ಆಧುನಿಕ ಕಾಲದ ಹೈನುಗಾರಿಕೆ ಮುನಿಯಾಲಿನ “ಸಂಜೀವಿನಿ ಫಾರ್ಮ್”

ಉಡುಪಿ: “ಸಂಜೀವಿನಿ ಫಾರ್ಮ್” ಇದು ಅತ್ಯಾಧುನಿಕ ರೀತಿಯಲ್ಲಿ ಮಾಡ ಹೊರಟ ಹೈನುಗಾರಿಕೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಮುನಿಯಾಲಿನಲ್ಲಿ 27ಎಕರೆ ಜಾಗದಲ್ಲಿ ಸಂಜೀವಿನಿ ಫಾರ್ಮ್ ಮತ್ತು ಡೇರಿಯನ್ನು ಮೂಡಬಿದಿರೆ ಎಸ್‌ಕೆಎಫ್ ಗ್ರೂಫ್ ಆಫ್ ಕಂಪೆನಿಯು ಆರಂಭಿಸಿದೆ. ದನಗಳ ಸಾಕಾಣೆಗೆ ವಿಶಾಲವಾದ ಕಟ್ಟಡ ನಿರ್ಮಿಸಿ ಅಲ್ಲಿಯೇ ದನಗಳಿಗೆ ಬೇಕಾದ ಹುಲ್ಲನ್ನು ಬೆಳೆಸಿ ಪೌಷ್ಟಿಕ ಆಹಾರ ಒದಗಿಸಿ ಶುದ್ಧ ಹಾಲನ್ನು ಸಂಗ್ರಹಿಸಲಾಗುತ್ತಿದೆ.

ಸದಾ ಒಂದಿಲ್ಲೊಂದು ಹೊಸತನ ಹಾಗೂ ವಿಭಿನ್ನ ಚಿಂತನೆಯ ಮೂಲಕ ಉದ್ಯಮ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಖ್ಯಾತಿ ಹೊಂದಿರುವ ಎಸ್.ಕೆ.ಎಫ್. ಇಂಡಸ್ಟ್ರೀಸ್ ಮಾಲಕ ಶ್ರೀ ರಾಮಕೃಷ್ಣ ಆಚಾರ್ ಅವರು ಹೈನುಗಾರಿಕೆಯಲ್ಲಿ ಜನತೆಗೆ ಪರಿಶುದ್ಧ ಹಾಲು ಒದಗಿಸಲು ಡೇರಿಯನ್ನು ಆರಂಭಿಸಿದ್ದು, ಸಂಸ್ಥೆಯ ಕಾರ್ಯದರ್ಶಿ ಸವಿತಾ ಆರ್. ಆಚಾರ್ ಸಮಗ್ರ ಉಸ್ತುವಾರಿಯಲ್ಲಿ ಸಂಸ್ಥೆಯು ಮುನ್ನಡೆಯುತ್ತಿದೆ.

ಭಾರತೀಯ ಗೀರ್ ತಳಿಯ ಗೋವನ್ನು ಡೇರಿಯಲ್ಲಿ ಸಾಕಲಾಗುತ್ತಿದೆ. ದನಗಳಿಗೆ ಸಾವಯವ ಕೃಷಿ ಉತ್ಪನ್ನ ಮತ್ತು ಅತ್ಯಂತ ಪೌಷ್ಠಿಕ ಆಹಾರಗಳನ್ನು ನೀಡಿ ಪರಿಶುದ್ಧ ಹಾಲನ್ನು ಪಡೆಯಲಾಗುತ್ತಿದೆ, ಹಾಸ್ಟೇಲ್, ಹೊಟೇಲ್‌ಗಳಿಗೆ, ಮಣಿಪಾಲ, ಉಡುಪಿ, ಮಂಗಳೂರಿನಲ್ಲಿ ಡೇರಿಗೆ ಸದಸ್ಯರನ್ನು ಆಯ್ಕೆ ಮಾಡಿ ಅವರಿಗೆ ಗೀರ್ ದನದ ಹಾಲನ್ನು ಸರಬರಾಜು ಉದ್ದೇಶವನ್ನು ಈ ಡೇರಿ ಹೊಂದಿದೆ.

ಡೇರಿಯ ವ್ಯವಸ್ಥೆ ಮತ್ತು ಪಾರದರ್ಶಕತೆಯನ್ನು ಸದಸ್ಯರು ಮುಕ್ತವಾಗಿ ನೋಡುವ ವ್ಯವಸ್ಥೆ ಇಲ್ಲಿದೆ. ಮುನಿಯಾಲು ಸಂಜೀವಿನಿ ಫಾರ್ಮ್ ಮತ್ತು ಡೇರಿಯನ್ನು ಕಾರ್ಪೋರೇಟ್ ಕಂಪೆನಿಯಂತೆ ಬೆಳೆಸಿ ಮುನ್ನಡೆಸುವ ಪ್ರಯತ್ನದಲ್ಲಿ ಡೇರಿಯ ಸಂಸ್ಥಾಪಕ ರಾಮಕೃಷ್ಣ ಆಚಾರ್ ಇದ್ದಾರೆ. ಗೀರ್ ತಳಿ ಮತ್ತು ಮಲೆನಾಡು ಗಿಡ್ಡ ತಳಿಯ ದನಗಳನ್ನು ಕೂಡ ಸಾಕಿ ಗ್ರಾಮೀಣ ಪ್ರದೇಶದ ಡೇರಿಯನ್ನು ವಿಶ್ವ ದರ್ಜೆಗೇರಿಸುವ ಕಲ್ಪನೆ ಇವರದ್ದು.

ದನಗಳನ್ನು ಸಾಕುವ ಆಸಕ್ತಿಯಿದ್ದು ಸಾಕಲು ಅಸಾಧ್ಯವಾದವರು ಸಂಜೀವಿನಿ ಡೇರಿಯಲ್ಲಿ ಕನಿಷ್ಠ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿ ಹಸುವಿನ ಮಾಲಕರಾಗುವ ಅವಕಾಶವಿದೆ. ವರ್ಷಕ್ಕೆ 12% ಲಾಭಾಂಶದೊಂದಿಗೆ ವರ್ಷಕ್ಕೊಮ್ಮೆ ಪಂಚತಾರಾ ಸೌಲಭ್ಯದೊಂದಿಗೆ ಮೂರುದಿನ ಪ್ರಕೃತಿಯ ನಡುವಿನ ಸೊಬಗಿನಲ್ಲಿ ಆನಂದದಾಯಕ ದಿನಗಳನ್ನು ಕಳೆಯುವ ಅವಕಾಶವನ್ನು ಸಂಸ್ಥೆಯು ಕಲ್ಪಿಸುತ್ತಿದೆ ಎಂದು ಶ್ರೀ ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.

ಗೀರ್ ತಳಿಯ ದನಗಳಿಂದ ದೊರೆಯುವ ಅಮೃತ ಸದೃಶ ಹಾಲನ್ನು ಸಾವಯವ ರೀತಿಯಲ್ಲಿ ಪಡೆಯಲಾಗುತ್ತಿದೆ. ಗೋದಿಹಿಟ್ಟು, ಬಿಳಿ ಜೋವರ್, ಜೋಳ, ಬಾರ್ಲಿ, ಬಾಜ್ರ, ಹತ್ತಿ ಬೀಜದ ಕೇಕ್, ಸಾಸಿವೆ, ಮೆಂತೆ, ಬೇಕಿಂಗ್ ಸೋಡ, ಬೆಲ್ಲ ಮತ್ತು ಕ್ಯಾಲ್ಸಿಯಂ ಹಾಗೂ ಖನಿಜಗಳ ಮಿಶ್ರಣಗಳುಳ್ಳ ಆಹಾರವನ್ನು ನೀಡಲಾಗುತ್ತದೆ. ಗೀರ್ ದನಗಳಿಗೆ ಅತ್ಯಂತ ಪ್ರಿಯವಾದ ಎರಡು ಜಾತಿಯ ಹುಲ್ಲುಗಳನ್ನು ಫಾರ್ಮಿನಲ್ಲೇ ಬೆಳೆಸಿ ಸಂಸ್ಕರಿಸಿ ನೀಡಿ ಶುದ್ಧ ಮತ್ತು ಸಾವಯವ ಹಾಲು ಪಡೆಯಲಾಗುತ್ತಿದೆ.

ಮುಂದೆ ದನದ ಸಗಣಿಗೆ ಕೆಲವು ವಸ್ತುಗಳನ್ನು ಸೇರಿಸಿ ಕೃಷಿಗೆ ಅತ್ಯುಪಯುಕ್ತವಾದ ಗೊಬ್ಬರ ಮತ್ತು ಗೋಮಯದಲ್ಲಿ ಪರಿಸರ ಪ್ರೇಮಿ ಲೋಬಾನ ಮತ್ತು ಊದುಬತ್ತಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಯೋಜನೆ ಕೂಡ ಇದೆ.  ಗ್ರಾಮೀಣ ಭಾಗದಲ್ಲಿ ಪೃಕೃತಿಯ ನಡುವೆ ಇಂತಹ ಡೇರಿಯಲ್ಲಿ ಪರಿಶುದ್ಧ ಹಾಲನ್ನು ನೀಡುತ್ತಿದ್ದು ಶಿಕ್ಷಣ ಸಂಸ್ಥೆಯವರು, ಹೋಟೆಲ್ ಮಾಲಕರು ಈ ಡೇರಿಯನ್ನು ಸಂಪರ್ಕಿಸಿದಲ್ಲಿ ಶುದ್ಧ ಹಾಲನ್ನು ಪ್ರತಿನಿತ್ಯ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!