ ಕುಟುಂಬ ಮತ್ತು ನಮ್ಮ ವಿಚಾರಧಾರೆಗೆ ಘಾಸಿಯಾಗುವ ಬೆಳವಣಿಗೆ ನಡೆಯಬಾರದು. ತಪ್ಪಾಗಿದ್ದರೆ ಅದು ಸರಿಪಡಿಸಬೇಕು ಮತ್ತು ತನಿಖೆಯಾಗಬೇಕು ಎಂದರು.ಈ ವೇಳೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಪ್ರವೀಣ್ ನೆಟ್ಟಾರು ಯಾವುದೇ ವಿವಾದಗಳಲ್ಲಿಲ್ಲದ ವ್ಯಕ್ತಿ. ಹಿಂದೂ ಯುವಕರ ಹತ್ಯೆ ಮಾಡುವವರ ಮಾನಸಿಕತೆ ಏನೆಂದೇ ಅರ್ಥವಾಗುತ್ತಿಲ್ಲ. ಪ್ರವೀಣನನ್ನು ಹತ್ಯೆ ಮಾಡಿದವರಿಗೆ ಉಗ್ರ ಶಿಕ್ಷೆ ಆಗಬೇಕು. ಪ್ರವೀಣ್ ಕೊಲೆಯ ಹಿಂದಿನ ಶಕ್ತಿ ಯಾವುದು..? ಫೈನಾನ್ಸ್ ಮಾಡಿದವರು ಯಾರು..? ಕುಮ್ಮಕ್ಕು ಕೊಟ್ಟವರು ಯಾರು ಆಶ್ರಯ ಕೊಟ್ಟವರು ಯಾರು..? ಎಲ್ಲಾ ವಿಚಾರವನ್ನು ಎನ್.ಐ.ಎ ತನಿಖೆ ಮಾಡುತ್ತದೆ. ಕೇವಲ ಕೊಲೆ ಆರೋಪಿಗಳಲ್ಲ ಎಲ್ಲರ ಹಿಂದೆ ಎನ್.ಐ.ಎ ಬಿದ್ದಿದೆ. ಮುಂದೆ ಇಂತಹ ಘಟನೆಯಾಗದಂತೆ ಭಯ ಹುಟ್ಟಿಸಬೇಕು. ಯಾವುದೇ ಎರಡು ತೊಡರು ಬಂದರೂ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಕೇಂದ್ರ ಗೃಹ ಸಚಿವರಲ್ಲಿ ಕೇಳಿದ್ದೇನೆ. ನನ್ನ ಬೇಡಿಕೆಗೆ ಗೃಹ ಸಚಿವ ಅಮಿತ್ ಶಾ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!