ಒಂದು ಗೂಡಿನ ಕಥೆ
ಭಾವನೆಗಳಿಗೆ ಸ್ಪಂದಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿರುವ ಜೀವಿಗಳು ನಾವು. ಆದರೂ ಒಮ್ಮೊಮ್ಮೆ ನಮ್ಮ ಮನಸ್ಸನ್ನು ಬಂಜರು ಭೂಮಿಯಂತೆ ಬರಿದಾಗಿಸುತ್ತೇವೆ. ತೀರಾ ಇತ್ತೀಚೆಗೆ ನಮ್ಮ ಮನೆಯಲ್ಲಿ ಬುಲ್-ಬುಲ್ ಜೋಡಿಯೊಂದು ಗೂಡು ಕಟ್ಟುವ ತಯಾರಿ ನಡೆಸಿತ್ತು, ಗೂಡು ಕಟ್ಟುವವರೆಗೂ ನಮ್ಮ ಗಮನ ಅದರ ಮೇಲೆ ಅಷ್ಟೇನೂ ಹರಿಯಲೇ ಇಲ್ಲ. ಯವಾಗ ಗೂಡು ಕಟ್ಟಿ ಅದರಲ್ಲಿ ಎರಡು ಮೊಟ್ಟೆ ಇಟ್ಟಿತೋ, ಆಗ ನಮಗೆ ಅತೀವ ಅಚ್ಚರಿ! ಇಷ್ಟು ಬೇಗ ಗೂಡು ಕಟ್ಟಿ ಮೊಟ್ಟೆಯನ್ನೂ ಇಟ್ಟು ಕಾವೂ ಕೊಡುತ್ತಿದೆಯಲ್ಲಾ ಎಂಬ ಕೌತುಕ ಒಂದು ಕಡೆಯಾದರೆ, ಅದು ಇಷ್ಟು ಚೆನ್ನಾಗಿ ಗೂಡು ಕಟ್ಟಿದ್ದನ್ನು ನಾವು ಗಮನಿಸಲೇ ಇಲ್ಲವಲ್ಲಾ ಎಂಬ ಪಶ್ಚತ್ತಾಪ ಇನ್ನೊಂದೆಡೆ!
ಕಿಟಕಿಯಿಂದ ಪರ್ರನೆ ಹಾರಿ ಬಂದು ಗೂಡು ಸೇರಿಕೊಂಡು ಮೊಟ್ಟೆಗೆ ಕಾವು ಕೊಡುವ ಹಕ್ಕಿ, ಯಾರಾದರೂ ಸ್ವಲ್ಪ ಇಣುಕಿ ನೋಡಿದರೂ ರಪ್ಪನೆ ಹಾರಿ ಹೋಗುತ್ತಿತ್ತು. ನಮ್ಮ ಮೇಲೆ ಅಷ್ಟೂ ನಂಬಿಕೆ ಇರದಿದ್ದರೆ ನಮ್ಮ ಮನೇಲೇ ಯಾಕೆ ಗೂಡು ಕಟ್ಟಬೇಕಿತ್ತು? ಎಂದು ಕೋಪವೂ ಬರುತ್ತಿತ್ತು. ಆದರೂ ಆ ಪುಟಾಣಿ ಜೀವಿ ಯಾರ ಹಂಗೂ ಇಲ್ಲದೆ ಅಷ್ಟು ಚೆನ್ನಾಗಿ ಗೂಡು ಕಟ್ಟಿದ್ದನ್ನು ನೋಡಿ ತುಂಬಾ ಸಂತಸವಾಗುತ್ತಿತ್ತು.
ಇದ್ದಕ್ಕಿದ್ದಂತೆ ಒಂದು ದಿನ ಜೋಡಿ ಹಕ್ಕಿಗಳ ಕಲರವ ಜೋರಾಯಿತು! ಕಿಟಕಿಯ ಬಳಿ ಈ ಜೋಡಿ ಹಕ್ಕಿಗಳದ್ದೇ ಸಾಮ್ರಾಜ್ಯ ಎನ್ನುವಷ್ಟು ಅವುಗಳ ಹಾರಾಟ, ಕೂಗಾಟ! ಕೌತುಕ ತಾಳಲಾರದೆ, ಆ ಹಕ್ಕಿಗಳು ಇರದ ಸಮಯದಲ್ಲಿ ಮೆಲ್ಲನೆ ಹೋಗಿ ಆ ಗೂಡನ್ನು ಇಣುಕಿ ನೋಡಿದರೆ! ಆಹಾ! ಎರಡು ಮುದ್ದಾದ ಮರಿ ಬುಲ್ ಬುಲ್ ಗಳು ನಿರಾಳವಾಗಿ ಮಲಗಿವೆ. ಇನ್ನೇನು? ಮರಿ ಹುಟ್ಟಿಯಾಗಿದೆ, ಈ ಜೋಡಿ ಹಕ್ಕಿಗಳಿಗೆ ತಮ್ಮ ಮರಿಗಳ ಹೊಟ್ಟೆ ತುಂಬಿಸುವುದೊಂದೇ ಕೆಲಸ. ನೋಡುತ್ತಿದ್ದಂತೆಯೇ ಈ ಜೋಡಿ ತಮ್ಮ ಪುಟಾಣಿಗಳಿಗೆ ಹಾರುವುದನ್ನೂ ಕಲಿಸಿಬಿಟ್ಟಿತು. ಕೆಲವೇ ದಿನಗಳಲ್ಲಿ ಅವೆಲ್ಲಾ ನಮ್ಮನ್ನೂ, ತಾವು ಕಟ್ಟಿದ ಗೂಡನ್ನೂ ಬಿಟ್ಟು ಹಾರಿ ಹೋದವು.
ಹಕ್ಕಿಗಳು ಹೋದರೂ ಅವುಗಳ ನೆನಪಿಗಾಗಿ ಆ ಗೂಡು ಇನ್ನೂ ಹಾಗೇ ಇದೆ. ಅಪರೂಪಕ್ಕೊಮ್ಮೆ ಅಲ್ಲಿ ಇಲ್ಲಿ ಕಾಣ ಸಿಗುವ ಆ ಜೋಡಿ ಹಕ್ಕಿಗಳು ಮತ್ತೆ ನಮ್ಮ ಮನೆಯಲ್ಲಿಯೇ ಗೂಡು ಕಟ್ಟಲಿ ಎಂಬ ಚಿಕ್ಕದೊಂದು ಆಸೆ! ಅಲ್ಲ, ಬೇಡಿಕೆ.
ಶರಣ್ಯ ಬಿ ಆಚಾರ್ಯ
Wow !! This is Soo beautiful!