ಮನೆಯೇ ಮಂತ್ರಾಲಯ ಮನಸೇ ದೇವಾಲಯ
ನಿಂತಲ್ಲೇ ಮುಖದ ಮೇಲೆ ಮಳೆ ಹನಿಯೊಂದು ಥಟ್ ಅಂತ ಬಿದ್ದಾಗ ನನ್ನ ಗಮನ ಆ ಸನ್ಯಾಸಿಯತ್ತ ವಾಲಿತ್ತು..ಸಂಸಾರವೆಂಬ ಸಂಬಂಧಗಳನ್ನು ತ್ಯಜಿಸಿ, ವೈರಾಗ್ಯ ಜೀವನದ ಕಡೆ ನಡೆದ ಅವನಿಗೂ, ಸಂಸಾರ ಸಂಬಂಧಗಳೆಂಬ ಚೌಕಟ್ಟಿನಲ್ಲಿ ಬದುಕುತ್ತಿರುವ ನಮಗೂ ವ್ಯತ್ಯಾಸ ಏನೆಂದು ತಿಳಿಯಲಿಲ್ಲ..
ಬೆಳಿಗ್ಗೆ ಎದ್ದು ರಾತ್ರಿ ಮಲಗುವ ತನಕ ನಮ್ಮದೇ ಆದ ಒಂದಷ್ಟು ಜಂಜಾಟಗಳ ನಡುವೆ ಸಿಲುಕಿ, ಸಂಸಾರ, ಸಂಬಂಧಗಳ ಅರಿವಿಲ್ಲದೆ ಮನೆಯ ವಿಚಾರಗಳನ್ನು ಬದಿಗಿಟ್ಟು, ಏನೋ ಸಾಧನೆ ಮಾಡಬೇಕೆಂದು ಹೊರಟಿರುವ ನಾವು. ಸಾಧಿಸಲು ಆಗದೆ ಅತ್ತ ಬದುಕಲೂ ಆಗದೆ ಎರಡು ದೋಣಿಯ ಮೇಲೆ ಕಾಲಿಟ್ಟಂತಾಗಿದೆ ಜೀವನ.
ಈ ಮಾತು ಹೇಳ ಹೊರಟಿರುವುದು ಯಾಕೆಂದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ “ಸೋಶಿಯಲ್ ಮೀಡಿಯಾ” ಎಂಬ ಸುಳಿಗೆ ಸಿಕ್ಕವರು ನಮ್ಮಲ್ಲಿ ಬಹಳಷ್ಟು ಮಂದಿ. ದೇಶದ ಆಸ್ತಿಯಾಗಿರುವ ನಾವು ನಮ್ಮದೇ ಆದ ಲೋಕದಲ್ಲಿ ಕಳೆದುಹೋಗಿದ್ದಾರೆ..ಈಗಿನ ಮಾಡರ್ನ್ ಯುಗದಲ್ಲಿ ರಕ್ತ ಸಂಬಂಧಗಳಿಗೆ ಎಷ್ಟು ಬೆಲೆಯಿದೆಯೋ ಗೊತ್ತಿಲ್ಲ..ಆದರೆ “BROTHER FROM ANOTHER MOTHER” ಗಳಿಗೆ ಬಹಳಷ್ಟು ಬೆಲೆಯಿದೆ. ಪ್ರತಿನಿತ್ಯ ಹೊಸ ಜನರ ಹುಡುಕಾಟದಲ್ಲಿ ನಮ್ಮವರನ್ನು ನಾವು ಮರೆತಿದ್ದೇವೆ..ಮೊಬೈಲ್ ಅಪ್ಡೇಟ್ ಆದಷ್ಟು ನಮ್ಮ ಲೈಫ್ ಸ್ಟೈಲ್ ಕೂಡ ಅಪ್ಡೇಟ್ ಆಗಿದೆ..
ಎಲ್ಲಾ ಇದ್ದು ಇಲ್ಲದಂತೆ ವೈರಾಗಿಯಾಗಿ ಬದುಕುತ್ತಿರುವ ನಮಗೂ, ಎಲ್ಲಾ ತ್ಯಜಿಸಿ ಮನಸ್ಸಿನ ನೆಮ್ಮದಿಗೆ ದೇವರ ನೆಲೆ ಹುಡುಕಿ ಹೊರಟ ಸನ್ಯಾಸಿಗೂ ಯಾವುದೇ ವ್ಯತ್ಯಾಸವಿಲ್ಲ. ಜೀವನದಲ್ಲಿ ಸಮಸ್ಯೆ ಪ್ರತಿಯೊಬ್ಬರಿಗೂ ಇದ್ದೇ ಇದೆ. ಯಾವುದಕ್ಕೂ ಧೃತಿಗೆಡದೆ, ಮನಸ್ಸಿನ ನೆಮ್ಮದಿಗಾಗಿ ಯಾವ ದುಶ್ಚಟಗಳಿಗೂ ಬಲಿಯಾಗದೆ ಹಿರಿಯರ ಮಾರ್ಗದರ್ಶನದಲ್ಲಿ ನಮ್ಮವರ ಜೊತೆ ಬೆರೆತು ಬದುಕುವುದೇ ಸುಖ ಜೀವನ..
ರೂಪೇಶ್ ಜೆ.ಕೆ