ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಹಮಾಲಿ ಕಾರ್ಮಿಕರ ಫೆಡರೇಷನ್‌ನಿಂದ ಪ್ರತಿಭಟನೆ

ಮಡಿಕೇರಿ: ಅಸಂಘಟಿತ ವಲಯಕ್ಕೆ ಒಳಪಟ್ಟು, ಅಸ್ಥಿರವಾದ ಬದುಕನ್ನು ಎದುರಿಸುತ್ತಿರುವ ಹಮಾಲಿ ಕಾರ್ಮಿಕರಿಗೆ ವಸತಿ  ಸೌಲಭ್ಯ ಮತ್ತು ಪಿಂಚಣಿ ಯೋಜನೆ ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ನ ರಾಜ್ಯಾಧ್ಯಕ್ಷ ಕೆ.ಮಹಾಂತೇಶ ಹಾಗೂ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್.ಭರತ್ ಅವರುಗಳು ಸರಕಾರ ದುಡಿಯುವ ವರ್ಗವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಿದರು.

ಪ್ರತಿಭಟನೆಯ ಬಳಿಕ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಮಹಾಂತೇಶ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ ಮತ್ತು ವ್ಯಾಪಾರ ವಹಿವಾಟಿನಲ್ಲಿ ಮಹತ್ವದ ಪಾತ್ರ ವಹಿಸುವ ಹಮಾಲಿ ಕಾರ್ಮಿಕರು, ರಾಜ್ಯದ ಕೃಷಿ ಮಾರುಕಟ್ಟೆ, ವಿವಿಧ  ಗಿರಣಿಗಳಲ್ಲಿ, ನಗರ  ಪ್ರದೇಶದ ಬಜಾರ್‌ಗಳಲ್ಲಿ, ಗೋದಾಮುಗಳಲ್ಲಿ ದುಡಿದು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.

ಹಮಾಲಿ, ತಲೆ ಹೊರೆ ಕಾರ್ಮಿಕರ ದುಡಿಮೆ ಆಯಾ ಕಾಲಮಾನಕ್ಕೆ ಸೀಮಿತವಾಗಿ ನಡೆಯುತ್ತದೆ. ಕೃಷಿ ಚಟುವಟಿಕೆಗಳು ನಡೆದು, ಕೃಷಿಯುತ್ಪನ್ನಗಳನ್ನು ರೈತರು ಮಾರುಕಟ್ಟೆಗೆ ತರುವ ಸಂದರ್ಭಗಳಲ್ಲಿ, ಬಜಾರ್‌ಗಳಲ್ಲಿ ನಡೆಯುವ ದಿನದ ವ್ಯಾಪಾರ ವಹಿವಾಟಿನ ಮೇಲೆ ಇವರ ಬದುಕು ಅವಲಂಬಿಸಿದೆ. ಇಂತಹ ಶ್ರಮಜೀವಿಗಳ ಬದುಕಿಗೆ  ಯಾವುದೇ ಭದ್ರತೆಗಳಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದುಡಿಯುವವರಿಗೆ ಕಲ್ಯಾಣ ನಿಧಿಯ ಸೌಲಭ್ಯವಿದೆಯಾದರೆ, ಹಮಾಲಿ, ತಲೆ ಹೊರೆ ಕಾರ್ಮಿಕರಿಗೆ ಇಂತಹ ಸೌಲಭ್ಯಗಳಿಲ್ಲ. ಈ ಬಗ್ಗೆ ೨೦೧೪ ರಲ್ಲಿ ಪಶ್ಚಿಮ ಬಂಗಾಳದಲ್ಲಿ ಜಾರಿಯಲ್ಲಿರುವಂತೆ ಸರ್ಕಾರಿ ಪ್ರಾಯೋಜಿತ ಕಲ್ಯಾಣ ನಿಧಿ ಸೌಲಭ್ಯ ಒದಗಿಸಬೇಕೆಂದು ಸರ್ಕಾರಕ್ಕೆ ಮಾಡಿದ ಮನವಿಯ ಮೇರೆ, ಅಧಿಕಾರಿಗಳ ತಂಡವು ಇದಕ್ಕೆ ಪೂರಕವಾದ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಈ ಯೋಜನೆಯ ಜಾರಿಗೆ ಅವಶ್ಯವಿರುವ 125 ಕೋಟಿ ನಿಧಿಗೆ ಬದಲಾಗಿ ಸರ್ಕಾರ ಕೇವಲ ೨೫ ಕೋಟಿಯನ್ನಷ್ಟೆ ಒದಗಿಸಿರುವುದರಿಂದ ಯೋಜನೆಯ ಸಮರ್ಪಕ ಜಾರಿ ಸಾಧ್ಯವಾಗಿಲ್ಲವೆಂದು ತಿಳಿಸಿದರು.

ಕೊಡಗು ಜಿಲ್ಲಾ ತಲೆಹೊರೆ ಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಹಮಾಲಿಗಳು, ತಲೆ ಹೊರೆ ಕಾರ್ಮಿಕರು ಈ ಹಿಂದಿನ ಕೂಲಿಯಲ್ಲೆ ಕೆಲಸ ನಿರ್ವಹಿಸುತ್ತಿದ್ದು, ಎಲ್ಲಾ ವಸ್ತುಗಳ ಧಾರಣೆ ಹೆಚ್ಚುತ್ತಿದ್ದರು ಇವರ ಕೂಲಿ ಹಣದ ಪರಿಷ್ಕರಣೆ ಆಗಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಹಮಾಲಿ ಫೆಡರೇಶನ್‌ನ ಅಧ್ಯಕ್ಷ ಗೋಪಾಲ್, ಖಜಾಂಚಿ ಕೆ.ಎಸ್.ಶಾಜಿ, ಪ್ರಧಾನ ಕಾರ್ಯದರ್ಶಿ ಹಸನಬ್ಬ, ಚೇರಂಬಾಣೆ ಪದಾಧಿಕಾರಿ ಕೆ.ಕೆ.ಬಷೀರ್, ಭಾಗಮಂಡಲ ಘಟಕದ ಅಧ್ಯಕ್ಷ ರಾಮು ಮತ್ತಿತರ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!