ರಾಹುಲ್ ನಿರ್ಧಾರದಿಂದ ಆಘಾತವಾಗಿದೆ. ಡಿ.ಸಿ.ಎಂ. ಪರಮೇಶ್ವರ್

ಬೆಂಗಳೂರು: ರಾಹುಲ್ ಗಾಂಧಿ ಅವರು ನಮ್ಮ ಅಧ್ಯಕ್ಷರು. ಚುನಾವಣೆ ಫಲಿತಾಂಶದಿಂದ ಸಹಜವಾಗಿ ಅವರಿಗೆ ಬೇಸರವಾಗಿದೆ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ಪಕ್ಷದ ಕಾರ್ಯಕಾರಿಣಿಗೆ ರಾಜೀನಾಮೆ ನೀಡಿದ್ದಾರೆ. ಮುಂದೆ ಕಾರ್ಯಕಾರಿಣಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ನೋಡಬೇಕು. ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಮಗೆ ಆಘಾತ ತಂದಿದೆ. ಮುಂದಿನ ವಾರ ನಾನು ದೆಹಲಿಗೆ ಹೋಗಿ ರಾಹುಲ್ ಅವರನ್ನ ಭೇಟಿ ಮಾಡ್ತೇನೆ’ ಎಂದರು.
‘ಶಾಸಕ ಆನಂದ್ ಸಿಂಗ್ ಸಂಪರ್ಕಿಸುವ ಪ್ರಯತ್ನ ನಾನು ಮಾಡಿಲ್ಲ. ಒಂದು ಹಂತದವರೆಗೆ ಮನವೊಲಿಸಬಹುದು. ಆ ಹಂತ ದಾಟಿದ ಮೇಲೆ ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು’ ಎಂದು ಹೇಳಿದರು.
’ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕ ಪ್ರವಾಸ ಮುಗಿಸಿ ಬಂದ ಬಳಿಕ ಜೆಡಿಎಸ್ ಕಾಂಗ್ರೆಸ್ ಶಾಸಕರೊಂದಿಗೆ ಚರ್ಚೆ ನಡೆಸುತ್ತೇವೆ. ಈ ಹಿಂದೆ ಜೆಡಿಎಸ್–ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ ನಡೆಸುವ ಬಗ್ಗೆ ತೀರ್ಮಾನಿಸಿದ್ದೆವು. ಆದರೆ, ಸಿಎಲ್‌ಪಿಯಲ್ಲಿ ಶಾಸಕರು ತಮ್ಮ ಎಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳೋಕೆ ಆಗಲ್ಲ. ಹಾಗಾಗಿ ಪ್ರತ್ಯೇಕವಾಗಿ ಮಾತುಕತೆ ನಡೆಸುತ್ತೇವೆ’ ಎಂದರು.
ರಿವರ್ಸ್‌ ಆಪರೇಷನ್‌ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್‌. ‘ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರನ್ನೇ ಕೇಳಿ. ಗುಂಡುರಾವ್ ಅವರು ಕೆಪಿಸಿಸಿ ಅಧ್ಯಕ್ಷರಲ್ವಾ. ಅವರು ಹೇಳಿದರೆ ಒಂದು ರೀತಿಯ ಅರ್ಥ ಇರುತ್ತೆ’ ಎಂದು ಪರೋಕ್ಷವಾಗಿ ದಿನೇಶ್ ಗುಂಡುರಾವ್‌ಗೆ ಟಾಂಗ್ ಕೊಟ್ಟರು.

Leave a Reply

Your email address will not be published. Required fields are marked *

error: Content is protected !!