ಪ್ರತಿಭಾವಂತ ಕಲಾವಿದೆ ಶೋಭಾ ರೈ

ಶೋಭಾ ರೈ : ಇದು ತುಳು ರಂಗಭೂಮಿಯ ಹಿರಿಯ ಮತ್ತು ಪ್ರತಿಭಾನ್ವಿತ ಹೆಸರು. ಕಿರುತೆರೆ ಮತ್ತು ಬೆಳ್ಳಿತೆರೆಗೂ ಹೋಗಿ ಬಂದಿದ್ದ ಇವರು ರಂಗಭೂಮಿ ಕಡೆಗೆ ಒಂದು ಒತ್ತನ್ನು ಹೆಚ್ಚೇ ನೀಡುತ್ತಿದ್ದಾರೆ. ತಾನು ಎಷ್ಟು ಎತ್ತರಕ್ಕೆ ಏರಿದ್ದರೂ ಅದಕ್ಕೆ ಮೂಲ ಕಾರಣವಾಗಿರುವ ರಂಗಭೂಮಿಯನ್ನು ದೂರ ಮಾಡುವ ಪ್ರಶ್ನೆಯೇ ಇಲ್ಲ ಎಂಬುದು ಇವರ ಖಡಕ್ ಮಾತು.

ಇತ್ತೀಚೆಗೆ ತನ್ನ ಕಲಾಸೇವೆಗಾಗಿ ಚೆನ್ನೈಯ ಇಂಟರ ನ್ಯಾಷನಲ್ ಪೀಸ್ ಯೂನಿವರ್ಸಿಟಿ ಡಾಕ್ಟರೇಟ್ ಗೌರವ ಪಡೆದುಕೊಂಡಿರುವ ಇವರು ತುಳುನಾಡಿನ ಪ್ರಮುಖ ವೃತ್ತಿಪರ ನಾಟಕ ತಂಡ ಎಂದು ಗುರುತಿಸಿಕೊಂಡಿದ್ದ ನಂದಿಕೇಶ್ವರ ನಾಟಕ ಸಭಾದ ಮಾಲಕರಾಗಿದ್ದ ಪಿ.ಬಿ ರೈ ಅವರ ಪುತ್ರಿ. ಪಿ.ಬಿ. ರೈ ಅವರ ಇಡೀ ಕುಟುಂಬವೇ ರಂಗಭೂಮಿಗಾಗಿ ಮೀಸಲಿಟ್ಟಿದೆ. ಅಂಥ ಕುಟುಂಬದಿಂದ ಬಂದಿರುವ ಶೋಭಾ ರೈ ಅವರಿಗೆ ನಟನೆ ಎಂಬುದು ಜನ್ಮದತ್ತವಾಗಿ ಬಂದಿರುವ ಶಕ್ತಿ, ಪ್ರತಿಭೆ.

ಇವರು ಕೇವಲ ತುಳುವಿಗಷ್ಟೇ ಸೀಮಿತರಾದವರಲ್ಲ. ಕೆಲವು ಪ್ರಮುಖ ಕನ್ನಡ ಸೀರಿಯಲ್‌ಗಳಲ್ಲಿ ನಟಿಸಿ ಗಮನ ಸೆಳೆದವರು. ಪ್ರಸ್ತುತ ಸುವರ್ಣ ಚಾನೆಲ್‌ನ ಸತ್ಯಂ ಶಿವಂ ಸುಂದರಂ ಎಂಬ ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಬೆಂಗಳೂರಿನಲ್ಲಿ ರಂಗಭೂಮಿಯೊಂದಿಗೂ ಗುರುತಿಸಿಕೊಂಡಿದ್ದಾರೆ. ಅಲ್ಲಿನ ಕೆಲವು ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

ಶೋಭಾ ರೈ ಅವರು ಹುಟ್ಟಿದ್ದು ಬೆಂಗಳೂರಿನ ನೆಲಮಂಗಲದಲ್ಲಿ. ತಾಯಿ ಸುಮಿತ್ರಾ ಅವರು ಕೂಡ ತಂದೆಯ ನಂದಿಕೇಶ್ವರ ನಾಟಕ ಸಂಘದಲ್ಲಿಯೇ ಕಲಾವಿದೆಯಾಗಿದ್ದರು. ಇವರ ಸಹೋದರ ರಾಘವೇಂದ್ರ ರೈ ಅವರು ಕೂಡ ಅತಿ ಬೇಡಿಕೆಯ ಪ್ರತಿಭಾನ್ವಿನ ನಟ. ಇವರಿಗೆ ಪಂಚರಂಗಿ ಪೋಂ ಪೋಂ ಟೀವಿ ಸೀರಿಯಲ್ ಭಾರೀ ಜನಪ್ರಿಯತೆ ತಂದುಕೊಟ್ಟಿದೆ. ಇದರ ಮೀನನಾಥನ ಪಾತ್ರದ ಎಲ್ಲೆಡೆ ಶ್ಲಾಘನೆಗೆ ಒಳಗಾಗಿತ್ತು. ಬಳಿಕ ಅವರು ಮಂಗಳೂರಿನ ಮೀನನಾಥ ಎಂದೇ ಚಿರಪರಿಚಿತರಾಗಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿದ್ದರೂ ಶೋಭಾ ಅವರ ಶಿಕ್ಷಣ ಮಂಗಳೂರಿನಲ್ಲಿಯೇ ಸಾಗಿತ್ತು. ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಎಸೆಸೆಲ್ಸಿ ಮಾಡಿದ್ದ ಇವರು ತಂದೆಯ ಗರಡಿಯಲ್ಲೇ ಪಳಗಿ, ಅವರ ನಾಟಕ ತಂಡದ ಮೂಲಕವೇ ಸಮಾಜಕ್ಕೆ ನಟಿಯಾಗಿ ಪರಿಚಿತರಾದವರು. ಈಗ ಈ ನಾಟಕ ಸಂಸ್ಥೆ ಇಲ್ಲದಿದ್ದರೂ, ವರ್ಷಕ್ಕೊಂದು ಬಾರಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಈ ಬಾರಿ ಆಗಸ್ಟ್ 6 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಂದಿಕೇಶ್ವರ ನಾಟಕ ಸಂಘದ ವಾರ್ಷಿಕೋತ್ಸವ ನಡೆಸಲು ಇವರು ನಿರ್ಧರಿಸಿದ್ದಾರೆ.

ಬೆಂಗಳೂರಿನಲ್ಲಿ ಮಹಿಳಾ ತಂಡ ಕಟ್ಟಿಕೊಂಡು ಪೌರಾಣಿಕ ನಾಟಕಗಳ ಮೂಲಕ ಹೆಚ್ಚಿನ ಬೇಡಿಕೆ ಗಳಿಸುತ್ತಿದ್ದಾರೆ. ಈಗ ಇವರಿಗೆ ಮಂಗಳೂರಿಗೆ ಬರುವುದಕ್ಕೂ ಪುರುಸೊತ್ತು ಇಲ್ಲದಷ್ಟು ಕಾರ್ಯಕ್ರಮಗಳಿವೆ. ಸುಮಾರು 9 ತುಳು ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಇವರು ಮುಂದಿನ ದಿನಗಳಲ್ಲಿ ಮಂಗಳೂರಿನ ಪುರಭವನದಲ್ಲೂ ಪೌರಾಣಿಕ ನಾಟಕ ಪ್ರದರ್ಶಿಸುವ ಕನಸು ಹೊಂದಿದ್ದಾರೆ. ಜತೆಗೆ ಯಕ್ಷಗಾನದಲ್ಲೂ ನಟಿಸಬೇಕು ಹಾಗೂ ಅಕ್ಕ ಮಹಾದೇವಿ ಪಾತ್ರವನ್ನು ಮಾಡಬೇಕು ಎಂಬ ದೊಡ್ಡ ಕನಸು ಇವರಲ್ಲಿದೆ.

ಇವರ ರಾವಣ ಪಾತ್ರ ಭಾರೀ ಜನಪ್ರಿಯತೆ ಗಳಿಸಿದೆ. ಗೀತನಾಟಕಗಳಿಗೆ ಅನುಗುಣವಾದ ಹಾಡುಗಾರಿಕೆ, ಭಾವಾಭಿನಯ ಪೌರಾಣಿಕ ನಾಟಕಗಳಿಗೆ ಪೂರಕವಾಗಿದೆ.

ತಂದೆಯೇ ಮೊದಲ ಗುರು

ನನಗೆ ತಂದೆಯೇ ಮೊದಲ ಗುರು. ಅವರಿಂದಲೇ ನಟನೆಯ ಎಲ್ಲ ಪಟ್ಟುಗಳನ್ನು ಕಲಿತುಕೊಂಡಿದ್ದೇನೆ. ಬಳಿಕ ಸ್ವಂತ ಶ್ರಮದಿಂದಲೇ ಮತ್ತಷ್ಟು ಕಲಿತುಕೊಂಡೆ. ಅದರ ಬಳಿಕ ಬೆಂಗಳೂರಿನ ಶ್ರೀಧರ ಮೂರ್ತಿ ಅವರು ಸಾಕಷ್ಟು ಉತ್ತಮ ಮಾರ್ಗದರ್ಶನಗಳನ್ನು ನೀಡಿದರು. ಈ ಎಲ್ಲ ಕಾರಣಗಳಿಂದ ಈ ಹಂತಕ್ಕೆ ಬೆಳೆದು ನಿಂತಿದ್ದೇನೆ ಎಂದು ಶೋಭಾ ರೈ ಹೇಳುತ್ತಿದ್ದಾರೆ.

ಗಂಭೀರ ಪಾತ್ರ, ನೆಗೆಟಿವ್ ರೋಲ್ ಇಷ್ಟ

ನನಗೆ ಹಾಸ್ಯ ಪಾತ್ರದ ಜತೆಗೆ ಗಂಭೀರ ಪಾತ್ರ ಇಷ್ಟ. ನೆಗೆಟಿವ್ ರೋಲ್ ಮಾಡುವುದೆಂದರೆ ತುಂಬಾ ಖುಷಿ ಎಂದು ಹೇಳುವ ಅವರು, ಈಗ ತುಳು ಚಿತ್ರರಂಗದಿಂದ ಅನಿವಾರ್ಯವಾಗಿ ದೂರ ಉಳಿದುಕೊಂಡಿದ್ದಾರೆ. ಬೆಂಗಳೂರಿನಲ್ಲಿಯೇ ನೆಲೆಸಿರುವ ಇವರು ಈಗ ಅತಿ ಬೇಡಿಕೆಯ ರಂಗಭೂಮಿ ಕಲಾವಿದೆಯಾಗಿದ್ದಾರೆ. ಕಿರುತೆರೆ ಮತ್ತು ಬೆಳ್ಳಿತೆರೆಗೆ ಹೋಗಿ ಬಂದು ಮತ್ತೆ ರಂಗಭೂಮಿಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ತನ್ನ ರಂಗಭೂಮಿ ಪ್ರೀತಿಯನ್ನು ಸಾಬೀತು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!