ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿದಲ್ಲಿ ಗುತ್ತಿಗೆ ರದ್ದು:ಡಿಸಿ ಎಚ್ಚರಿಕೆ

ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ
ಉಡುಪಿ : ಮಲ್ಪೆ ಬೀಚ್‍ಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ
ಈಗಿರುವ ಐದು ಜನರ ಜೊತೆಗೆ ಹೆಚ್ಚುವರಿ ಐದು ಜೀವರಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮಲ್ಪೆ ಅಭಿವೃದ್ದಿ ಸಮಿತಿ ಸದಸ್ಯರಿಗೆ ಸೂಚಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಮಲ್ಪೆ ಅಭಿವೃದ್ದಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಮಲ್ಪೆ ಬೀಚ್ ನೋಡಲು ಬರುವ ಪ್ರವಾಸಿಗರ ಸುರಕ್ಷತೆ ಪ್ರಥಮ ಆದ್ಯತೆಯಾಗಿರುವುದರಿಂದ ಈಗಿರುವ ಐದು ಜನ ಜೀವರಕ್ಷಕರ ಜೊತೆಗೆ ಹೆಚ್ಚುವರಿಯಾಗಿ ಇನ್ನೂ ಐದು ಜನರನ್ನು ನೇಮಕ ಮಾಡುವಂತೆ ಸೂಚಿಸಿದ
ಜಿಲ್ಲಾಧಿಕಾರಿಗಳು, ಇವರು ಜೀವ ರಕ್ಷಕ ಮತ್ತು ಹಸಿರು ಪೋಲಿಸ್ ಕರ್ತವ್ಯಗಳೆರಡನ್ನೂ ನಿಭಾಯಿಸುವಂತಿರಬೇಕು, ಹಾಗೂ ಕಡ್ಡಾಯವಾಗಿ ತುರ್ತು ಸಮಯದಲ್ಲಿ ಸ್ಪಂದಿಸುವಂತಾಗಿರಬೇಕು ಎಂದರು.

ಸದ್ಯ ಕಾರ್ಯನಿರ್ವಹಿಸುತ್ತಿರುವ ಐದು ಜನ ಜೀವರಕ್ಷಕರು ಮತ್ತು ಹೊಸದಾಗಿ ನೇಮಕವಾಗುವ ಐದು ಜನರೂ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು, ಹತ್ತೂ ಜನ ಜೀವರಕ್ಷಕರು ವರ್ಷ ಪೂರ್ತಿ ಮಲ್ಪೆ ಬೀಚ್ ಪರಿಸರದಲ್ಲೇ ಇದ್ದು, ಅವಘಡಗಳಾದಾಗ ತ್ವರಿತ ಕಾರ್ಯಾಚರಣೆ ಮಾಡುವಂತಿರಬೇಕು, ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿ ಅಡಿಯಲ್ಲಿ ಈ ಜೀವರಕ್ಷಕರು ಕಾರ್ಯ ನಿರ್ವಹಿಸಬೇಕು ಎಂದು ಡಿಸಿ ಹೇಳಿದರು.


ಬೀಚ್ ಪರಿಸರದಲ್ಲಿರುವ ರಂಗಮಂಟಪದ ಅಳತೆ ಕಿರಿದಾಗಿದ್ದು, ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಡೆಸಲು ತೊಂದರೆಯಾಗುತ್ತಿರುವುದನ್ನು ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ಸ್ಪಂದಿಸಿದ ಡಿಸಿ, ರಂಗಮಂದಿರದ ಎತ್ತರ ಮತ್ತು ಅಗಲವನ್ನು ಹೆಚ್ಚಿಸಲು ಒಪ್ಪಿಗೆ ಸೂಚಿಸಿ, ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು
ತಿಳಿಸಿದರು. ಮಲ್ಪೆ ಬೀಚ್ ಪರಿಸರದಲ್ಲಿ ಶೌಚಾಲಯ ನಿರ್ಮಾಣ, ಕಿತ್ತು ಹೋಗಿರುವ ಟೈಲ್ಸ್‍ಗಳ ಪುನರ್ ಅಳವಡಿಕೆ, ಬಯೋ ಡೈಜೆಸ್ಟ್ ನಿರ್ಮಾಣ, ಇಂಟರ್ ಲಾಕ್ ಅಳವಡಿಕೆ, ಅನಧಿಕೃತ ಶೆಡ್‍ಗಳ ತೆರವು, ಪಾಕಿರ್ಂಗ್ ಮತ್ತು ಅಂಗಡಿ ಸಮಸ್ಯೆಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.


ಮಲ್ಪೆಯಿಂದ ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವ ಚಿಕ್ಕ ಬೋಟ್‍ಗಳಲ್ಲಿ ಸುರಕ್ಷತೆಯ ಮಾನದಂಡವನ್ನು ಭದ್ರತಾ ಸಮಿತಿ ಸಭೆಯಲ್ಲಿ ಪರಿಶೀಲಿಸಿದ ಬಳಿಕವೆ ಬೋಟ್‍ಗಳು ದ್ವೀಪಕ್ಕೆ ತೆರಳಲು ಅನುವು ಮಾಡಿಕೊಡಲಾಗುವುದೆಂದ ಜಿಲ್ಲಾಧಿಕಾರಿಗಳು, ಜೆಟ್ಟಿಯಿಂದ ಹೊರಡುವ ದೊಡ್ಡ ಬೋಟ್‍ಗಳಿಗೆ ಹೊಸದಾಗಿ ಟೆಂಡರ್ ಕರೆಯುವವರೆಗೆ, ಈ ಹಿಂದಿನವರಿಗೆ ಅದೇ ದರದಲ್ಲಿ ನಿರ್ವಹಿಸುವಂತೆ ಸೂಚಿಸಿದರು. ಮಲ್ಪೆ ಬೀಚ್‍ನಲ್ಲಿ ವಿವಿಧ ಚಟುವಟಿಕೆ ನಡೆಸಲು ಗುತ್ತಿಗೆ ಪಡೆದಿರುವವರು ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿದಲ್ಲಿ, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಅವರ ಗುತ್ತಿಗೆಯನ್ನು ರದ್ದು ಪಡಿಸುವುದಾಗಿ ಡಿಸಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಪೌರಾಯುಕ್ತ ಆನಂದ ಕಲ್ಲೋಳಿಕರ್, ಶಾಸಕ ರಘುಪತಿ ಭಟ್, ಯಶ್ ಪಾಲ್ ಸುವರ್ಣ ಮತ್ತು ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!