ಉಡುಪಿ: ಬಾಬಾ ರಾಮ್‌ದೇವ್‌ ಯೋಗ ಶಿಬಿರ

ಉಡುಪಿ: ಹರಿದ್ವಾರದ ಪತಂಜಲಿ ಯೋಗ ಸಮಿತಿಯ ಯೋಗಗುರು ಬಾಬಾ ರಾಮ್‌ದೇವ್‌ ಅವರು ಡಿ.3ರಿಂದ 7ರವರೆಗೆ ಉಡುಪಿಯಲ್ಲಿ ಬೃಹತ್ ಯೋಗ ಶಿಬಿರ ನಡೆಸಿಕೊಡಲಿದ್ದಾರೆ ಎಂದು ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಹೇಳಿದರು.

ಶ್ರೀಕೃಷ್ಣಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬೆಳಿಗ್ಗೆ 5ರಿಂದ 7ರವರೆಗೆ ಬಾಬಾ ರಾಮ್‌ದೇವ್‌ ಉಚಿತವಾಗಿ ಯೋಗ ಹೇಳಿಕೊಡಲಿದ್ದಾರೆ. ಮೊದಲ ಬಾರಿಗೆ 5 ದಿನಗಳ ದೀರ್ಘ ಶಿಬಿರ ನಡೆಯುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಯೋಗ ದೇಶದ ಶ್ರೀಮಂತ ಪರಂಪರೆಯಿಂದ ಬಳುವಳಿಯಾಗಿ ಬಂದಿರುವ ಅಪೂರ್ವ ವಿದ್ಯೆಯಾಗಿದ್ದು, ವಿಶ್ವವೇ ಯೋಗವನ್ನು ಒಪ್ಪಿ, ಅಪ್ಪಿ
ಕೊಂಡಿದೆ. ಜಾಗತಿಕವಾಗಿ ಯೋಗ ಪ್ರಸಿದ್ಧಿಯಾಗಲು ಕಾರಣವಾಗಿರುವ ಪತಂಜಲಿ ಯೋಗ ಪೀಠ ಉಡುಪಿಯಲ್ಲಿ ಯೋಗ ಕಲಿಸಿಕೊಡಲು ಬರುತ್ತಿರುವುದು ಸಂತಸ ತಂದಿದೆ ಎಂದರು.

ಜಾತಿ, ಮತ, ಧರ್ಮ, ಲಿಂಗ ಮೀರಿದ ಯೋಗವನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡಬೇಕು. ಯೋಗದ ಮೊರೆ ಹೋದರೆ ಸದೃಢ ಆರೋಗ್ಯ ಖಂಡಿತ ಪ್ರಾಪ್ತಿಯಾಗುತ್ತದೆ. ಶಿಬಿರದಲ್ಲಿ 25,000 ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಪತಂಜಲಿ ಯೋಗಪೀಠದ ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರಲಾಲಾ
ಜಿಆರ್ಯ ಮಾತನಾಡಿ, ದೇಹದೊಳಗಿರುವ ಶಕ್ತಿಯನ್ನು ಜಾಗೃತಗೊಳಿಸುವ
ವಿದ್ಯೆ ಯೋಗ. ಪತಂಜಲಿ ಸಂಸ್ಥೆ ದೇಶದಾದ್ಯಂತ ಯೋಗ ಶಿಬಿರಗಳನ್ನು ನಡೆಸುತ್ತ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪತಂಜಲಿ ಯೋಗಪೀಠದ ಮಹಿಳಾ ರಾಜ್ಯ ಪ್ರಭಾರಿ ಸುಜಾತಾ ಮಾರ್ಲ, ರಾಜ್ಯ ಸಹಪ್ರಭಾರಿ ಡಾ.ಜ್ಞಾನೇಶ್ವರ ನಾಯಕ್‌, ಉಡುಪಿ ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ, ಕೃಷ್ಣಮಠದ ಆಡಳಿತಾಧಿಕಾರಿ ಪಿ.ಆರ್.ಪ್ರಹ್ಲಾದ್ ಆಚಾರ್ಯ, ಪತಂಜಲಿ ಯೋಗ ಪೀಠದ ಜಿಲ್ಲಾಧ್ಯಕ್ಷ ಕರಂಬಳ್ಳಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಅಜಿತ್ ಶೆಟ್ಟಿ, ಮಠದ ಪಿಆರ್‌ಒ ಕಡೆಕಾರ್ ಶ್ರೀಶಟ್, ವಿಷ್ಣು ಆಚಾರ್ಯ ಇದ್ದರು.

Leave a Reply

Your email address will not be published. Required fields are marked *

error: Content is protected !!