ನಿಷೇಧಿತ ಫ್ಲೆಕ್ಸ್ ಬ್ಯಾನರ್, ಅನಧೀಕೃತ ಬ್ಯಾನರ್ಗಳನ್ನು ತೆರವುಗೊಳಿಸಿ: ಡಿಸಿ

ಉಡುಪಿ : ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿ, ಅಂಗಡಿ ಮಾಲೀಕ, ಮಾರಾಟಗಾರ, ಸಗಟು ಮಾರಾಟಗಾರ ಅಥವಾ ಚಿಲ್ಲರೆ ವ್ಯಾಪಾರಿ, ವ್ಯಾಪಾರಿ ಮತ್ತು ಮಾರಾಟಗಾರರು, ಯಾವುದೇ ದಪ್ಪದ, ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್
ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೋಕೂಲ್ ಮತ್ತು ಪ್ಲಾಸ್ಟಿಕ್ ಮೈಕೋ ಬೀಡ್ಸ್‍ನಿಂದ ತಯಾರಾದಂತಹ ಮೇಲ್ಕಂಡ ವಸ್ತುಗಳ ಬಳಕೆ, ತಯಾರಿಕೆ, ಸರಬರಾಜು, ಸಂಗ್ರಹಣೆ ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ನಿಷೇಧಿಸಲಾಗಿದೆ. ಆಗಸ್ಟ್ 31, 2019 ಕ್ಕೆ ಅಂತಿಮ ಗಡುವು ನೀಡಲಾಗಿರುತ್ತದೆ. ನಿಯಮಗಳನ್ನು ಪಾಲಿಸದಿದ್ದಲ್ಲಿ ದಂಡ ವಿಧಿಸುವುದು ಅನಿವಾರ್ಯವಾಗಿರುತ್ತದೆ.


ಈ ಹಿನ್ನೆಲೆಯಲ್ಲಿ ಫ್ಲೆಕ್ಸ್ ಬ್ಯಾನರ್‍ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಫ್ಲೆಕ್ಸ್ ಬ್ಯಾನರ್‍ಗಳು ಮತ್ತು ಅನಧೀಕೃತ ಬ್ಯಾನರ್‍ಗಳು ಕಂಡುಬಂದಿದ್ದು, ತಕ್ಷಣ ತೆರವುಗೊಳಿಸಬೇಕು. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ್ದಲ್ಲಿ 1000 ರೂ ಹಾಗೂ ಎರಡನೇ ಬಾರಿ ನಿಯಮ ಉಲ್ಲಂಘಿಸಿದ್ದಲ್ಲಿ 2000 ರೂ. ದಂಡ ವಿಧಿಸಲಾಗುವುದು. ಹಾಗೂ ಮೂರನೇ ಬಾರಿ ಪ್ರಕರಣ ದಾಖಲಿಸುವುದು ಅಥವಾ ಅಂಗಡಿ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಬದಲಿ ವ್ಯವಸ್ಥೆಯಾಗಿ ಬಟ್ಟೆಯಿಂದ ಅಥವಾ ಪೇಪರ್‍ನಿಂದ ತಯಾರಿಸುವ ಬ್ಯಾನರ್, ತೋರಣ ಬಂಟಿಗ್ಸ್, ಬಾವುಟ ಇವುಗಳನ್ನು ಮಾತ್ರ ಉಪಯೋಗಿಸುವಂತೆ ಸೂಚಿಸಬೇಕು. ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಸಂಬಂಧಿಸಿದ ಮುಖ್ಯಾಧಿಕಾರಿ/ ಪೌರಾಯುಕ್ತರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

ಬ್ಯಾನರ್ ಹಾಗೂ ಫ್ಲೆಕ್ಸ್‍ಗಳನ್ನು ಅಳವಡಿಸುವಾಗ ಪಾಲಿಸಬೇಕಾದ ನಿಯಮಗಳು: ಕಡ್ಡಾಯವಾಗಿ ಬಟ್ಟೆಯ ಬ್ಯಾನರ್‍ಗಳನ್ನು ಬಳಸಬೇಕು. ಅವಧಿ ಮುಗಿದ ತಕ್ಷಣ ಬ್ಯಾನರ್ ತೆರವುಗೊಳಿಸಬೇಕು. ಬ್ಯಾನರ್ ಅಳವಡಿಸುವ ದಿನಾಂಕ, ಸಮಯದ ವಿವರ ಸಂಬಂಧಪಟ್ಟ ಠಾಣೆಗೆ ತಿಳಿಸಬೇಕು .ಬ್ಯಾನರ್ ಅಳವಡಿಸುವ ಸಮಯದಲ್ಲಿ ಭದ್ರತೆಗೆ ಕಾವಲುಗಾರನ ನಿಯೋಜನೆ, ಸಿ.ಸಿ.ಟಿ.ವಿ ಕ್ಯಾಮರ ಅಳವಡಿಸಬೇಕು. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಅಳವಡಿಸುವುದು ಕಡ್ಡಾಯವಾಗಿರಬೇಕು. ಅಪಾಯಕಾರಿ ತಿರುವುಗಳಲ್ಲಿ ಬ್ಯಾನರ್‍ಗಳನ್ನು ಕಡ್ಡಾಯವಾಗಿ ಹಾಕುವಂತಿಲ್ಲ. ಬ್ಯಾನರ್‍ಗಳಿಗೆ ಕಡ್ಡಾಯವಾಗಿ ಆದೇಶ ಸಂಖ್ಯೆ, ದಿನಾಂಕ, ಬ್ಯಾನರ್ ಅಳವಡಿಕೆ ಅವಧಿಯನ್ನು ನಮೂದಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಡಿವೈಡರ್‍ಗಳಲ್ಲಿ ಜಾಹೀರಾತು ಫಲಕ
ಹಾಕುವಂತಿಲ್ಲ.

ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಕಡ್ಡಾಯವಾಗಿ ಜಾರಿಗೆ ತರಬೇಕಾದ ನಿರ್ದೇಶನಗಳು: ಹೊರ ರಾಜ್ಯಗಳಿಂದ ನಿರಂತರವಾಗಿ
ರಾಜ್ಯಕ್ಕೆ ಬರುತ್ತಿರುವ ನಿಷೇಧಿತ ಪ್ಲಾಸ್ಟಿಕ್‍ನ್ನು ರಾಜ್ಯದ ಗಡಿಭಾಗದ ಚೆಕ್ ಪೋಸ್ಟ್‍ಗಳಲ್ಲಿಯೇ ತಡೆಗಟ್ಟಲು ಸಂಬಂಧಪಟ್ಟ ಇಲಾಖೆಗಳಾದ ಸಾರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಪೊಲೀಸ್ಇ ಲಾಖೆ, ಅರಣ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಅನುಷ್ಟಾನಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಹೋಟೆಲ್ ಮತ್ತು ಉಪಹಾರ ಗೃಹಗಳ ಸಂಘ, ಹಣ್ಣು ಮತ್ತು ತರಕಾರಿ ಮಾರಾಟಗಾರರ ಸಂಘ, ಅಂಗಡಿ ಮುಂಗಟ್ಟು ಮಾಲಿಕರ ಸಂಘ ಮುಂತಾದ ಸಂಘಗಳ ಪದಾಧಿಕಾರಿಗಳ ಸಭೆ ಕರೆದು, ನಿಷೇಧಿತ ಪ್ಲಾಸ್ಟಿಕ್‍ನ್ನು ಬಳಸದಂತೆ ಮನ ಒಲಿಸಬೇಕು ಹಾಗೂ ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ಗಳ ಬದಲಾಗಿ ಬಟ್ಟೆ ಚೀಲಗಳನ್ನು ಬಳಸಲು ಹಾಗೂ ಮಾರಾಟ ಮಾಡಲು ಸಾರ್ವಜನಿಕರಲ್ಲಿ ಹಾಗೂ ಅಂಗಡಿ ಮಾಲೀಕರಲ್ಲಿ ಜಾಗೃತಿ ಮೂಡಿಸಬೇಕು.


ದೇವಾಲಯ ಹಾಗೂ ಧಾರ್ಮಿಕ ಕೇಂದ್ರ ಆವರಣದಲ್ಲಿ ಹಾಗೂ ಹೊರಗಡೆ ನಿಷೇಧಿತ ಪ್ಲಾಸ್ಟಿಕ್, ಪ್ಲಾಸ್ಟಿಕ್‍ಗಳಿಂದ ತಯಾರಿಸಲಾದ ಕ್ಯಾರಿಬ್ಯಾಗ್, ತಟ್ಟೆ, ಲೋಟ, ಬಟ್ಟಲು ಬ್ಯಾನರ್, ಬಂಟಿಂಗ್ಸ್ ಮುಂತಾದ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಯಾವುದೇ ರೀತಿಯಲ್ಲಿ ಬಳಕೆ ಮಾಡಬಾರದು. ದೇವಸ್ಥಾನ/ ಧಾರ್ಮಿಕ ಕೇಂದ್ರದ ಪ್ರಾಂಗಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ಎಂಬ ಫಲಕವನ್ನು ಅಳವಡಿಸುವ ಕುರಿತು ಮಂದಿರ/ ದೇವಸ್ಥಾನಗಳಿಗೆ ಬರುವ ಸಾರ್ವಜನಿಕರು ಹಾಗೂ ಭಕ್ತರಲ್ಲಿ ಅರಿವು ಮೂಡಿಸಬೇಕು. ದೇವರ ಪೂಜೆ ಮತ್ತು ಅಭಿಷೇಕಕ್ಕೆ ಪ್ರಸಾದ, ದೀಪದ ಎಣ್ಣೆ, ಹಾಲು,
ತುಪ್ಪ, ಊದುಬತ್ತಿ, ಅರಿಸಿನ, ಕುಂಕುಮ, ಕರ್ಪೂರ, ಹೂವು, ತುಪ್ಪ ಇನ್ನಿತರ ಅಗತ್ಯ ಪೂಜಾ ಸಾಮಾಗ್ರಿಗಳನ್ನು ತರಲು ಯಾವುದೇ ಪ್ಲಾಸ್ಟಿಕ್ ಕವರ್ ಬಳಸದೇ ಭಕ್ತರು ತಮ್ಮದೇ ಬಟ್ಟೆ, ಕಾಗದ ಕೈ ಚೀಲಗಳಲ್ಲಿ, ಸ್ಟೀಲ್ ಅಥವಾ ಇನ್ನಿತರ ಲೋಹ/ ಮಣ್ಣಿನ ಪಾತ್ರೆಗಳಲ್ಲಿ ತರುವಂತೆ ಸೂಚನೆ ನೀಡಬೇಕು.


ಹೋಟೆಲ್ ಮತ್ತು ಉಪಹಾರ ಗೃಹಗಳ ಸಂಘ, ಹಣ್ಣು ಮತ್ತು ತರಕಾರಿ ಮಾರಾಟಗಾರರ ಸಂಘ, ಅಂಗಡಿ ಮುಂಗಟ್ಟುಗಳಲ್ಲಿ ನಮ್ಮಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಫಲಕವನ್ನ ಕಡ್ಡಾಯವಾಗಿ ಅಳವಡಿಸಲು ಸೂಕ್ತ ಕ್ರಮ ಜರುಗಿಸಬೇಕು.
ಎಲ್ಲಾ ಸ್ಥಳೀಯ ಸಂಸ್ಥೆಗಳು/ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್/ ಗ್ರಾಮಗಳಲ್ಲಿ ಪ್ಲಾಸ್ಟಿಕ್ ನಿಷೇಧ ಅನುಷ್ಟಾನವನ್ನು ಕೈಗೊಂಡು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡಲು ಕ್ರಮ ವಹಿಸಬೇಕು.
ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಇಕೋ ಕ್ಲಬ್‍ಗಳ ಸಹಯೋಗದೊಂದಿಗೆ ಪರಿಸರ ಮಿತ್ರ ಶಾಲಾ ಕಾರ್ಯಕ್ರಮದಡಿ ವಿಶೇಷವಾಗಿ ಪ್ಲಾಸ್ಟಿಕ್ ನಿಷೇಧದ ಅನುಷ್ಟಾನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಜಾಹೀರಾತುಗಳ ಮೂಲಕ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು.


ಜಿಲ್ಲಾ ಮಟ್ಟದಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡುವ ಘಟಕಗಳನ್ನು ಮುಚ್ಚುವ ಆದೇಶ ನೀಡುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕ್ರಮ ಕೈಗೊಳ್ಳಬೇಕು. ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿ, ಮುಂಗಟ್ಟು ಮತ್ತು ಮಾಲ್‍ಗಳ ಮೇಲೆ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಬೇಕು ಮತ್ತು ನಿಯಮಾನುಸಾರ ಉಲ್ಲಂಘಿತರಿಗೆ ದಂಡ ವಿಧಿಸಬೇಕು.


ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಮತ್ತು ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರುಗಳಿಗೆ ನಿರ್ದೇಶನ ನೀಡುವಂತೆ ಹಾಗೂ ಸರ್ಕಾರದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!