ಉಡುಪಿ: ಸೆ.26 ರಿಂದ ಮರಳು

ಉಡುಪಿ: ಜಿಲ್ಲೆಯ ಸಿಆರ್‌ಜೆಡ್ ವ್ಯಾಪ್ತಿಯಲ್ಲಿರುವ ಪಾಪನಾಶಿನಿ ನದಿ ತೀರದಲ್ಲಿ 4, ಸ್ವರ್ಣಾ ನದಿ ಬಳಿ 1, ಸೀತಾ ನದಿ ಅಚ್ಚುಕಟ್ಟಿನಲ್ಲಿ 3 ಸೇರಿ 8 ಕಡೆಗಳಲ್ಲಿ ಮರಳು ದಿಬ್ಬಗಳ ತೆರವಿಗೆ ಕರಾವಳಿ ನಿಯಂತ್ರಣ ವಲಯ ಅನುಮತಿ ನೀಡಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು.

 8 ದಿಬ್ಬಗಳಲ್ಲಿ 7,96,522 ಮೆಟ್ರಿಕ್ ಟನ್‌ ಲಭ್ಯವಿದೆ ಎಂದು ತಜ್ಞರು ವರದಿ ನೀಡಿದ್ದಾರೆ. 158 ಸಾಂಪ್ರದಾಯಿಕ ಮರಳು ತೆಗೆಯುವವರು ಮರಳು ದಿಬ್ಬಗಳ ತೆರವಿಗೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಡಳಿತ ಅರ್ಜಿಗಳ ಪರಿಶೀಲನೆ ನಡೆಸುತ್ತಿದ್ದು, ಅರ್ಹರಿಗೆ ಪರವಾನಗಿ ನೀಡಲಿದೆ ಎಂದು ಮಾಹಿತಿ ನೀಡಿದರು.

ದೋಣಿಗಳಿಗೆ ಜಿಪಿಎಸ್‌ ಅಳವಡಿಸುವ ಕಾರ್ಯ ಮುಗಿದಿದೆ. ಮರಳು ಸಾಗಿಸುವ ಲಾರಿಗಳಿಗೆ ಅಳವಡಿಸುವ ಜಿಪಿಎಸ್‌ಗಳ ಪರಿಶೀಲನೆ ನಡೆಸಲಾಗುವುದು. ಮರಳು ದಿಬ್ಬಗಳಿಗೆ ಜಿಯೋ ಫೆನ್ಸಿಂಗ್ ಕೂಡ ತ್ವರಿತವಾಗಿ ನಡೆಯಲಿದೆ. ಪರವಾನಗಿ ನೀಡಿದ ಕೂಡಲೇ ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭವಾಗಲಿದೆ ಎಂದು ತಿಳಿಸಿದರು.‌

ಪರವಾನಗಿದಾರರು ನಿರ್ದಿಷ್ಟ ಜಾಗದಲ್ಲಿ ಮಾತ್ರ ಮರಳು ದಿಬ್ಬ ತೆರವು ಮಾಡಬೇಕು. ಸೇತುವೆ ಬಳಿ, ಕಾಂಡ್ಲಾ ಗಿಡಗಳ ಬಳಿ ಮರಳು ತೆಗೆದರೆ, ಜಿಪಿಎಸ್‌ ಮಾಹಿತಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಮರಳು ಜಿಲ್ಲೆಯಿಂದ ಹೊರಹೋಗದಂತೆ ನಿಗಾವಹಿಸಲಾಗುವುದು ಎಂದರು.

ದಕ್ಕೆಯಲ್ಲಿ 10 ಟನ್‌ ಮರಳಿಗೆ ₹ 5,500 ದರ ನಿಗದಿ ಮಾಡಲಾಗಿದೆ. ಸಣ್ಣ ವಾಹನಕ್ಕೆ 20 ಕಿ.ಮೀ.ವರೆಗೂ ₹ 1,500 ಸಾಗಣೆ ವೆಚ್ಚ ನೀಡಬೇಕು. ಬಳಿಕ ಪ್ರತಿ ಕಿ.ಮೀಗೆ ₹ 35 ನೀಡಬೇಕು. ದೊಡ್ಡ ವಾಹನಕ್ಕೆ ₹ 2,500 ಪಾವತಿಸ ಬೇಕು. ನಂತರ ಪ್ರತಿ ಕಿ.ಮೀಗೆ ₹ 50 ವೆಚ್ಚ ಭರಿಸಬೇಕು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2 ವರ್ಷಗಳಿಂದ ಮರಳು ಗಾರಿಕೆ ನಡೆಯದ ಕಾರಣ ಆ್ಯಪ್‌ನ ಬದಲಾಗಿ ನೇರವಾಗಿ ಮಾರಾಟ ಮಾಡಲು ತಾತ್ಕಾಲಿಕ ಅನುಮತಿ ನೀಡಲಾಗಿದೆ. ಮೂರು ತಿಂಗಳ ಬಳಿಕ ಸ್ಯಾಂಡ್‌ ಬಜಾರ್ ಆ್ಯಪ್‌ ಮೂಲಕವೇ ಸಾರ್ವಜನಿಕರಿಗೆ ಮರಳು ಮಾರಾಟ ನಡೆಯಲಿದೆ ಎಂದರು.

ಸ್ವರ್ಣಾನದಿ ತೀರದಲ್ಲಿ ಹೂಳೆತ್ತಲು ಟೆಂಡರ್ ನೀಡಲಾಗಿದ್ದು, ಅಲ್ಲಿ ಲಭ್ಯ ವಾಗುವ ಮರಳನ್ನು ಸ್ಟಾಕ್‌ ಯಾರ್ಡ್‌ಗೆ ಸಾಗಿಸಲಾಗುವುದು. ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಮರಳು ನೀಡುವುದು ಜಿಲ್ಲಾಡಳಿತದ ಆದ್ಯತೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!