ಕನ್ನಡೇತರ ನಾಮಫಲಕಗಳಿಗೆ ಗೇಟ್‌ಪಾಸ್ : ಕುಶಾಲನಗರ, ಸುಂಟಿಕೊಪ್ಪ ಗ್ರಾ.ಪಂನಿಂದ ಕ್ರಮ

ಮಡಿಕೇರಿ: ಕುಶಾಲನಗರ ರಸ್ತೆ ಬದಿ, ವಿವಿಧ ಅಂಗಡಿ ಮಳಿಗೆಗಳ ಎದುರು ರಾರಾಜಿಸುತ್ತಿದ್ದ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಪಟ್ಟಣ ಪಂಚಾಯತ್ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ  ಬೃಹತ್ತಾದ ಕನ್ನಡೇತರ ನಾಮಫಲಕಗಳೇ ಹೆಚ್ಚಾಗಿ ರಾರಾಜಿಸುತ್ತಿದ್ದು, ಇದು ರಾಜ್ಯದ ಭಾಷಾ ನೀತಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವಂತೆ ಇಲ್ಲವೇ ಆ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವಂತೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ಬಿ.ಎಸ್.ಲೋಕೇಶ್‌ಸಾಗರ್ ಅವರು ಕೆಡಿಪಿ ಸಭೆಯಲ್ಲಿ ಗಮನಸೆಳೆದಿದ್ದರು.

 ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳು ಆಯಾ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದ ಮೇರೆಗೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳು ಕುಶಾಲನಗರ-ಮಡಿಕೇರಿ ರಾಜ್ಯ ಹೆದ್ದಾರಿಯ ಹೊಸಕೋಟೆ ಮತ್ತು ಶುಂಠಿಕೊಪ್ಪ ವ್ಯಾಪ್ತಿಗಳಲ್ಲಿ ರಾರಾಜಿಸುತ್ತಿದ್ದ ಕನ್ನಡೇತರ ಬೃಹತ್ ಜಾಹಿರಾತು ನಾಮಫಲಕಗಳನ್ನು ತೆರವುಗೊಳಿಸಿದ್ದಾರೆ. ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ನಿಮಯ ಉಲ್ಲಂಘಿಸಿ ಅಳವಡಿಸಿದ್ದ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಅವರು, ಸರ್ಕಾರಿ ಆದೇಶದಂತೆ ನಾಮಫಲಕಗಳಲ್ಲಿ ಶೇ.60 ರಷ್ಟು ಜಾಗ ಕನ್ನಡ ಭಾಷೆಯಲ್ಲಿರಬೇಕು. ಉಳಿದಂತೆ ಅದರ ಕೆಳಭಾಗದಲ್ಲಿ ಶೇ.40ರಷ್ಟು ಜಾಗದಲ್ಲಿ ಅನ್ಯ ಭಾಷೆಗಳನ್ನು ಬಳಸಬಹುದಾಗಿದೆ. ಆದರೆ ಜಾಹೀರಾತು ಸಂಸ್ಥೆಗಳು ಮತ್ತು ಅಂಗಡಿ ಮಾಲಕರು  ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡದೆ ಕನ್ನಡೇತರ ಭಾಷೆಗಳಿಗೆ ಆದ್ಯತೆ ನೀಡಿರುವುದು ಗೋಚರಿಸಿದೆ. ಇವುಗಳನ್ನು ತೆರವುಗೊಳಿಸಲು ಆಯಾಯ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈಗಾಗಲೇ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಈ ನಿಯಮವನ್ನು ಉಲ್ಲಂಘಿಸಿದವರ ಅಂಗಡಿಯ ಪರವಾನಗಿಯನ್ನು ರದ್ದುಪಡಿಸುವಂತೆ ಸೂಚಿಸಲಾಗಿದೆ ಎಂದರು.

ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡದೆ ನಾಮಫಲಕ ಅಳವಡಿಸಿ ನಿಯಮವನ್ನು ಉಲ್ಲಂಘಿಸಿದ ಅಂಗಡಿ ಮಾಲಕರಿಗೆ ಮೊದಲಿಗೆ 500 ರೂ. ದಂಡ, ನಂತರ ಪರವಾನಗಿ  ರದ್ದುಪಡಿಸಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷರು ರೋಸ್‌ಮೇರಿ ರಾಡ್ರಿಗಸ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!