ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರ : ಆಗಸ್ಟ್ 15ರಂದು ವಾರ್ಷಿಕ ಮಹಾ ಹಬ್ಬ 

ರಾಜ್ಯದ ಮೊಟ್ಟ ಮೊದಲ ಮತ್ತು ಭಾರತದಲ್ಲಿ ಎರಡನೆಯ ಹಾಗೂ ಏಷ್ಯಾದ ಮೂರನೆಯ ಹಡಗಿನ ಆಕಾರದ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ಆಗಸ್ಟ್ 15 ರಂದು ವೆಲಂಕಣಿ ಮಾತೆಯ ಪ್ರತಿಷ್ಠಾಪನೋತ್ಸವ ಹಬ್ಬ ಜರಗಲಿರುವುದು ಎಂದು ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜನವರಿ 6, 2018 ರಂದು ಉದ್ಘಾಟನೆಗೊಂಡ ಹಡಗಿನಕಾರದ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ದಿನಂಪ್ರತಿ ನೂರಾರು ಭಕ್ತರು ಆಗಮಿಸುತ್ತಿದ್ದು, ಭಕ್ತರ ಪ್ರೀತಿಯ ವೆಲಂಕಣಿ ಮಾತೆಯ ಹಬ್ಬವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.  ಆಗಸ್ಟ್ 6 ರಿಂದ ಆಗಸ್ಟ್ 14 ತನಕ ಉತ್ಸವದ ಪೂರ್ವಭಾವಿಯಾಗಿ ನೊವೆನಾ ಪ್ರಾರ್ಥನೆಗಳು ಮತ್ತು ಬಲಿಪೂಜೆಗಳು ನಡೆಯಲಿರುವುದು. 9  ದಿನಗಳ ನೊವೆನಾ ಸಮಯದಲ್ಲಿ ವಿಶೇಷ ಉದ್ದೇಶಗಳಿಗೋಸ್ಕರ ಪ್ರಾರ್ಥನೆಗಳನ್ನು ನಡೆಸಲಾಗುವುದು ಎಂದರು.

ಆಗಸ್ಟ್ 6 ರಂದು ಸಂಜೆ 3.45 ಕ್ಕೆ ಸಂತ ಜೋಸೆಫ್ ಸೆಮಿನರಿ ಮಂಗಳೂರು ಇದರ ರೆಕ್ಟರ್ ಅತಿ ವಂದನೀಯ ಫಾ. ರೊನಾಲ್ಡ್ ಸೆರಾವೊ ನೊವೆನಾ ಗೆ ಚಾಲನೆ ನೀಡುವರು. 4 ಗಂಟೆಗೆ ನೊವೆನಾ ಪ್ರಾರ್ಥನೆಗಳು ಮತ್ತು ಬಲಿಪೂಜೆ ನಡೆಯಲಿರುವುದು. ನೊವೆನಾ ಪ್ರಾರ್ಥನೆಗಳಿಗೆ ದೈನಂದಿನ ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ ಎಂದರು.

ಆಗಸ್ಟ್ 14 ರಂದು ಮಧ್ಯಾಹ್ನ 2.45 ಕ್ಕೆ ಆದಿ ಉಡುಪಿ ಜಂಕ್ಷನ್ ಬಳಿಯ ರೀಗಲ್ ನೆಕ್ಸ್ಟ್ ಅಪಾರ್ಟ್ಮೆಂಟ್ ಬಳಿಯಿಂದ ಕಲ್ಮಾಡಿ ದೇವಾಲಯದವರೆಗೆ ಮಾತೆಯ ತೇರಿನ ಮೆರವಣಿಗೆ  ನಡೆಯಲಿರುವುದು. ವಿಧಾನ ಪರಿಷತ್ತ್ ಸದಸ್ಯರಾದ ಐವಾನ್ ಡಿಸೋಜ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. 4 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪೌಲ್ ಸಲ್ದಾನ ರವರು ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆಯನ್ನು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ವಾರ್ಷಿಕ ಹಬ್ಬದ ಸಂಭ್ರಮದ ಬಲಿಪೂಜೆ ಆಗಸ್ಟ್ 15 ರಂದು ಸಂಜೆ 4 ಗಂಟೆಗೆ  ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊ ರವರು ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ವಹಿಸಲಿದ್ದಾರೆ. ವಾರ್ಷಿಕ ಮಹಾ ಹಬ್ಬದ ದಿನ ಬೆಳಿಗ್ಗೆಯಿಂದ ಪ್ರಾರ್ಥನಾ ವಿಧಿಗಳು ಮತ್ತು ಬಲಿ ಪೂಜೆ ಆರಂಭವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಕೊಂಕಣಿಯಲ್ಲಿ ದಿವ್ಯಬಲಿಪೂಜೆ ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಕೊಂಕಣಿಯಲ್ಲಿ, ಸಂಜೆ 6 ಗಂಟೆಗೆ ಕನ್ನಡದಲ್ಲಿ, ಹಾಗೂ ರಾತ್ರಿ 8 ಗಂಟೆಗೆ ಇಂಗ್ಲಿಷಿನಲ್ಲಿ ಬಲಿಪೂಜೆಗಳು ನಡೆಯಲಿರುವುದು. ಬಲಿಪೂಜೆಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಫಾ. ಆಲ್ಬನ್ ಡಿಸೋಜ ಹೇಳಿದರು.

ಕಲ್ಮಾಡಿ ದೇವಾಲಯ ಸರ್ವಧರ್ಮದ ಐಕ್ಯತೆಯ ಪುಣ್ಯಕ್ಷೇತ್ರವಾಗಿದೆ. ಜಾತಿ ಮತ ಭೇದವಿಲ್ಲದೆ ಸಹಸ್ರಾರು ಭಕ್ತಾದಿಗಳು ಬಂದು ತಮ್ಮ ಕಷ್ಟ ದುಃಖಗಳನ್ನು, ಸಮಸ್ಯೆಗಳನ್ನು, ರೋಗಗಳನ್ನು
ವೆಲಂಕಣಿ ಮಾತೆಗೆ ಸಮರ್ಪಿಸಿ ಶ್ರದ್ಧೆಯಿಂದ ಬಿಡುತ್ತಾರೆ. ಸರ್ವಧರ್ಮದ ಐಕ್ಯತೆಯ ಸಂಕೇತವಾಗಿ ಮಾನಸ್ತಂಭ (ಕೊಡಿ ಮರ) ವನ್ನು ಪ್ರಾಯೋಜಕರ ಸಹಾಯದಿಂದ ನಿರ್ಮಿಸಲಾಗಿದೆ. ಪ್ರಸ್ತುತ ವರ್ಷ ಜರುಗಿದ ವಿಶೇಷತೆಯೆಂದರೆ ಉಮೇಶ್ ಕಿದಿಯೂರ್ ರವರ ಮನೆಯಲ್ಲಿ ವೆಲಂಕಣಿ ಮಾತೆಯ ಇತಿಹಾಸವಿರುವ ಪವಾಡ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತಿತ್ತು. ಒಂದು ದಿನ ಅವರಿಗೆ ಕನಸಿನಲ್ಲಿ ‘ಈ ಮಾತೆಯನ್ನು ಮನೆಯಲ್ಲಿಟ್ಟು ಪೂಜಿಸುವುದು ಸರಿಯಲ್ಲ. ಮೂರ್ತಿಯನ್ನು ಸಹಸ್ರಾರು ಜನರಿಗೆ ಒಳ್ಳೆಯದಾಗುವ ಪವಿತ್ರ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕೆಂದು’ ದಿವ್ಯ ವಾಣಿಯ ಮೂಲಕ ಕೇಳಲಾಗಿತ್ತು. ಅದರಂತೆ ಉಮೇಶ್ ಅವರು ಕಲ್ಮಾಡಿ ದೇವಾಲಯವು ಸರ್ವಧರ್ಮದ ಪವಿತ್ರ ಸ್ಥಳವೆಂದು ಭಾವಿಸಿ, ದೇವಾಲಯದ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿಸೋಜ ಅವರೊಂದಿಗೆ ಸಮಾಲೋಚನೆ ನಡೆಸಿ, ಅವರ ಒಪ್ಪಿಗೆಯ ಮೇರೆಗೆ ಆ ಪವಾಡ ಮೂರ್ತಿಯನ್ನು ಅವರ ಮನೆಯಿಂದ ಆಶೀರ್ವದಿಸಿ ವಿಜೃಂಭಣೆಯ ಮೆರವಣಿಗೆಯೊಂದಿಗೆ ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರದಲ್ಲಿ ಅಕ್ಟೋಬರ್ 21, 2018ರಂದು ಪ್ರತಿಷ್ಠಾಪಿಸಲಾಯಿತು.

ಕಲ್ಮಾಡಿ ವೆಲಂಕಣಿ ಮಾತೆಯ ದೇವಾಲಯದಲ್ಲಿ ಪವಾಡಗಳು ದಿನದಿಂದ ದಿನಕ್ಕೆ ಹೆಚ್ಚಾಗಿ, ಹಲವಾರು ಸಾಕ್ಷಿಗಳನ್ನು ಭಕ್ತಾದಿಗಳು ನೀಡಿದ್ದಾರೆ. ಈ ದೇವಾಲಯವನ್ನು ಕೆಲವೇ ತಿಂಗಳುಗಳಲ್ಲಿ ಅಧಿಕೃತವಾಗಿ “ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರ”ವನ್ನಾಗಿ ಘೋಷಿಸುವ ನಿರೀಕ್ಷೆಯಲ್ಲಿದ್ದೇವೆ. ಈಗಾಗಲೇ ಇದಕ್ಕಾಗಿ ತಯಾರಿಗಳು ಪಡಿಸಲಾಗಿದ್ದು ಬೇಕಾದ 18 ದಾಖಲೆಗಳನ್ನು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಗೆ ನೀಡಲಾಗಿದೆ ಪುಣ್ಯಕ್ಷೇತ್ರವನ್ನು ಘೋಷಿಸುವ ಶುಭ ದಿನ ಹತ್ತಿರದಲ್ಲಿದೆ ಎಂದು ಭಾಸವಾಗುತ್ತಿದೆ. ಭಕ್ತರಿಗೆ ಲಭಿಸುವ ಪವಾಡಗಳಿಂದ ಕಲ್ಮಾಡಿ ವೆಲಂಕಣಿ ಮಾತೆಯ ದೇವಾಲಯವೂ ಪ್ರಪಂಚದ ಎಲ್ಲ ದೇಶಗಳಲ್ಲಿ ಪ್ರಖ್ಯಾತವಾಗಲಿ ಎಂದು ಈ ಸಂದರ್ಭದಲ್ಲಿ ವಂದನೀಯ ಫಾ. ಆಲ್ಬನ್ ಡಿಸೋಜ ಆಶಯ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಾರ್ಷಿಕ ಮಹಾ ಹಬ್ಬದ ಉಸ್ತುವಾರಿ ಫಾ. ಪ್ರವೀಣ್ ಮೊಂತೆರೊ, ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಐಸಿವೈಎಂ ಅಧ್ಯಕ್ಷ ಮೆಲ್ವಿನ್ ಕರ್ವಾಲೋ, 18 ಆಯೋಗದ ಸಂಚಾಲಕ ಫ್ರಾನ್ಸಿಸ್ ಫೆರ್ನಾಂಡಿಸ್  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!