ಒಂಭತ್ತು… ಒಂಭತ್ತು.. ಒಂಭತ್ತೂ.. ತೋಳ ಹಳ್ಳಕ್ಕೆ ಬಿದ್ದಂತಾಗುತ್ತಾ ಮೋದೀಜಿ ಪ್ಲಾನ್!

(ಸ್ಪೆಶಲ್ ರಿಪೋರ್ಟ್ ಎಸ್ಸೆನ್ ಕುಂಜಾಲ್‌ರಿಂದ)

ನೀವು ಈಗಾಗಲೇ ನೋಡಿರುತ್ತೀರಾ: ನಿಮ್ಮನೆ, ನಿಮ್ಮ ಪಕ್ಕದ್ಮನೆ, ಅಷ್ಟೇ ಅಲ್ಲ; ಊರಾಚೆಗಿನವರೂ, ಊರು-ಕೇರಿಯವರೂ, ಪೇಟೆ-ಪಟ್ಟಣಗಳವರೂ ಐಟಿ-ಬಿಟಿಯವರೂ, ಮಾಯಾ ನಗರಿ ಮುಂಬಯಿ, ರಾಷ್ಟ್ರ ರಾಜಧಾನಿ ನವದೆಹಲಿ ಹೀಗೆಲ್ಲಾ ಸೇರಿ ನೂರಾ ಮೂವತ್ತು ಕೋಟಿಯಲ್ಲಿ ನೈಂಟಿ ಪರ್ಸಂಟಿನಷ್ಟು ಜನ ಈಗಾಗಲೇ ಜ್ಯೋತಿ ಬೆಳಗಿಸಿದ್ದಾಯ್ತು. ಕೆಲವರಿಗೆ ಮೋದಿಯ ಪ್ರೀತಿ, ಇನ್ನಷ್ಟು ಮಂದಿಗೆ ಪಕ್ಕದ್ಮನೆಯವರ ಮುಲಾಜು, ಮತ್ತಷ್ಟು ಜನರಿಗೆ ಊರಿಂದಾಚೆಗೆ ತಳ್ತಾರಾ ಎಂಬ ಭಯ ! ಏನೇ ಇರಲಿ; ಹೀಗೆ ಕರೆಕ್ಟಾಗಿ ಒಂಭತ್ತು ಘಂಟೆಗೆ ಜ್ಯೋತಿ ಬೆಳಗಿಸಿದ ಆ ಕ್ಷಣದಲ್ಲಿ ನೆನಪಿಗೆ ಬಂದದ್ದು, ಎರಡೇ ಎರಡರ ನಾಮಸ್ಮರಣೆ. ಒಂದು ಕೊರೋನಾ. ಇನ್ನೊಂದು ಮೋದಿ!


ನಿಮಗೆಲ್ಲಾ ಗೊತ್ತಿರುವಂಥದ್ದೇ; ನಾವೆಲ್ಲಾ ಒಂದಾಗಿದ್ದೇವೆ. ನಮ್ಮಲ್ಲಿನ ಜಾತಿ-ಮತ-ಪ್ರಾಂತ್ಯ-ಭಾಷೆ- ಧರ್ಮ ಇವೆಲ್ಲಾ ಮರೆತು ಒಗ್ಗಟ್ಟಿನ ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಬೇಕೆಂಬುದು ಮೋದಿಯವರ ಮಹದಾಸೆ ಇದ್ದಿರಬಹುದು. ಅದಕ್ಕೆಂದೇ ನೂರಾ ಮೂವತ್ತು ಕೋಟಿ ಜನರಿಗೆ ದೀಪ ಬೆಳಗಿಸುವ ಸಂದೇಶ ರವಾನಿಸಿರಬಹುದು. ಹಾಗಂತ ಇದ್ಯಾವ ಧಾಟಿಯಲ್ಲಿ ಹೇಳಿದರು? ಅದ್ಯಾಕೆ ಟೈಮಿಂಗ್ಸ್‌ನ್ನು ‘ನೈನ್’ಗೆ ತಂದು ನಿಲ್ಲಿಸಿದರು? ಇದು ಸರಿಯಾದ ನಿರ್ಧಾರವಾ? ಅನೌನ್ಸ್‌ನಲ್ಲಿ ಎಡವಿದ್ದಾರಾ? ಎಂಬುದೀಗ ತೀರಾ ಅಪ್ರಸ್ತುತ.  ಬಹುಪಾಲು ಭಾರತೀಯರು..ಭಾರತಾಂಬೆಯ ಕುವರ-ಕುವರಿಯರು ಕರೆಂಟ್ ಆಫ್ ಮಾಡಿ ಅರೆಕ್ಷಣ ಊರನ್ನೇ ಕತ್ತಲಾಗಿಸಿದ್ದಾಯ್ತು. ದೀಪ ಬೆಳಗಿಸಿ, ಕ್ಯಾಂಡಲ್ ಉರಿಸಿ, ಟಾರ್ಚ್ ಲೈಟ್ ಹಾಕಿ, ಮೊಬೈಲಲ್ಲೂ ಫ್ಲ್ಯಾಷ್ ಲೈಟ್ ಹಾಕಿ ‘ಭಾರತ್ ಮಾತಾ ಕಿ ಜೈ’ ಎಂದದ್ದೂ ಆಯ್ತು. ಕೆಲವರಂತೂ ಪಟಾಕಿ ಸಿಡಿಸಿ ಸಂಭ್ರಮಿಸಿದ್ದೂ ಆಯ್ತು.

ಹೌದು; ಜ್ಯೋತಿ ಬೆಳಗಿಸುವಿಕೆಯ ಹಿನ್ನೆಲೆ-ಮುನ್ನೆಲೆ ನಮ್ಮ ಮೋದಿ ಸ್ಪಷ್ಟಪಡಿಸಲಿಲ್ಲ ಎಂಬುದಂತೂ ಒಪ್ಪತಕ್ಕಂಥ ವಿಚಾರವೇ. ಆದರೆ ಇದನ್ನೇ ಬಂಡವಾಳವಾಗಿಟ್ಟುಕೊಂಡು ದೀಪ ಹಚ್ಚಿದವರು ಬೆಂಕಿಯ ತಾಪಕ್ಕೆ ಕೊರೋನಾ ವೈರಾಣು ಇಂಡಿಯಾದಿಂದ ಓಡ್ಹೋಯ್ತು ಅನ್ನಲಿಕ್ಕೆ ಅದೇನು ಹಾರೋ ಚಿಟ್ಟೆಗಳು ಅಂದ್ಕೊಂಡಿದ್ದೀರಾ? ಹಾರಾಡುವ ಹಕ್ಕಿ ಅಂತ ಭಾವಿಸಿದ್ದೀರಾ?  ಫಸ್ಟ್ ಮಳೆಗೆ ಹಾರ್‍ಕೊಂಡು ಬರ್‍ತಾವಲ್ಲಾ… ದೀಪದ ಬೆಳಕಿಗೆ ಬಂದು ಮುತ್ತಿಕೊಳ್ತಾವಲ್ಲಾ.. ಮತ್ತೆ ಅರೆಕ್ಷಣದಲ್ಲಿ ರೆಕ್ಕೆಪುಕ್ಕೆಗಳೆಂಬ ಗರಿ ಕಳಚಿ ಸತ್ತೇ ಬಿಳ್ತಾವಲ್ಲಾ.. ಆ ಚಿಟ್ಟೆಗಳ ಹಾಗೇನೇ ಈ ಕೊರೋನಾ ವೈರಾಣುಗಳು ಅಂತ ನಂಬ್ಕೋಂಡಿದ್ದೀರಾ?


ನೋ! ಇಟ್ಸ್ ಇಂಪಾಸಿಬಲ್! ನೀವು ಇವತ್ತಿಗೆ ಟೀವಿ ಸ್ಕ್ರೀನಿನ ಮುಂದೆ, ಮೊಬೈಲ್ ಕೈಲಿಟ್ಟುಕೊಂಡು ಗೂಗಲ್‌ನಲ್ಲಿ ರಂಗು ರಂಗಾಗಿ ನೋಡುತ್ತಿದ್ದೀರಲ್ಲಾ. ಇಟ್ಸ್ ಆಲ್ ಗ್ರಾಫಿಕ್ ಡಿಸೈನ್! ವಾಸ್ತವವೆಂದರೆ, ಕೊರೋನಾ ವೈರಾಣು ಯಾವ ಆಕೃತಿಯಲ್ಲಿ ಇರುತ್ತೆ? ಹೇಗಿರುತ್ತೆ? ಅದು ರೌಂಡಾಗಿರುತ್ತಾ? ಸ್ಕ್ವೇರ್ ಆಗಿರುತ್ತಾ? ಎಂದು ಊಹಿಸಲಸಾಧ್ಯ. ಅದೊಂದು ಅಗೋಚರ ವೈರಸ್! ಅದೇನಾದರೂ ಆಕೃತಿ ರೂಪದಲ್ಲಿರ್‍ತಿದ್ರೆ ನಮ್ಮ ಸೈಂಟಿಸ್ಟುಗಳು ಇಷ್ಟರೊಳಗೆ ಅದನ್ನ ಒಂದೇ ಏಟಿಗೆ ಸಾಯಿಸುವಂಥ ‘ಕ್ಯಾಪ್ಸೂಲು’ ಹುಡುಕುತ್ತಿದ್ದರು. ರಿಯಲ್ಲೀ ಬ್ಯಾಡ್ ವೈರಸ್ ಅದು ಅಲ್ಲವೇ?


ಅದೆಲ್ಲವನ್ನೂ ಒತ್ತಟ್ಟಿಗಿರಿಸೋಣ. ನಮ್ಮ ಮೋದೀಜಿ ಒಂಭತ್ತು ಗಂಟೆಗೆ ದೀಪ ಹಚ್ಚಿ, ಅದೂ ಕೇವಲ ಒಂಭತ್ತೇ ನಿಮಿಷ ಬೆಳಗಿಸಿ ಅಂದದ್ದಕ್ಕೆ ತಲೆ ಮಾಸಿದ ಜ್ಯೋತಿಷಿಗಳು ‘ಸಿಕ್ಕಿದ್ದೇ ಲಾಭ’ ಎಂಬಂತೆ ಸಂದರ್ಭವನ್ನೇ ಎನ್‌ಕ್ಯಾಶ್ ಮಾಡಲು ಮಂಡಿಯೂರಿ ಕೂತದ್ದಂತೂ ತೀರಾ ಅಪಹಾಸ್ಯಕರ ಸಂಗತಿಯಾಗಿದೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ, ಟೀವಿ ಪರದೆಯ ಮುಂದೆ ಕಾಣಿಸಿಕೊಳ್ಳತೊಡಗಿದ ಈ ಪ್ರಚಾರ ಪ್ರಿಯರು ಒಬ್ಬರೇ, ಇಬ್ಬರೇ. ಆನಂದ ಗುರೂಜಿ, ಬ್ರಹ್ಮಾಂಡ ಗುರೂಜಿ, ಸೋಮಯಾಜಿ, ಕಬ್ಯಾಡಿ ಆಚಾರ್ಯ, ಕಾಳಿ ಸ್ವಾಮಿ ಹೀಗೆ ಸಾಗುತ್ತದೆ ಎಡಬಿಡಂಗಿಗಳ ಕರಾಳ ಇತಿಹಾಸ..! ಅಬ್ಬಬ್ಬಾ.. ಅದೆಂಥಾ ಕತ್ತಿ ವರಸೆಯ ಮಾತುಗಳವು. ಒಂಭತ್ತು ಘಂಟೆ – ‘ಅದ್ಭುತ ಸಮಯ, ಅಮೋಘ ಘಳಿಗೆ’ ಅನ್ನುವ ಈ ಕಪಟ ಜ್ಯೋತಿಷಿಗಳು ಎಪ್ರಿಲ್ ಐದರಂದು ಮೋದಿ ವೀಡಿಯೋ ರಿಲೀಸ್ ಮಾಡುವ ಮುನ್ನ ಎಲ್ಹೋಗಿ ಮಲಗಿದ್ದರು? ಆ ತನಕ ಬಾಯಿಗೆ ಬೀಗ ಹಾಕಿಕೊಂಡದ್ಯಾಕೆ? ಈಗೆಲ್ಲಿಂದ ರಸನಿಮಿಷಗಳ ನೆನಪಾಯ್ತು? ಇವೆಲ್ಲಾ ಪ್ರಶ್ನೆಗಳಿಗೆ ಕಪಟ ಜ್ಯೋತಿಷಿಗಳೇ ಉತ್ತರಿಸಬೇಕಾಗಿದೆ.



                            ಲಾಸ್ಟ್ ಸಿಪ್!
ಈಗ ನಾವೆಲ್ಲಾ ‘ಮೋದೀಕೀ ಜೈ’ ಅಂದದ್ದಾಯ್ತು. ದೀಪ ಉರಿಸಿ ಆರಿಸಿದ್ದೂ ಆಯ್ತು. ಇನ್ನೇನೂ ಏಸಿಯನ್ನೋ, ಫ್ಯಾನ್ ನ್ನೋ ಹಾಕಿ ಮಲಗುವ ಮುನ್ನ ಸ್ಮಾಲ್ ಸಿಪ್ ನಿಮಗಾಗಿ ಇಲ್ಲಿದೆ. ರಾತ್ರಿ ಒಂಭತ್ತು ಘಂಟೆ ಒಂಭತ್ತು ನಿಮಿಷವಾದ ಕ್ಷಣವೇ ಬರೆಯಲು ಶುರುವಿಟ್ಟಾಗ ನೆನಪಿಗೆ ಬಂದವರು ಬೇರಾರೂ ಅಲ್ಲ; ರಾಷ್ಟಪಿತ ಗಾಂಧೀಜಿ ಮತ್ತವರ ಕ್ವಿಟ್ ಇಂಡಿಯಾ ಚಳುವಳಿ. ಆವತ್ತು ಇಂಗ್ಲೀಷರ ವಿರೋಧಿ ರಣಕಹಳೆ ಗಾಂಧೀಜಿಯವರದ್ದಾದರೆ. ಈಗ್ಗೆ ಚೈನೀಯರು ಕೊಟ್ಟ ಕೊರೋನಾ ವಿರುದ್ಧ ಮೋದೀಜಿ ಕಹಳೆ! ಹೌದು; ಗಾಂಧೀಜಿ ಸ್ವಾತಂತ್ರ್ಯ ದಕ್ಕಿಸಿ ಕೊಟ್ಟರು. ಆದರೆ ‘ಪಾಪಿಸ್ತಾನ’ವನ್ನು ಮಗ್ಗುಲ ಮುಳ್ಳಾಗಿ ಇಟ್ಟು ಹೊರಟೇ ಹೋದರು. ಆದರೆ, ನಮ್ಮ ‘ನಮೋ’ ಗಾಂಧಿಯಂತಲ್ಲ. ನೀಟಾಗಿ ಡ್ರೆಸ್ ಮಾಡ್ಕೊಂಡು ಸಲೀಸಾಗಿ ಎದುರಾಳಿಗಳನ್ನು ನೆಲಕ್ಕುರುಳಿಸುವವರು. ಗಾಂಧೀಜಿ ಊರುಗೋಲನ್ನು ಆಧಾರವಾಗಿಟ್ಟುಕೊಂಡು ಮುನ್ನಡೆದರೆ, ಮೋದೀಜಿ ಒಂಭತ್ತನ್ನು ನಂಬಿ ಹೆಜ್ಜೆಯಿಟ್ಟಿದ್ದಾರೆ. ಕೊರೋನಾದಲ್ಲೂ ಒಂಭತ್ತೇ ಪ್ರಧಾನವಾಗಿದೆ. ಹೌದು; ಈ ಸಂಖ್ಯೆ ‘ಒಂಭತ್ತು… ಒಂಭತ್ತು.. ಒಂಭತ್ತೂ.. ತೋಳ ಹಳ್ಳಕ್ಕೆ ಬಿತ್ತೂ..’ ಎಂಬಂತಾಗದಿರಲಿ. ನೋಟ್ ಬ್ಯಾನ್, ಜಿಎಸ್‌ಟಿಯಲ್ಲಾದ ಫೈಲ್ಯೂರ್‌ಗಳು ರಿಪೀಟಾಗದಿರಲಿ. ಕೊರೋನಾ ಇಂಡಿಯಾ ಬಿಟ್ಟು ತೊಲಗಲಿ ಎಂಬುದೇ ನೂರಾ ಮೂವತ್ತು ಕೋಟಿ ಜನರ ನಿರೀಕ್ಷೆ!
-ಎಸ್ಸೆನ್ ಕುಂಜಾಲ್
ನಿಮ್ಮ ಅನಿಸಿಕೆ, ಅಭಿಪ್ರಾಯಗಳಿದ್ದಲ್ಲಿ ಇ-ಮೇಲ್ [email protected]ಗೆ ಕಳುಹಿಸಬಹುದು ಅಥವಾ ದೂರವಾಣಿ 9845070166 ಗೆ ಕರೆ ಮಾಡಬಹುದು

1 thought on “ಒಂಭತ್ತು… ಒಂಭತ್ತು.. ಒಂಭತ್ತೂ.. ತೋಳ ಹಳ್ಳಕ್ಕೆ ಬಿದ್ದಂತಾಗುತ್ತಾ ಮೋದೀಜಿ ಪ್ಲಾನ್!

  1. ರಿಯಲಿ ಸತ್ಯವಾದ ವರದಿ. ಎಸ್ಸೆನ್ ಕುಂಜಾಲು ರವರಿಗೆ ಧನ್ಯವಾದಗಳು.

Leave a Reply

Your email address will not be published. Required fields are marked *

error: Content is protected !!