ಅಂಕೋಲ – ಕಣ್ಣೀರ ಕಥೆಗಳಿಗೆ ಮಿಡಿದ ಉಡುಪಿ ಟೈಮ್ಸ್

ಕಲ್ಲೇಶ್ವರ (ಅಂಕೋಲಾ): ಅತ್ತು ಅತ್ತು ಬತ್ತಿದ್ದ ಕಣ್ಣೀರು, ತಮ್ಮ ಸೂರನ್ನು ಆಪೋಶನ ತೆಗೆದುಕೊಂಡ ನೆರೆಗೆ ಹಿಡಿ ಶಾಪ ಹಾಕುತ್ತಿರುವ ತಾಯಂದಿರು. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ತಾವು ವರ್ಷದ ಪ್ರಾರಂಭದಿಂದಲೇ ಪರೀಕ್ಷೆಗಾಗಿ ಬರೆದು ಇಡುತ್ತಿದ್ದ ಪುಸ್ತಕವೆಲ್ಲ ನೀರುಪಾಲಾಗಿ ಮುಂದೇನು ಎಂದು ತಲೆ ಮೇಲೆ ಕೈ ಹೊತ್ತು ಕೂತ ವಿದ್ಯಾರ್ಥಿಗಳು.

ಒಂದು ಕಡೆ ಊರಿಗೆ ಅಂದ ನೀಡುತ್ತಿದ್ದ ಹಗ್ಗದ ಸೇತುವೆ ತುಂಡಾಗಿ ಬಿದ್ದಿದೆ, ಇನ್ನೊಂದೆಡೆ ಮನೆಯ ಚಾವಣಿ ನೆಲ ಸಮವಾಗಿದೆ , ಪ್ರಕ್ರೃತಿ ಮುನಿದರೆ  ಮುಂದೆ ನಾವೆಲ್ಲ ನಗಣ್ಯ ಎಂಬುದನ್ನ ಈ ದ್ರಶ್ಯ ಸಾರಿ ಸಾರಿ ಹೇಳುವಂತಿತ್ತು, ಈ ಭಯಂಕರ  ದ್ರಶ್ಯ ಕಂಡು ಬಂದಿದ್ದು ಅಂಕೋಲಾ ತಾಲೂಕಿನ ಡೊಂಗ್ರಿ , ಹೆಗ್ಗಾರ, ವಜ್ರಳ್ಳಿ, ಹೊಸಕಂಬಿ, ಸುಂಕಸಾಳ, ಕೋನಾಳ ಎಂಬಲ್ಲಿ.  ಕಣ್ಣು ಹಾಯಿಸಿದಷ್ಟು ನೀರೇ ಕಾಣಿಸುತ್ತಿತ್ತು.

ಸಿದ್ದಿ ಕುಡುಬಿ, ನಾಯಕ, ಹಾಲಕ್ಕಿ ಹೀಗೆ ಬುಡಕಟ್ಟು ಜನಾಂಗ ವಾಸಿಸುವ ಈ ಪ್ರದೇಶದಲ್ಲಿ ಕಳೆದ ನಾಗರ ಪಂಚಮಿಯಿಂದ ನಿರಂತರ ಒಂದು ವಾರ ಸುರಿದ  ಮಳೆ ಇವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಮನೆಯ ಒಳಗೆ ನುಗ್ಗಿದ ನೀರು ಮನೆಯಲ್ಲಿದ್ದ ವಸ್ತುಗಳೊಂದಿಗೆ ಕನಸನ್ನು ಹೊತ್ತುಕೊಂಡು ಹೋಗಿದೆ . ಇದೆಲ್ಲ ದೃಶ್ಯ ಕಂಡು ಬಂದದ್ದು ಉಡುಪಿ ಟೈಮ್ಸ್ ಕನ್ನಡ ನ್ಯೂಸ್ ವೆಬ್ ಸೈಟ್ ಜಿಲ್ಲೆಯ 8 ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಕಾರೊಂದಿಗೆ ರೂ. 2.80 ಲಕ್ಷ ಮೊತ್ತದ ಪರಹಾರ ಸಾಮಗ್ರಿಗಳನ್ನು ವಿತರಿಸಲು ಹೋದ ಸಂದರ್ಭ ಕಂಡ ಪ್ರತ್ಯಕ್ಷ ದೃಶ್ಯಗಳು.

ಮದುವೆಯ ಮನೆಯಲ್ಲಿ ನೀರವ ಮೌನ

ಆ ಮನೆಯಲ್ಲಿ ಮದುವೆಯಾಗಿ 5 ದಿನಗಳು ಕಳೆದಿತ್ತು ,ಮದುವೆ ಸಂದರ್ಭ ವಧುವಿಗೆ ಬಂದ ಉಡುಗೊರೆಯು ಮನೆಯ ಕಪಾಟಿನ ಮೇಲಿತ್ತು, ಮಳೆಗಾಲಕ್ಕೆಂದು ಸಂಗ್ರಹಿಸಿದ್ದ ವಸ್ತುಗಳು ಎಲ್ಲವೂ ಕೊಚ್ಚಿ ಹೋದ ಮೇಲೆ  ಈ ಬದುಕು ಇದ್ದರೆಷ್ಟು ಹೋದರೆಷ್ಟು ಎನ್ನುವಷ್ಟರ ಮಟ್ಟಿಗೆ ಅಂಕೋಲಾದ  ಕಲ್ಲೇಶ್ವರ ಗ್ರಾಮದ ವೃದ್ಧೆ ದೇವಮ್ಮ ಅವರ ಅಳುವು ಎಂಥವರ ಮನಸ್ಸು ಮಮ್ಮಲ ಮರಗುವಂತಿತ್ತು.ಇವರ ಮನೆಯ ಬಳಿ ಇದ್ದ ತೂಗು ಸೇತುವೆ ನೆರೆಯಲ್ಲಿ ಕೊಚ್ಚಿಹೋದಾಗ  ಇದರ ಬೃಹತ್ ಗಾತ್ರದ  ಕಬ್ಬಿಣದ ತಂತಿ ಮನೆಯ ಮೇಲೆ ಬಿದ್ದ  ಪರಿಣಾಮ ಮನೆಯು ಸಂಪೂರ್ಣ ಧರಾ ಶಾಹಿಯಾಯಿತು. ಈ ದ್ರಶ್ಯ ಯಾರನ್ನಾದ್ರೂ ಒಮ್ಮೆ ಮನಸ್ಸು  ಕಲಕುವಂತೆ ಮಾಡುತಿತ್ತು . ಇನ್ನೊಂದೆಡೆ  ಮಾಜಿ ಸೈನಿಕರಾದ  ಶ್ರೀಪಾದ್ ಪುಂಡಾಲೀಕ ವರ್ಣೇಕರ್ ಅವರ  ಅಂಗಡಿಯ ಚಿನ್ನಾಭರಣಾ ನೆರೆಯೊಂದಿಗೆ ಬಂದ ಮಣ್ಣಿನಲ್ಲಿ ಸೇರಿಕೊಂಡು ಹೋಗಿದೆ.  ಸುಮಾರು   ವರ್ಷಗಳ ನಂತರ ಈ ರೀತಿ ಭಾರೀ ಮಳೆಯಿಂದಾಗಿ ಅಂಕೋಲಾದದ್ಯಾಂತ ೧೫೦ ಕ್ಕೂ ಹೆಚ್ಚು ಜನ ಮನೆ ಮಠ ಕಳೆದುಕೊಳ್ಳುವಂತಾಗಿದೆ .

ದೇವಸ್ಥಾನವನ್ನೇ ಮನೆಯಾಗಿ ಮಾಡಿಕೊಂಡ ಕುಟುಂಬ –

ಯಾಣ ಹಳ್ಳಿಗಾಡಿನ ಮನೆಯನ್ನ ಕಳೆದುಕೊಂಡ ಮೂರು  ಕುಟುಂಬಗಳು  ಊರಿನ ಸಣ್ಣ ದೇವಾಲಯದಲ್ಲಿ ಆಶ್ರಯವನ್ನ ಪಡೆದಿದೆ, ದಸರಾದಂದು  ಪೂಜೆಗಾಗಿ ಈ ದೇವಾಲಯವನ್ನ ಬಿಟ್ಟು ಕೊಡಬೇಕು ಮುಂದಿನ ದಾರಿ ಇವರಿಗೆ ತಿಳಿಯದಾಗಿದೆ.

ನಿರಾಶ್ರಿತರ ನೆರವಿಗೆ ನಿಂತ ಉಡುಪಿ ಟೈಮ್ಸ್ –

ಉಡುಪಿಯಲ್ಲಿ ನೂತನವಾಗಿ ಪ್ರಾರಂಭವಾದ ಉಡುಪಿ ಟೈಮ್ಸ್ ಕನ್ನಡ ನ್ಯೂಸ್ ವೆಬ್ ಸೈಟ್ ತನ್ನ ಅಭಿಯಾನ ಹಮ್ಮಿಕೊಂಡಿತ್ತು ಈ ಅಭಿಯಾನಕ್ಕೆ ಅನೇಕ ಸಂಘ ಸಂಸ್ಥೆಗಳು ನಮ್ಮ ಜೊತೆ ಸಹಾಯ ಹಸ್ತ ನೀಡಿದ್ದವು ಈ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ೨ ವಾಹನದೊಂದಿಗೆ  ಅಂಕೋಲದ ನಿರಾಶ್ರಿತರ ಮನೆಗೆ ಭೇಟಿ ನೀಡಿ  ಅವರಿಗೆ ಅಗತ್ಯ ವಸ್ತುಗಳನ್ನ  ನಾವೇ ತಲುಪಿಸಿದೆವು. ನಾವು ಹೋದ ಹಳ್ಳಿಗಳಲ್ಲಿ ಸರಿಯಾಗಿ ರಸ್ತೆಗಳೆ ಇಲ್ಲ ಸರಕಾರದ ಸವಲತ್ತುಗಳು ಇಲ್ಲಿನ ಜನರಿಗೆ ನೆರೆ ಬಂದು ಹೋಗಿ ವಾರಗಳೂ ಕಳೆದರೂ  ಯಾವುದೇ ದಿನ ಬಳಕೆ ಸಾಮಾಗ್ರಿ ತಲುಪದ ಊರಿಗಳಿಗೆ ಹೋಗಿ ಹಂಚಿದ ಸಂತೃಪ್ತಿ ನಮ್ಮ ತಂಡಕ್ಕಿದೆ.

ಕೈ ಜೋಡಿಸಿದ ಸಂಸ್ಥೆಗಳು– 

ಉಡುಪಿ ಟೈಮ್ಸ್ ನ ಈ ಅಭಿಯಾನಕ್ಕೆ ಅನೇಕ ಸಂಘ ಸಂಸ್ಥೆಗಳು ತಮ್ಮ ಸಹಾಯ ಹಸ್ತ ನೀಡಿದೆ, ಜೆಸಿಐ ಕುಂದಾಪುರ, ಶಿರ್ವ ರೋಟರಿ, ಜೆಸಿಐ ಉಡುಪಿ ಸಿಲ್ವರ್ ಸ್ಟಾರ್ , ಡಿಜಿಟಲ್ ಮೊಬೈಲ್ ಸೆಂಟರ್ ಚಿತ್ತರಂಜನ್ ಸರ್ಕಲ್ ,ಲಯನ್ಸ್ ಸಂಸ್ಥೆ ಶಿರ್ವ, ಜೆಸಿಐ ಉದ್ಯಾವರ ಕುತ್ಪಾಡಿ,ಅನ್ಸ್ ಕ್ಲಬ್ ಕೋಟೇಶ್ವರ, ಶಕ್ತಿ ಸ್ವರೂಪ ಭಜನಾ ಮಂಡಳಿ ಹಾಗೂ ರಾಜೀವ ನಗರ ಫ್ರೆಂಡ್ಸ್  ಉಡುಪಿ, ಹಾಗು ಅನೇಕ ಜನ ಕೊಡುಗೈ ದಾನಿಗಳು ನಮ್ಮ ಈ ಕಾರ್ಯಕ್ಕೆ ಶ್ಲಾಘನೆ ಯಾ ಜೊತೆಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದರು

ಪ್ರಯಾಣದಲ್ಲಿ ಸಾಥ್ ನೀಡಿದ ಜೆಸಿಐ ಕುಂದಾಪುರ

ಜೆಸಿಐ ಕುಂದಾಪುರದ ಸುಮಾರು 8 ಜನ ಸದಸ್ಯರು ತಾವು ಒಟ್ಟು ಮಡಿದ ವಸ್ತುಗಳ ಜೊತೆಗೆ ಅಂಕೋಲಕ್ಕೆ ಪ್ರಯಾಣ ಬೆಳಿಸಿ ನೆರೆ ಪೀಡಿತರಿಗೆ ತಾವು ತಂದ ವಸ್ತುಗಳನ್ನ ಹಂಚಿದರು,..

ಹರಿದು ಬಂದ ಪುಸ್ತಕ ,ಸೀರೆ , ದಿನಸಿ ವಸ್ತುಗಳು

ಉಡುಪಿ ಟೈಮ್ಸ್ ಸಂಸ್ಥೆ ಅಭಿಯಾನಕ್ಕೆ ಕರೆಕೊಟ್ಟ ಕೂಡಲೇ ಅನೇಕ ಸಹ್ರದಯಿ ದಾನಿಗಳು ನಮ್ಮ ಜೊತೆ ಟೊಂಕ ಕಟ್ಟಿ ನಿಂತರು. ಶಿರ್ವ ರೋಟರಿ ಯವರು ಸುಮಾರು 100  ಹೊಸ ಸೀರೆಗಳನ್ನು ನೀಡಿದರು, ವಿಠ್ಠಲ್ ಪೂಜಾರಿ ಯವರು ಮಕ್ಕಳಿಗಾಗಿ ಪುಸ್ತಕಗಳನ್ನು ದಿನಸಿ ಪದಾರ್ಥಗಳನ್ನು ನೀಡಿದರು. ವಸ್ತುಗಳನ್ನು ತೆಗೆದು ಕೊಂಡು ಹೋಗಲು ಹೊಸ ಬ್ಯಾಗ್ ಗಳನ್ನೂ ನೀಡಿದರು,

ಶಾಲೆಗಳಿಂದ ನೆರೆ ಪರಿಹಾರಕ್ಕೆ ಸಹಾಯ

ಉಡುಪಿ ಟೈಮ್ಸ್ ನ ಜೊತೆ ಕೈ ಜೋಡಿಸಿದ ಜೆಸಿಐ ಕುಂದಾಪುರದ ಮನವಿಯ ಮೇರೆಗೆ ಹೆಸ್ಕೂತೂರು ಶಾಲೆ ಸ್ವತಂತ್ರ ದಿನಾಚರಣೆಯ ಆಚರಣೆಯ ರೀತಿಯ ಬದಲಾಯಿತು ದಿನಾಚರಣೆಯ ದಿನ ಮಕ್ಕಳು ತಮ್ಮ ಮನೆಯಿಂದ ತಮ್ಮ ಶಕ್ತಿಯನ್ನ ಮೀರಿ ಅಭಿಯಾನಕ್ಕೆ ನೀಡಿದರು ಮಕ್ಕಳ ಈ ಸೇವಾ ಮನೋಭಾವಕ್ಕೆ ಸಾರ್ವಜನಿಕರ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಹಾಯ ಕೋರಿದರು ಕೈ ಹಿಡಿಯದ ಸಂಬಧಪಟ್ಟವರು

ವಜ್ರಳ್ಳಿ, ಹೊಸಕಂಬಿ, ಸುಂಕಸಾಳ ಎಂಬ ಊರುಗಳಲ್ಲಿ ಜನರಲ್ಲಿ ಮೂಲಭೂತ ಸಮಸ್ಯೆಗಳೇ ಹೆಚ್ಚಿದೆ. ಪ್ರತಿಯೊಂದು ಮನೆಯು ಒಂದೊಂದು ಕಣ್ಣೀರ ಕತೆ ಹೇಳುವಂತಿತ್ತು, ಇಲ್ಲಿನ ಮಣ್ಣೆಗಳಿಗೆ ಸಂಪರ್ಕ ರಸ್ತೆಗಳು ಇಲ್ಲ ಅವ್ರಿಗೆ ಪೇಟೆಯ ದರ್ಶನ ಆಗಬೇಕಾದ್ರೆ ಸುಮಾರು ೪೦ ಕಿ ಮೀ ಕಚ್ಚಾ ರಸ್ತೆಯಲ್ಲಿ ಸಾಗಬೇಕು . ಮನೆಯಲ್ಲಿ ಯಾರಿಗಾದರೂ ಅರೋಗ್ಯ ಸಮಸ್ಯೆ ಉಂಟಾದಲ್ಲಿ ಆಸ್ಪತ್ರೆಗೆ ತರಲು ಹರಸಾಹಸ ಪಡಬೇಕಾಗುತ್ತದ್ದೆ, ಕೇವಲ ಸೂರು ಮಾತ್ರವಲ್ಲದೆ ಬದುಕು ಕಟ್ಟಿಕೊಳ್ಳುವ ದಯನೀಯ ಪರಿಸ್ಥಿತಿ ಅವರದ್ದು .

ತಾವಿದ್ದ ಜಾಗ ಅರಣ್ಯ ಇಲಾಖೆಯ ಸುಪರ್ದಿಗೆಯಲ್ಲಿ ಇದೆ ಹಾಗಾಗಿ ಅವರಿಗೆ  ಯಾವುದೇ ಅಧಿಕ್ರತ ವಿಳಾಸ ಇಲ್ಲದಂತಾಗಿದೆ. ಈ ಜಾಗವನ್ನ ಬಿಟ್ಟು ಹೋಗುವದಾದರೆ ನಮಗೆ ಆತ್ಮಹತ್ಯೆಯೇ ಗತಿ ಎನ್ನುತ್ತಾರೆ ಅಲ್ಲಿನ ನಿವಾಸಿಗಳು ಉಡುಪಿ ಟೈಮ್ಸ್ ನ ಅಭಿಯಾನ ಅಲ್ಲಿಗೆ ಹೋದಾಗ . ಅಲ್ಲಿ ಯಾವ ಅಧಿಕಾರಿಯು ಬರದೇ ಇದ್ದದು ಇನ್ನಷ್ಟು ಮನಸ್ಸಿಗೆ ಬೇಸರ ತಂದಿದೆ. ಸಂಸ್ಥೆಯ ವಾಹನಗಳನ್ನು  ನೋಡಿದಾಗ ಅಲ್ಲಿನ ಜನರ ಮುಖದಲ್ಲಿನ ಮಂದಹಾಸ ನಮಗೆ ತೃಪ್ತಿ ನೀಡಿತು.  ಪತ್ರಕರ್ತ ಮಿತ್ರ ಮಹೇಶ್ ನೀಡುತ್ತಿದ್ದ ಸಲಹೆ ಸೂಚನೆಗಳು ನಮ್ಮನ್ನು ಸಹಾಯದ ಅಗತ್ಯವಿರುವವರ ಬಳಿ ಸಾಗುವಂತೆ ಮಾಡಿತು.

Leave a Reply

Your email address will not be published. Required fields are marked *

error: Content is protected !!