ಅಬ್ಬಾ…! ಏನ್ ಮಳೆ ರೀ ಈ ಬಾರಿ…
ನಾವು ಕರಾವಳಿಯವರಿಗೆ ವರ್ಷಕ್ಕೆ ಎರಡೇ season ಇರೋದು ಒಂದು ಮಳೆಗಾಲ ಇನ್ನೊಂದು ಸೆಕೆಗಾಲ.. ಆದರೆ ಈ ಬಾರಿ ಏಕೋ ಚಳಿಯೂ ಕೂಡ ಮಳೆ ಜೊತೆಗೆ ಸೇರಿ ಮೈತ್ರಿ ಸರಕಾರ ರಚಿಸಿದಂತಿದೆ.. ಮೊದಲೇ ಸೂರ್ಯ ವಂಶದವರು ನಾವು. ಈಗಂತೂ 7ಗಂಟೆಗೆ ಮೊದಲು ಕಾಲು ಭೂಸ್ಪರ್ಷ ಆಗಲೊಲ್ಲದು. ನಮಗೆ ಚಳಿಗಾಲದ ಪರಿಚಯವೇ ಇಲ್ಲ ಅಂದೆನಾ… ಹಾಗಿದ್ದ ಮೇಲೆ ಚಳಿಗಾಲದ ಬಟ್ಟೆಗಳು ಇಲ್ಲಿಯ ಯಾವ ಮನೆಯಲ್ಲೂ ದುರ್ಬೀನು ಹಿಡಿದು ನೋಡಿದರು ಸಿಗಲ್ಲ.. ಎಲ್ಲೋ ಹಸುಗೂಸಿನ ಬಳಿ ಇರಬಹುದು ಅಷ್ಟೇ.
ಬೆಳಗೆದ್ದು ಮೊದಲು ಮಾಡೋ ಕೆಲಸ ಅಂದರೆ ಒಂದು ದೊಡ್ಡ filter ಅಲ್ಲಿ ಕಾಫಿ ಡಿಕಾಕ್ಷನ್ ಹಾಕಿಡೋದು. ಮತ್ತೀಡೀ ದಿನ ಬಿಸಿಬಿಸಿ ಹಾಲು ಬೆರೆಸಿಕೊಂಡು ಹಬೆಯಾಡೊ ಕಾಫೀ ನಾ ಗುಟುಕೇರಿಸ್ತಾ ಇರಬೇಕೇ.. ಅಲ್ಲಾ ಮಾರ್ರೆ ಮಳೆಗಾಲಕ್ಕೆ ಮನೆ ಕೆಲಸನೆ ಆಗಲ್ಲ ನಂದು.. ಈ ಜಡಿ ಮಳೆ ಅಂಗಳಕ್ಕೆ ಕಾಲಿಡಲಿಕ್ಕೇ ಬಿಡ್ತಿಲ್ಲ. ಹೋಗ್ಲಿ ಬಿಡಿ ಮನೆ ಒಳಗಾದರೂ ಕೆಲಸ ಮಾಡೋಣ ಅಂದರೆ ಹೊರಗೆ ಧೋ ಎಂದು ಒಂದೇ ಸಮನೆ ವರ್ಷ ಧಾರೆ ಸುರಿತಿರಬೇಕಾದರೆ ಅದು ನನ್ನನ್ನೇ ಬಾ ನೋಡು ಗೆಳತಿ ಅಂತ ಸೋನು ನಿಗಮ್ ಕಂಠದಲ್ಲಿ ಹಾಡಿದಾಗೆ ಕೇಳ್ಸುತ್ತೆ.
ಬೆಳಿಗ್ಗೆ ಹಾಕಿಟ್ಟ ಡಿಕಾಕ್ಷನ್ ಕೂಡ ವೇಸ್ಟ್ ಆಗ್ಬಾರ್ದು ನೋಡಿ.. ಬೇರೆ ದಿನಗಿಂತ ಸ್ವಲ್ಪ ದೊಡ್ಡದೇ ಲೋಟದಲ್ಲಿ ಕಾಫಿ ಬೆರೆಸಿಕೊಂಡು ಮನೆ ಹೊರಗಿನ ವರಾಂಡದಲ್ಲಿ ಜೋರಾಗಿ ಬೀಸೋ ಗಾಳಿಯ ಜೊತೆ ಬರುವ ಮಳೆ ಹನಿಗೆ ಮೈಯೊಡ್ಡಿಕೊಂಡು ಕೂತು ಕಾಫಿ ಹೀರುತ್ತಾ ಇದ್ದರೆ ಆಹಾ…. ಮನೆ ಕೆಲಸ ಏನಾಯ್ತು ಅಂತ ಮಾತ್ರ ಕೇಳ್ಬೇಡಿ..
ನಮ್ಮೆಜಮಾನ್ರು ಕೇಳ್ತಾರೆ ನೋಡಿ ಒಮ್ಮೊಮ್ಮೆ ಏನೇ ಇದು ಮನೆನಾ ಅಥವಾ ಆದಿಉಡುಪಿ ಮಾರ್ಕೆಟ್ಟಾ ಅಂತ.. ನಮ್ಮ ತಾಯಿಯಿಂದ ಬಳುವಳಿಯಾಗಿ ವರ್ಷದ 365ದಿನನೂ ಅಲರ್ಜಿ ಶೀತ ಪಡೆದು ಕೊಂಡು ಹುಟ್ಟಿದ್ದು ಇಲ್ಲಿ ಉಪಯೋಗಕ್ಕೆ ಬರುತ್ತೆ..ಇವತ್ತು ಜೋರು ಶೀತ ಇತ್ತು ರೀ.. ಅಕ್ಷೀss.. ಮಾಡಿ ಮಾಡಿ ತಲೆನೋವು ಬಂದು ಮಲಗಿಬಿಟ್ಟೆ ಅಂತ ಅಷ್ಟೇನೂ ದೊಡ್ಡದಾಗಿರದ ಸುಳ್ಳು ಹೇಳ್ಬಿಡೋದು.. ಎಷ್ಟು ನಂಬ್ತಾರೋ ಇಲ್ವೋ ಗೊತ್ತಿಲ್ಲ.. ಸಣ್ಣದಾಗಿ ಸಂತಾಪ ಅಂತು ಸೂಚಿಸ್ತಾರೆ..
ಅದೆಲ್ಲ ಇರ್ಲಿ. . ಈ ಬಾರಿ ದೊಡ್ಡ ಪ್ರಮಾದ ಆಗಿಹೋಗಿದೆ.. ಅಮ್ಮ ಬಾರಿ ಬಾರಿ ಕೇಳಿದ್ದಳು ಒಳ್ಳೆ ಕೆಂಡದಂಥ ಬಿಸ್ಲಿದೆ ಹಲಸಿನ ಕಾಯಿ ಕೂಡ ಇದೆ.. ಹಪ್ಪಳ ಮಾಡ್ತೀಯಾ ಅಂತ… ಯಾರಿಗ್ ಬೇಕಮ್ಮಾ ಅದು ಅಂತ ಹೇಳ್ಬಿಟ್ಟು ಈಗ ಲಬಲಬಾ ಅಂತ ಬಾಯಿ ಬಡ್ಕೊಳೋ ಥರ ಆಗಿದೆ.. ಯುಗಾದಿ ದಿನ ಪಂಚಾಂಗ ಪಠಣದಲ್ಲಿ ಈ ಬಾರಿ ಸಾಧಾರಣ ಮಳೆಯಾಗಲಿದೆ ಅಂತ ಓದಿದ್ದೇ ಇದಕ್ಕೆಲ್ಲ ಕಾರಣ.. ವರುಣ ದೇವ ಮಾತ್ರ ಅದನ್ನು ಅಸಾಧಾರಣ ಮಳೆಯಾಗಲಿದೆ ಅಂತ ಒದ್ಕೊಂಡ ಇರ್ಬೇಕು..
ಮಳೆ ಬರುವಾಗ ಕಾಫಿ ಜೊತೆ ಕರುಮ್ ಕುರುಮ್ ಅಂತ ನಾಲಿಗೆ ಚಪಲ ತೀರಿಸಲು ಹಪ್ಪಳ ಇಲ್ಲದಿದ್ದರೆ ಹೇಗೆ ಮಾರಾಯ್ರೆ.. ಮಾಡೊದು ಬಿಡಿ ಅಮ್ಮ ಮಾಡೋವಾಗ ಕೈ ಸೇರಿಸಿದ್ದರೂ ಆಗ್ತಿತ್ತು.. ಅವಳು ಕಾಲು ನೋವು ಸೊಂಟ ನೋವು ಅನ್ಬಿಟ್ಟು ಬರೇ ಒಂದೇ ಹಲಸಿನಕಾಯಿಯ ಹಪ್ಪಳ ಮಾಡಿದಾಳೆ.. ಉದಾಶೀನ ಮುದ್ದೆ ಅಂತ ಸಹಸ್ರನಾಮ ಮಾಡಿ 20ಹಪ್ಪಳ ಅಳಿಯನಿಗೆ ಮಾತ್ರ ಅಂತ ಕೊಟ್ಟು ಕಳಿಸಿದ್ದಾಳೆ.. ಈ ಸಲದ ಮಳೆಗೆ ಅದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಆದ ಹಾಗಾಯ್ತು.. ಮೊನ್ನೆ ಶಾರದಾ ದೊಡ್ಡ ಮತ್ತೆ ಒಂದ್ಹತ್ತು ಹಪ್ಪಳ ಕೊಟ್ಟು ಪುಣ್ಯ ಕಟ್ಕೊಂಡ್ರು.. ಅತ್ತೆ ಮಾಡಿ ಕೊಟ್ಟ ಹಪ್ಪಳನೂ ಗುಳುಂ ಆಯಿತು… ಮಳೆ ಮಾತ್ರ ಬರ್ತಾನೇ ಇದೆ..
ಓಯ್.. ನಿಮ್ಮನೇಲಿ ಹಪ್ಪಳ ಉಂಟಾ… ಮಳೆ ಸ್ವಲ್ಪ ಬಿಟ್ಟ ಕೂಡಲೇ ರಪಕ್ಕ ಬಂದು ತಗೊಂಡು ಹೋಗ್ತೇನೆ ಅಯ್ತಾ… …
📝✒ ನಯನ ಉಮೇಶ್ ಬಾದ್ಯ