ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರ : ಆಗಸ್ಟ್ 15ರಂದು ವಾರ್ಷಿಕ ಮಹಾ ಹಬ್ಬ
ಜನವರಿ 6, 2018 ರಂದು ಉದ್ಘಾಟನೆಗೊಂಡ ಹಡಗಿನಕಾರದ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ದಿನಂಪ್ರತಿ ನೂರಾರು ಭಕ್ತರು ಆಗಮಿಸುತ್ತಿದ್ದು, ಭಕ್ತರ ಪ್ರೀತಿಯ ವೆಲಂಕಣಿ ಮಾತೆಯ ಹಬ್ಬವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಆಗಸ್ಟ್ 6 ರಿಂದ ಆಗಸ್ಟ್ 14 ತನಕ ಉತ್ಸವದ ಪೂರ್ವಭಾವಿಯಾಗಿ ನೊವೆನಾ ಪ್ರಾರ್ಥನೆಗಳು ಮತ್ತು ಬಲಿಪೂಜೆಗಳು ನಡೆಯಲಿರುವುದು. 9 ದಿನಗಳ ನೊವೆನಾ ಸಮಯದಲ್ಲಿ ವಿಶೇಷ ಉದ್ದೇಶಗಳಿಗೋಸ್ಕರ ಪ್ರಾರ್ಥನೆಗಳನ್ನು ನಡೆಸಲಾಗುವುದು ಎಂದರು.
ಆಗಸ್ಟ್ 6 ರಂದು ಸಂಜೆ 3.45 ಕ್ಕೆ ಸಂತ ಜೋಸೆಫ್ ಸೆಮಿನರಿ ಮಂಗಳೂರು ಇದರ ರೆಕ್ಟರ್ ಅತಿ ವಂದನೀಯ ಫಾ. ರೊನಾಲ್ಡ್ ಸೆರಾವೊ ನೊವೆನಾ ಗೆ ಚಾಲನೆ ನೀಡುವರು. 4 ಗಂಟೆಗೆ ನೊವೆನಾ ಪ್ರಾರ್ಥನೆಗಳು ಮತ್ತು ಬಲಿಪೂಜೆ ನಡೆಯಲಿರುವುದು. ನೊವೆನಾ ಪ್ರಾರ್ಥನೆಗಳಿಗೆ ದೈನಂದಿನ ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ ಎಂದರು.
ಆಗಸ್ಟ್ 14 ರಂದು ಮಧ್ಯಾಹ್ನ 2.45 ಕ್ಕೆ ಆದಿ ಉಡುಪಿ ಜಂಕ್ಷನ್ ಬಳಿಯ ರೀಗಲ್ ನೆಕ್ಸ್ಟ್ ಅಪಾರ್ಟ್ಮೆಂಟ್ ಬಳಿಯಿಂದ ಕಲ್ಮಾಡಿ ದೇವಾಲಯದವರೆಗೆ ಮಾತೆಯ ತೇರಿನ ಮೆರವಣಿಗೆ ನಡೆಯಲಿರುವುದು. ವಿಧಾನ ಪರಿಷತ್ತ್ ಸದಸ್ಯರಾದ ಐವಾನ್ ಡಿಸೋಜ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. 4 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪೌಲ್ ಸಲ್ದಾನ ರವರು ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆಯನ್ನು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ವಾರ್ಷಿಕ ಹಬ್ಬದ ಸಂಭ್ರಮದ ಬಲಿಪೂಜೆ ಆಗಸ್ಟ್ 15 ರಂದು ಸಂಜೆ 4 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊ ರವರು ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ವಹಿಸಲಿದ್ದಾರೆ. ವಾರ್ಷಿಕ ಮಹಾ ಹಬ್ಬದ ದಿನ ಬೆಳಿಗ್ಗೆಯಿಂದ ಪ್ರಾರ್ಥನಾ ವಿಧಿಗಳು ಮತ್ತು ಬಲಿ ಪೂಜೆ ಆರಂಭವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಕೊಂಕಣಿಯಲ್ಲಿ ದಿವ್ಯಬಲಿಪೂಜೆ ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಕೊಂಕಣಿಯಲ್ಲಿ, ಸಂಜೆ 6 ಗಂಟೆಗೆ ಕನ್ನಡದಲ್ಲಿ, ಹಾಗೂ ರಾತ್ರಿ 8 ಗಂಟೆಗೆ ಇಂಗ್ಲಿಷಿನಲ್ಲಿ ಬಲಿಪೂಜೆಗಳು ನಡೆಯಲಿರುವುದು. ಬಲಿಪೂಜೆಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಫಾ. ಆಲ್ಬನ್ ಡಿಸೋಜ ಹೇಳಿದರು.
ಕಲ್ಮಾಡಿ ವೆಲಂಕಣಿ ಮಾತೆಯ ದೇವಾಲಯದಲ್ಲಿ ಪವಾಡಗಳು ದಿನದಿಂದ ದಿನಕ್ಕೆ ಹೆಚ್ಚಾಗಿ, ಹಲವಾರು ಸಾಕ್ಷಿಗಳನ್ನು ಭಕ್ತಾದಿಗಳು ನೀಡಿದ್ದಾರೆ. ಈ ದೇವಾಲಯವನ್ನು ಕೆಲವೇ ತಿಂಗಳುಗಳಲ್ಲಿ ಅಧಿಕೃತವಾಗಿ “ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರ”ವನ್ನಾಗಿ ಘೋಷಿಸುವ ನಿರೀಕ್ಷೆಯಲ್ಲಿದ್ದೇವೆ. ಈಗಾಗಲೇ ಇದಕ್ಕಾಗಿ ತಯಾರಿಗಳು ಪಡಿಸಲಾಗಿದ್ದು ಬೇಕಾದ 18 ದಾಖಲೆಗಳನ್ನು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಗೆ ನೀಡಲಾಗಿದೆ ಪುಣ್ಯಕ್ಷೇತ್ರವನ್ನು ಘೋಷಿಸುವ ಶುಭ ದಿನ ಹತ್ತಿರದಲ್ಲಿದೆ ಎಂದು ಭಾಸವಾಗುತ್ತಿದೆ. ಭಕ್ತರಿಗೆ ಲಭಿಸುವ ಪವಾಡಗಳಿಂದ ಕಲ್ಮಾಡಿ ವೆಲಂಕಣಿ ಮಾತೆಯ ದೇವಾಲಯವೂ ಪ್ರಪಂಚದ ಎಲ್ಲ ದೇಶಗಳಲ್ಲಿ ಪ್ರಖ್ಯಾತವಾಗಲಿ ಎಂದು ಈ ಸಂದರ್ಭದಲ್ಲಿ ವಂದನೀಯ ಫಾ. ಆಲ್ಬನ್ ಡಿಸೋಜ ಆಶಯ ವ್ಯಕ್ತಪಡಿಸಿದರು.