ಮಳೆಗಾಲದ ಒಂದು ಸಂಜೆ

 ಹಗಲು ರಾತ್ರಿಗಳು ಒಂದನ್ನೊಂದು ಹಿಂಬಾಲಿಸುವ ಆತುರದಲ್ಲಿ ಕಾಲಚಕ್ರ ಬಹಳ ವೇಗವಾಗಿ ಮುಂದೆ ಚಲಿಸುತ್ತಿದೆ. ಪ್ರತಿ ವರ್ಷ ಮಳೆಗಾಲ ಬರುವುದು ನಿಶ್ಚಯವಾದರೂ, ಮೊದಲ ಮಳೆಯ ಆಗಮನಕ್ಕಾಗಿ ಕಾಯುವ ಸಡಗರಕ್ಕೆ ಲೆಕ್ಕವೇ ಇಲ್ಲ. ವಟಗುಟ್ಟುವ ಕಪ್ಪೆಯಿಂದ ಹಿಡಿದು ಗದ್ದೆಯಲ್ಲಿ ಬೀಜ ಬಿತ್ತುವ ರೈತನವರೆಗೂ ಪ್ರತಿ ಜೀವಿಯೂ ಮಳೆಗಾಗಿ ಹಾತೊರೆಯುತ್ತದೆ.

ಝಳ ಝಳಿಸುವ ಬೇಸಿಗೆಯ ಸೂರ್ಯನಿಗೊಂದು ವಿರಾಮ ಕೊಟ್ಟು ಇಡೀ ಆಗಸ ಮಳೆ ಮೋಡಗಳಿಂದ ತುಂಬಿಕೊಂಡಾಗ ಕೆರೆ ಬದಿಯ ಕಪ್ಪೆರಾಯನಿಗೂ, ಗರಿ ಬಿಚ್ಚಿ ಕುಣಿಯುವ ನವಿಲಿಗೂ ಅತೀವ ಸಂತಸ.ತುಂತುರು ಹನಿಗಳ ಸ್ಪರ್ಶದಿಂದ ಒದ್ದೆಯಾದ ಮಣ್ಣು ಹೊರಸೂಸುವ ಕಂಪಿಗೆ ಸರಿಸಾಟಿ ಎಲ್ಲೂ ಇಲ್ಲ. 

ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಅವುಗಳ ಹಿಂದೆಯೇ ಓಡುವ ಅವಸರದಲ್ಲಿ ಮನಸ್ಸಿಗೆ ಮುದ ನೀಡುವ ಚಿಕ್ಕ ಚಿಕ್ಕ ವಿಷಯಗಳನ್ನು ನಾವು ಬಹುಶಃ ಅಲ್ಲೆಗಳೆಯುತ್ತಿದ್ದೇವೆ. 

ಒಂದೇ ಕೊಡೆಯ ಕೆಳಗೆ ಜೊತೆಯಾಗಿ ನಡೆಯುವ ಪ್ರೇಮಿಗಳಿಗೆ ಮಳೆ ಅಚ್ಚುಮೆಚ್ಚಾದರೆ, ಆಫೀಸ್ ಹೊರಟವರಿಗೆ ಮಳೆಯ ಮೇಲೆ ತುಂಬಾ ಸಿಟ್ಟು. ಜೋರು ಮಳೆಯಿಂದ ಶಾಲೆಗೆ ರಜೆ ಸಿಕ್ಕಾಗ ಮಳೆರಾಯ ಪುಟಾಣಿಗಳ ಫೇವರೇಟ್ ಆದರೆ, ಒಗೆದು ಹಾಕಿದ ಬಟ್ಟೆ ಒಣಗದಿದ್ದಾಗ ಪಿಸು ಪಿಸು ಬೈಯುವ ಹೆಂಗಸರಿಗೆ ಮಳೆಯೆಂದರೆ ಅಲರ್ಜಿ.

ಮೆಲ್ಲನೆ ಸುರಿವ ಮಳೆ, ತಂಪಾಗಿ ಬೀಸುವ ಗಾಳಿ, ಮನಸ್ಸಿಗೆ ಹತ್ತಿರವಾದ ನಾಲ್ಕು ಸ್ನೇಹಿತರೊಂದಿಗೆ ಬೀದಿ ಬದಿಯ ಬಂಡಿಯಲ್ಲಿ ಬಿಸಿ ಬಿಸಿ ತಿಂಡಿ ಮೆಲ್ಲುವವರಿಗೆ ಮಳೆಯೆಂದರೆ ಬಹಳ ಪ್ರೀತಿ. 

ನಮಗೆಲ್ಲಾ ಜೀವಜಲವೆಂಬ ಉಡುಗೊರೆಯನ್ನು ಪ್ರೀತಿಯಿಂದ ಉಣಬಡಿಸುವ ಮಳೆರಾಯನಿಗೆ ಒಂದು ಸಣ್ಣ ಥಾಂಕ್ಸ್ ಕೂಡ ಹೇಳದೆ, ತಮ್ಮ ಕೆಲಸಗಳಿಗೆ ಅಡಚಣೆಯುಂಟಾಗುತ್ತದೆ ಎನ್ನುತ್ತಾ ಹಿಡಿಶಾಪ ಹಾಕುವ ಬದಲು, ಹೀಗೇ ಒಂದು ಮಳೆಗಾಲದ ಸಂಜೆ, ಮನೆಯ ಅಂಗಳದಲ್ಲಿ ಕೂತು, ಕೈಯಲ್ಲೊಂದು ಕಪ್ ಬಿಸಿ ಬಿಸಿ ಕಾಫೀ, ಬಾಯಾಡಿಸಲು ಅಜ್ಜಿ ಮಾಡಿದ ಗರಿ ಗರಿ ಹಪ್ಪಳ ಇಟ್ಟುಕೊಂಡು ಮಳೆರಾಯನನ್ನು ಸ್ವಾಗತಿಸೋಣ! ಏನಂತೀರಾ?”Let’s welcome rain with a cup of hot coffee!”.

ಶರಣ್ಯ ಬಿ ಆಚಾರ್ಯ

Leave a Reply

Your email address will not be published. Required fields are marked *

error: Content is protected !!