ಕೊನೆಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಕೇಂದ್ರ

ನವದೆಹಲಿ: ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಸಂತ್ರಸ್ತರ ನೋವಿಗೆ ಕೊನೆಗೂ ಸ್ಪಂದಿಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಿಂದ ₹ 1,200 ಕೋಟಿ ಮುಂಗಡ ಪರಿಹಾರ ಮಂಜೂರು ಮಾಡಿದೆ.

ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ 13 ರಾಜ್ಯಗಳ ಪೈಕಿ ಕರ್ನಾಟಕ ಮತ್ತು ಬಿಹಾರಗಳಿಗೆ ಪರಿಹಾರ ಒದಗಿಸುವ ನಿರ್ಧಾರವನ್ನು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ಶುಕ್ರವಾರ ಕೈಗೊಂಡಿದ್ದಾರೆ.

ಪ್ರವಾಹಪೀಡಿತ ಬಿಹಾರಕ್ಕೆ ಎನ್‌ಡಿಆರ್‌ಎಫ್‌ ಅಡಿ ₹ 400 ಕೋಟಿ ಹಾಗೂ ರಾಜ್ಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌) ಅಡಿ ಪ್ರಸಕ್ತ ಸಾಲಿನ 2ನೇ ಕಂತಿನ ಭಾಗವಾಗಿ ₹ 213.75 ಕೋಟಿ ಅನುದಾನ ಒದಗಿಸಲಾಗಿದೆ.

ಪ್ರಸಕ್ತ ಮುಂಗಾರಿನಲ್ಲಿ 13 ರಾಜ್ಯಗಳು ಪ್ರವಾಹದಿಂದ ತತ್ತರಿಸಿವೆ. ಆಯಾ ಸರ್ಕಾರಗಳ ಮನವಿಯ ಮೇರೆಗೆ ಕೇಂದ್ರದ ಅಧ್ಯಯನ ತಂಡಗಳು ಸಮೀಕ್ಷೆ ನಡೆಸಿದ್ದವು. ಕರ್ನಾಟಕ ಮತ್ತು ಬಿಹಾರಕ್ಕೆ ತೆರಳಿದ್ದ ತಂಡಗಳು ಸಲ್ಲಿಸಿರುವ ಮಧ್ಯಂತರ ವರದಿ ಆಧರಿಸಿ ಪರಿಹಾರ ಘೋಷಿಸಲಾಗಿದೆ.

‘ರಾಜ್ಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಲ್ಲಿ ಕೊರತೆ ಇರುವುದರಿಂದ ಸಂತ್ರಸ್ತರಿಗೆ ಸೂಕ್ತ ನೆರವು ನೀಡುವಲ್ಲಿ ವಿಳಂಬ ಆಗಿದೆ. ಕೂಡಲೇ ಕೇಂದ್ರದ ನೆರವು ಒದಗಿಸಬೇಕು’ ಎಂಬ ಈ ಎರಡೂ ರಾಜ್ಯಗಳ ಮನವಿಯ ಮೇರೆಗೆ ಮುಂಗಡ ಪರಿಹಾರ ನೀಡಲಾಗಿದೆ ಎಂದು ಕೇಂದ್ರದ ಗೃಹ ಸಚಿವಾಲಯ ತಿಳಿಸಿದೆ.

ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ರಾಜ್ಯಗಳ ಜನತೆಗೆ ಕೇಂದ್ರದಿಂದ ಅಗತ್ಯ ನೆರವು ನೀಡಲಾಗುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.

ಕಳೆದ ಜುಲೈ ಮತ್ತು ಆಗಸ್ಟ್‌ನಲ್ಲಿಸುರಿದ ಭಾರಿ ಮಳೆ ಹಾಗೂ ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ನೀರು ಹರಿಸಿದ್ದರಿಂದ ರಾಜ್ಯದಲ್ಲಿ ಪ್ರವಾಹ ಸ್ಥಿತಿ ತಲೆದೋರಿತ್ತು. ಇದರಿಂದಾಗಿ ₹ 38,000 ಕೋಟಿಯಷ್ಟು ಅಂದಾಜು ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

Leave a Reply

Your email address will not be published. Required fields are marked *

error: Content is protected !!