ಅಜ್ಜರಕಾಡು ಉದ್ಯಾನದಲ್ಲಿ ಕುಡುಕರ ಹಾವಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕುರಿತು ನಗರಸಭೆಗೆ ಪತ್ರ : ಎಸ್‌ಪಿ ನಿಶಾ

ಉಡುಪಿ: ಅಜ್ಜರಕಾಡು ಉದ್ಯಾನದ ಬಳಿ ರಾತ್ರಿಯ ಹೊತ್ತು ಕುಡುಕರ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳಿದ್ದು, ರಾತ್ರಿಯ ಹೊತ್ತು ಗಸ್ತು ಹೆಚ್ಚಿಸಲಾಗುವುದು. ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕುರಿತು ನಗರಸಭೆಗೆ ಪತ್ರ ಬರೆಯುವುದಾಗಿ  ಜೇಮ್ಸ್‌ ತಿಳಿಸಿದರು.

ಶುಕ್ರವಾರ ಕಚೇರಿಯಲ್ಲಿ ನಡೆದ ಫೋನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಜ್ಜರಕಾಡು ಉದ್ಯಾನದಲ್ಲಿ ಹಗಲು ಹಾಗೂ ರಾತ್ರಿ ಗಸ್ತು ವ್ಯವಸ್ಥೆಗೆ ತಕ್ಷಣ ವ್ಯವಸ್ಥೆ ಮಾಡಿ. ಅನೈತಿಕ ಚಟುವಟಿಕೆಗಳ ತಡೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಎಂದು ಪೊಲೀಸರಿಗೆ ಸೂಚಿಸಿದರು.‌

ನಗರದಲ್ಲಿ ಆಟೋಗಳು ಮೀಟರ್ ಹಾಕುವುದಿಲ್ಲ, ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಹೆಚ್ಚಾಗಿವೆ. ಮೀಟರ್ ಕಾರ್ಯ ನಿರ್ವಹಿಸದ ಆಟೋಗಳಿಗೆ ಹಾಗೂ ಹೆಚ್ಚು ದರ ಪಡೆಯುವ ಚಾಲಕರಿಗೆ ದಂಡ ವಿಧಿಸಿ. ನಗರದೆಲ್ಲೆಡೆ ವಿಶೇಷ ಕಾರ್ಯಾಚರಣೆ ನಡೆಸಿ ಎಂದು ಎಸ್‌ಪಿ ಸೂಚಿಸಿದರು.

ಪೊಲೀಸ್ ಠಾಣೆ ಇನ್ನೂ ಜನಸ್ನೇಹಿಯಾಗಿಲ್ಲ ಎಂಬ ಅಪವಾದ ಇದೆ. ಇದನ್ನು ತೊಡೆದುಹಾಕಲು ಠಾಣೆಯ ಸಿಬ್ಬಂದಿಗೆ ಸಾಫ್ಟ್‌ ಸ್ಕಿಲ್ ಟ್ರೈನಿಂಗ್ ನೀಡಲಾಗಿದೆ. ಠಾಣೆಗೆ ಬಂದವರ ಜತೆ ಸೌಜನ್ಯದಿಂದ ವರ್ತಿಸುವಂತೆ ಸ್ವಾಗತಗಾರರಿಗೆ ಸೂಚನೆ ನೀಡಲಾಗಿದೆ. ಬೀಟ್ ಮಾಡುವ ವೇಳೆ ಸಾರ್ವಜನಿಕರ ಜತೆ ಸೌಹಾರ್ದಯುತವಾಗಿ ವರ್ತಿಸುವಂತೆ ಸಿಬ್ಬಂದಿಗೆ ತಿಳಿಹೇಳಲಾಗಿದೆ ಎಂದು ತಿಳಿಸಿದರು.

ಉಡುಪಿಯಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿಗಳನ್ನು ಜಾಲತಾಣದಲ್ಲಿ ಹರಡಬಾರದು. ಮಕ್ಕಳ ಅಪಹರಣ ಪ್ರಕರಣ ಜಿಲ್ಲೆಯಲ್ಲಿ ನಡೆದಿಲ್ಲ. ಸಾರ್ವಜನಿಕರು ಜವಾಬ್ದಾರಿಯಿಂದ ಜಾಲತಾಣ ಬಳಸಬೇಕು ಎಂದು ಸಲಹೆ ನೀಡಿದರು.

ಕುಂದಾಪುರದಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ವಾಹನ ಖರೀದಿಗೆ ಪಡೆದ ಸಾಲ ಮರುಪಾವತಿಸಿದ್ದರೂ ಸಾಲ ತೀರಿದ ಪ್ರಮಾಣ ಪತ್ರ ನೀಡಲು ಸತಾಯಿಸಲಾಗುತ್ತಿದೆ ಎಂದು ದೂರಿದರು. ಅಗತ್ಯ ದಾಖಲೆಗಳನ್ನು ಸ್ಥಳೀಯ ಠಾಣೆಗೆ ನೀಡಿ ದೂರು ದಾಖಲಿಸುವಂತೆ ಎಸ್‌ಪಿ ತಿಳಿಸಿದರು.

ಕೋಟದ ವಿವೇಕ ಜೂನಿಯರ್ ಕಾಲೇಜು ಬಳಿ ಶಾಲಾ ಆರಂಭ ಹಾಗೂ ಬಿಡುವ ಅವಧಿಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ. ಇಲ್ಲಿ ಸಿಬ್ಬಂದಿ ನಿಯೋಜಿಸಲು ವ್ಯಕ್ತಿಯೊಬ್ಬರು ಮನವಿ ಮಾಡಿದರು.

ಲಕ್ಷ್ಮೀಂದ್ರ ನಗರದಿಂದ ಮಣಿಪಾಲದವರೆಗೆ ರಸ್ತೆ ಸಂಚಾರಕ್ಕೆ ತೊಂದರೆ, ಪಡುಬಿದ್ರಿ ಮಟ್ಟು ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಯನ್ನು ಕಬಳಿಸಲಾಗಿದೆ. ಉಡುಪಿ ನಗರದಲ್ಲಿ ಎಲ್ಲೆಂದರಲ್ಲಿ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಕೇಳಿಬಂದವು.

ಗಂಗೊಳ್ಳಿಯಲ್ಲಿ ಮಟ್ಕಾ ಹಾವಳಿ, ಕೋಟಾದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಬ್ರಹ್ಮಾವರದ ಕೊಳಲಗಿರಿಯ ಹೋಟೆಲ್‌ನಲ್ಲಿ ಮದ್ಯ ಮಾರಾಟ, ಬಾರಿನಿಂದ ಗಲೀಜು ನೀರು ರಸ್ತೆ ಹರಿಯುತ್ತಿದೆ ಎಂದು ಸ್ಥಳೀಯರು ದೂರಿದರು.

ಬೈಂದೂರು ಟ್ಯಾಕ್ಸಿ ಹಾಗೂ ಆಟೋದವರ ಬಳಿ ದಾಖಲಾತಿ ಇಲ್ಲ, ಕುಡಿದು ವಾಹನ ಚಾಲನೆ ಮಾಡಲಾಗುತ್ತಿದೆ. ರೈಲು ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ, ಮಣಿಪಾಲದಲ್ಲಿ ಮಟ್ಕಾ ಹಾವಳಿ, ಆಟೋಚಾಲಕರಿಂದ ಹೆಚ್ಚು ಹಣ ವಸೂಲಿ, ಬಸ್‌ನಲ್ಲಿ ಅಂಗವಿಕಲರಿಗೆ ಮೀಸಲಾದ ಸೀಟು ಕಬಳಿಕೆ, ಬಸ್ ಹತ್ತಲು, ಇಳಿಯಲು ಗಾಲಿಕುರ್ಚಿ ಸೌಲಭ್ಯ ಒದಗಿಸುವಂತೆ ಅಂಗವಿಕಲರೊಬ್ಬರು ಮನವಿ ಮಾಡಿದರು.

ಹೆಬ್ರಿಯ‌ಲ್ಲಿ ಅಕ್ರಮ ಕ್ರಶರ್, ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯ ಸರ್ವಿಸ್ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್, ಕಾಪುವಿನಲ್ಲಿ ಸರ್ಕಾರಿ ಗುಡ್ಡೆಯ ಸೆಲೂನ್‌ ಬಳಿ ಯುವಕರು ಮಹಿಳೆಯರಿಗೆ ಕೀಟಲೆ ನೀಡುತ್ತಿದ್ದಾರೆ ಎಂಬ ದೂರು ಕೇಳಿಬಂತು.

Leave a Reply

Your email address will not be published. Required fields are marked *

error: Content is protected !!