ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ನೆರೆ ಪೀಡಿತರಿಗೆ 40 ಲಕ್ಷ ಮೌಲ್ಯದ ಸಹಾಯ

ಉಡುಪಿ: ಅತಿವೃಷ್ಟಿಯಿಂದ ತತ್ತರಗೊಂಡ ಉತ್ತರ ಕರ್ನಾಟಕ , ಮಲೆನಾಡಿನಲ್ಲಿ ಅನೇಕ ಕುಟುಂಬಗಳು ನಿರಾಶ್ರಿತರಾಗಿರುವ ಹಿನ್ನೆಲೆಯಲ್ಲಿ ಅವರ ಸಹಾಯಕ್ಕೆ ನಿಂತ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ರೂ 40 ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಗುರುವಾರ ವಿವಿದ ಪ್ರದೇಶಗಳಿಗೆ ಕಳುಹಿಸುವುದರ ಮೂಲಕ ಮಾನವೀಯತೆಯನ್ನ ಮೆರೆದಿದೆ .
ಉಡುಪಿ ವಲಯ ಪ್ರಧಾನ ಧರ್ಮಗುರು ಹಾಗೂ ಉಡುಪಿ ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೊನ್ಸಾ ಅವರು ಪರಿಹಾರ ಸಾಮಾಗ್ರಿಗಳನ್ನು ಹೊತ್ತ ಲಾರಿಗಳಿಗೆ ಉಡುಪಿ ಚರ್ಚಿನ ಬಳಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು ..


ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಿಂದ ಸಂತ್ರಸ್ಥರ ಅಗತ್ಯ ಬಳಕೆಗೆ ಬೇಕಾದ ಬಟ್ಟೆ, ನೀರು, ಅಕ್ಕಿ, ಔಷಧಿ, ಹಿಟ್ಟು, ಬೇಳೆ, ಬಿಸ್ಕತ್, ಚಾಪೆ, ಅಡುಗೆ ಎಣ್ಣೆ, ನೀರಿನ ಬಾಟೆಲ್, ಸೋಪು, ಚಹಾ ಪುಡಿ ಸೇರಿ ರೂ. 40 ಲಕ್ಷ ಮೌಲ್ಯದ ನೆರವು ನೀಡಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಐದು ವಲಯಗಳಾದ ಉಡುಪಿ, ಶಿರ್ವ, ಕಾರ್ಕಳ, ಕುಂದಾಪುರ ಮತ್ತು ಕಲ್ಯಾಣಪುರ ವಲಯದ ಕೆಥೊಲಿಕ್ ಸಭಾ ಘಟಕಗಳು ವಸ್ತುಗಳ ಸಂಗ್ರಹಕ್ಕೆ ಸಹಕಾರ ನೀಡಿದ್ದಾರೆ.


ಸಂಗ್ರಹಿಸಿದ ವಸ್ತುಗಳನ್ನು ಕಾರವಾರ, ಶಿವಮೊಗ್ಗ, ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಗಳಿಗೆ ಸ್ವತಃ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಪ್ರತಿನಿಧಿಗಳ ತೆರಳಿ ನೆರೆಪೀಡಿತ ಸಂತ್ರಸ್ತರಿಗೆ ಹಸ್ತಾಂತರಿಸಲಿದ್ದಾರೆ.

ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್ ವಂ|ರೋಮಿಯೊ ಲೂವಿಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಉಪಾಧ್ಯಕ್ಷ ಫ್ಲೈವನ್ ಡಿಸೋಜಾ, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಆಲ್ಫೋನ್ಸ್ ಡಿಕೋಸ್ತಾ, ಪದಾಧಿಕಾರಿಗಳಾದ ಗ್ರೆಗೋರಿ ಪಿಕೆ ಡಿಸೋಜಾ, ಲೂಯಿಸ್ ಡಿಸೋಜಾ, ರೊನಾಲ್ಡ್ ಡಿ ಆಲ್ಮೇಡಾ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!