ಛಾಯಾಗ್ರಹಣ ಎನ್ನುವುದೊಂದು ಕಲೆ

ಛಾಯಾಗ್ರಹಣ ಎನ್ನುವುದೊಂದು ಕಲೆ. ಅದನ್ನು ನಾವೇ ಬೆಳೆಸಿಕೊಳ್ಳಬೇಕೆ ಹೊರತು ಗುರುಗಳಿಂದ ಹೇಳಿಸಿಕೊಂಡು ಕಲಿಯುವುದಲ್ಲ. ನಮ್ಮ ಕ್ರೀಯಾಶಿಲತೆಯನ್ನು ನಾವು ಛಾಯಾಗ್ರಹಣದಲ್ಲಿ ಬೆಳೆಸಿಕೊಳ್ಳಬೇಕು. ಅನೇಕ ಛಾಯಾಗ್ರಾಹಕರು ಎಲೆಮರೆಯ ಕಾಯಿಯಂತಿರುತ್ತಾರೆ. ಅವರಲ್ಲಿ ಜಿನೇಶ್ ಪ್ರಸಾದ್ ಕೂಡಾ ಒಬ್ಬರು.

ಆರಂಭಿಕ ಜೀವನ:
ಇವರ ಹುಟ್ಟೂರು ಕಾರ್ಕಳ ಸಮೀಪದ ನೆಲ್ಲಿಕಾರು ಗ್ರಾಮ. ಬಾಲ್ಯದಿಂದಲೂ ಇವರು ಕಲೆಯ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದರು. ಎಸ್.ಡಿ.ಎಮ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ತಮ್ಮ ಪದವಿಯನ್ನು ಪೂರೈಸಿದ ಇವರು ತಮಗೆ ಸಿಕ್ಕ ಸ್ಕಾಲರ್‍ಶಿಪ್‍ನಿಂದ ಒಂದು ಕ್ಯಾಮರಾವನ್ನು ಖರೀದಿಸಿ, ಅದರ ಮೂಲಕ ಈ ವೃತ್ತಿಯನ್ನು ಆರಂಭಿಸಿದರು. ಕಲಾಸಕ್ತಿ ಇರುವ ಕಾರಣ ಅದನ್ನೇ ಮುಂದುವರೆಸಲು ನಿರ್ಧರಿಸಿ, ಹಣಕಾಸಿನ ಸಮಸ್ಯೆ ಇರುವ ಕಾರಣ ತಮ್ಮಲ್ಲಿದ್ದ ಕ್ಯಾಮರಾವನ್ನು ಮಾರಿ ಬಂದ ಹಣದಿಂದ ಬೆಂಗಳೂರಿನಲ್ಲಿ ಕಲಾ ಕ್ಷೇತ್ರದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಆರಂಭಿಸಿದರು. ಕಾರಾಣಾಂತರಗಳಿಂದಾಗಿ ಒಂದೇ ವರ್ಷಕ್ಕೆ ಆ ವ್ಯಾಸಾಂಗವನ್ನು ಸ್ಥಗಿತಗೊಳಿಸಿದರು. ನಂತರ ಪುನಃ ಕ್ಯಾಮೆರಾ ತಮ್ಮ ಜೀವನದ ಕೈ ಹಿಡಿಯಿತು. ತಮ್ಮ ಹುಟ್ಟೂರಿಗೆ ಬಂದ ಅವರು ಪುಟ್ಟದಾದ ಸ್ಟುಡಿಯೋವನ್ನು ಆರಂಭಿಸಿದರು. ಅದಕ್ಕೆ “ಪೊರ್ಲು” ಎಂಬ ಕ್ರಿಯಾತ್ಮಕ ಹೆಸರನ್ನಿತ್ತರು. ಆ ಹೆಸರಿನಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಸಿದ್ಧಿಯನ್ನು ಪಡೆಯುವುದರ ಜೊತೆಗೆ ಗುರುತಿಸಿಕೊಂಡವರು. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ವಾಸಿಸುತ್ತಿದ್ದಾರೆ.

ಪ್ರೇರೆಣಾ ಶಕ್ತಿ:
ಜಿನೇಶ್ ಪ್ರಸಾದ್ ಹೇಳುವ ಪ್ರಕಾರ, ಇಪ್ಪತ್ತೈದು ವರ್ಷಗಳ ಹಿಂದೆ ಆಳ್ವಾಸ್ ಕಾಲೇಜಿನಲ್ಲಿ ವಿರಾಸತ್ ಆರಂಭವಾದ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರ ಪ್ರೋತ್ಸಾಹದಿಂದ ವಿರಾಸತ್ ಇವರ ಪ್ರತಿಭೆಗೆ ಒಂದು ಸೂಕ್ತ ವೇದಿಕೆಯಾಯಿತು. ಇದು ಅವರು ಜೀವನದ ಉನ್ನತೀಕರಣಕ್ಕೆ ಮೊದಲ ಹಂತವಾಯಿತು. ಅನೇಕರಿಗೆ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ಅವಕಾಶಗಳು ದೊರೆಯುವುದಿಲ್ಲ. ಆದ್ದರಿಂದ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಆಗಲೇ ಜೀವನದಲ್ಲಿ ಏನನ್ನಾದರು ಸಾಧಿಸಲು ಸಾಧ್ಯ ಎಂಬುದನ್ನು ಅರಿತು ತಮ್ಮ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಗೈದಿದ್ದಾರೆ.

ಹವ್ಯಾಸಿ ಕ್ಷೇತ್ರಗಳು:
ದೇಶ- ವಿದೇಶಗಳನ್ನು ಸುತ್ತಿವುದರಿಂದ ಹಲವಾರು ಧೈರ್ಯ ಹಾಗೂ ಹೊಸರೀತಿಯ ಅನುಭವಗಳನ್ನು ಸಂಪಾದಿಸಬಹುದು. ಜೊತೆಗೆ ಅಲ್ಲಿನ ಜೀವನ ಶೈಲಿಗಳನ್ನು ತಿಳಿದುಕೊಳ್ಳಬಹುದು ಎಂಬ ಮನೋಭಾವದಿಂದ ಛಾಯಾಗ್ರಹಣದ ಜೊತೆಗೆ ಪ್ರವಾಸಿ ಹವ್ಯಾಸವನ್ನು ರೂಢಿಸಿಕೊಂಡರು. ಆದ್ದರಿಂದ ಇಂಡೋನೇಷ್ಯಾ, ಥೈಲ್ಯಾಂಡ್, ಬಾಂಗ್ಲಾದೇಶ, ಮಲೇಷ್ಯಾ, ಶ್ರೀಲಂಕಾ, ಕಾಂಬೋಡಿಯಾ, ವಿಯೆಟ್ನಾಂ ಹೀಗೆ ಹಲವಾರು ದೇಶಗಳಿಗೆ ಪ್ರವಾಸ ಕೈಗೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ ಜಿನೇಶ್ ಪ್ರಸಾದ್. ಆದ್ದರಿಂದ ಟ್ರಾವೆಲ್ ಫೊಟೋಗ್ರಫಿ ಹಾಗೂ ಫೊಟೋ ಜರ್ನಲಿಸಂ ಇವರ ಆಸಕ್ತಿ ಕ್ಷೇತ್ರವಾಗಿದೆ

ಸಾಂಪ್ರದಾಯಿಕ ಚಿತ್ರಗಳು:
ಮೂಡಬಿದಿರೆ ಬಳಿಯ ಕಟೀಲು ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ “ಸೂಟೆದಾರ”(ಬೆಂಕಿಯ ಓಕುಳಿ) ಎಂಬುದು ದೇವರ ಸೇವೆ. ಅಲ್ಲಿ ತೆಗೆದ ಚಿತ್ರಕ್ಕೆ ಇವರಿಗೆ ಫೊಟೊಗ್ರಾಫಿಕ್ ಸೊಸೈಟಿ ಆಫ್ ಮಶಿದಬಾದ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಬೆಸ್ಟ್ ಫೆಸ್ಟಿವಲ್ಸ್ ಎಂಬುದಕ್ಕೆ ಪಿಎಸ್‍ಎಮ್ ಪದಕ ಹಾಗೂ ಪ್ರಥಮ ಅಂತರಾಷ್ಟ್ರೀಯ ಮಟ್ಟದ “ಫೊಟೊಸ್ಕ್ವಾರ್ 2018” ಸ್ಪರ್ಧೆಯಲ್ಲಿ ಚಿನ್ನದ ಪ್ರಶಸ್ತಿ ದೊರೆತಿದೆ. ಹಾಗೂ ಕರ್ನಾಟಕದಲ್ಲಿ ಕಂಬಳ ನಡೆಯುವಂತೆ ಕೇರಳದಲ್ಲಿ ಎತ್ತುಗಳ ಕಂಬಳ ನಡೆಯುತ್ತದೆ. ಅಲ್ಲಿ ಇವರು ತೆಗೆದ ಚಿತ್ರಕ್ಕೆ ಕೊಲ್ಕತ್ತಾ ಕ್ರಿಯೇಟಿವ್ ಆರ್ಟ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಎರಡು ಬೆಳಿಯ ಪದಕ ದೊರೆತಿದೆ. ಹೀಗೆ ಇವರು ಅನೇಕ ಛಾಯಾಚಿತ್ರಗಳನ್ನು ತೆಗೆದು ದೇಶ- ವೀದೇಶಗಳಲ್ಲಿ ತಮ್ಮ ಛಾಯಾಗ್ರಹಣದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅತ್ಯುನ್ನತ ಸಾಧನೆಗಳು ಅಥವಾ ಸಾಧನೆಯ ಮಜಲುಗಳು:
ಕಳೆದ ನಾಲ್ಕು ತಿಂಗಳಿನಿಂದ ತಾವು ತೆಗೆದ ಅನೇಕ ಚಿತ್ರಗಳನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಕಳುಹಿಸಿದ್ದಾರೆ. ಬೋಸ್ನಿಯಾ ದೇಶದ ಎರಡು ಬಹುಮಾನಗಳು, ದಕ್ಷಿಣ ಆಫ್ರಿಕಾದ ಒಂದು ಬಹುಮಾನ, ಸರ್ಬಿಯಾ ದೇಶದ ಒಂದು ಬಹುಮಾನ, ಪುಣೆ ಅಂತರಾಷ್ಟ್ರೀಯ ಡಿಜಿಟಲ್ ಫಟೊಗ್ರಾಫಿಂ ಸ್ಪರ್ಧೆಯಲ್ಲಿ ಒಂದು ಪದಕ, ಎಂಪ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಎರಡು ಪದಕ, ಕಲ್ಕತ್ತಾ ಕ್ರಿಯೇಟಿವ್ ಕ್ಲಬ್‍ನಿಂದ ಎರಡು ಪುರಸ್ಕಾರಗಳು, ಇ.ಪಿ.ಸಿ ರಾಷ್ಟ್ರೀಯ ಸ್ಪರ್ಧೆಯ ಚಿನ್ನದ ಪದಕ ಸೇರಿದಂತೆ ಬರೀ ನಾಲ್ಕು ತಿಂಗಳಲ್ಲಿ 15ಕ್ಕಿಂತಲೂ ಅಧಿಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಹಾಗೂ ಪುರಸ್ಕಾರಗಳು ಇವರಿಗೆ ಸಂದಿವೆ.
ಇತ್ತೀಚೆಗಷ್ಟೆ ಜಿನೇಶ್ ಪ್ರಸಾದ್ ಛಾಯಾಚಿತ್ರವೂ ಪ್ರತಿಷ್ಠಿತ ಅಮೇರಿಕ ಫೊಟೋಗ್ರಾಫಿಕ್ ಸೋಸೈಟಿಯ ಚಿನ್ನದ ಪದಕಕ್ಕೆ ಆಯ್ಕೆಯಾಗಿದೆ. ಅವರು ಒರಿಸ್ಸಾಗೆ ಭೇಟಿ ನೀಡಿದಾಗ ಗ್ರಾಮವೊಂದರಲ್ಲಿ ಅಲ್ಲಿನ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟ ಹೆಂಗಸು ತನ್ನ ಮಗುವಿಗೆ ಹಾಲುಣಿಸುವ ಛಾಯಾಚಿತ್ರ ಇದಾಗಿದೆ. ಓರಿಯಂಟ್ ಕ್ಯಾಮರಾ ಕ್ಲಬ್ ಆಯೋಜಿಸಿದ್ದ ಸ್ಪರ್ಧೆಯ ಪ್ರವಾಸಿ ವಿಭಾಗದ ಸ್ಪರ್ಧೆಯಲ್ಲಿ ಅವರ ಛಾಯಾಚಿತ್ರವು ಬಂಗಾರದ ಪದಕವನ್ನು ಗೆದ್ದುಕೊಂಡಿದೆ. ಈ ಬಹುಮಾನವು ಅವರು ಈ ವರ್ಷದಲ್ಲಿ ಪಡೆದ ಮೊದಲ ಅಂತರಾಷ್ಟ್ರೀಯ ಪುರಸ್ಕಾರವಾಗಿದ್ದು, ಇದೇ ಸ್ಪರ್ಧಾಕೂಟದಲ್ಲಿ ಇತರೆ ವಿಭಾಗದಲ್ಲಿ 19 ಛಾಯಾಚಿತ್ರಗಳು ಆಯ್ಕೆಗೊಂಡು ತೀರ್ಪುಗಾರರ ಗಮನಸೆಳೆದಿದ್ದು ಸಂತಸದ ಸಂಗತಿ. ಆದರೆ ಸಾಧನೆ ಮಾಡುವುದು ಇನ್ನಷ್ಟಿದೆ ಎಂದವರು ಹೇಳಿಕೊಂಡರು
ಹೊಸತನವನ್ನು ಬೆಳೆಸಿಕೊಳ್ಳುವ ಹುಮ್ಮಸ್ಸು ಹಾಗೂ ಛಲವೊಂದಿದ್ದರೆ ಎಂತಹ ಸಾಮಾನ್ಯ ಛಾಯಾಗ್ರಾಹಕರೂ ಖ್ಯಾತ ಹಾಗೂ ಪ್ರಸಿದ್ಧ ಛಾಯಾಗ್ರಾಹಕರಾಗಲು ಸಾಧ್ಯ ಎಂಬುದನ್ನು ತಮ್ಮ ಸಾಧನೆಯ ಮೂಲಕ ನೀರೂಪಿಸಿದ್ದಾರೆ ಹಾಗೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಬಾಕ್ಸ್ ಐಟಮ್:
ಆಸಕ್ತಿ, ಪ್ರವೃತ್ತಿ, ಅಭಿವ್ಯಕ್ತಿ, ಕಲೆಗಾರಿಕೆ ಹಾಗೂ ಗ್ರಹಿಸುವಿಕೆ ಛಾಯಾಗ್ರಹಣವನ್ನೇ ವೃತ್ತಿಯನ್ನಾಗಿಸಲು ಪ್ರಮುಖ ಅಂಶಗಳು. ಅವುಗಳನ್ನು ಬೆಳೆಸಿಕೊಂಡರೆ ಛಾಯಾಗ್ರಹಣ ಉತ್ತಮ ಜೀವನಾಧಾರ ವೃತ್ತಿಯನ್ನಾಗಿಸಬಹುದು. ಜೀವನದಲ್ಲಿ ಸವಾಲುಗಳು ಬರುವುದು ಸಹಜ, ಅವುಗಳನ್ನೆಲ್ಲಾ ದಾಟಿ ತಮ್ಮ ಛಲದತ್ತ ಸಾಗಬೇಕು. ಯುವಕರು ಹೊಸತನವನ್ನು ಬೆಳೆಸಿಕೊಳ್ಳಬೇಕು. ಛಾಯಾಗ್ರಾಹಕರಿಗೆ ಉತ್ತಮ ಕ್ಯಾಮರಾಗಳು ಮತ್ತು ತಂತ್ರಜ್ಞಾನಗಳ ಅರಿವಿರಬೇಕೆಂದಿಲ್ಲ, ಅವಲೋಕನಾ ಗುಣ ಹಾಗೂ ಕಲಿಯುವ ಹುಮ್ಮಸ್ಸಿದ್ದರೆ ಪ್ರವೃತ್ತಿಯಲ್ಲಿ ಛಾಪನ್ನು ಮೂಡಿಸಲು ಸಾಧ್ಯವೆಂಬುದು ಅವರ ಅಭಿಪ್ರಾಯ.

Leave a Reply

Your email address will not be published. Required fields are marked *

error: Content is protected !!