ಕುಂದಗನ್ನಡದ ಸ್ವರ್ಗಸುಖ !
ಎ.ಎಸ್.ಎನ್.ಹೆಬ್ಬಾರ್, ಕುಂದಾಪುರ
ಅದೊಂದು ಕುಂದಾಪ್ರದಲ್ಲಿ ನಡೆದ ಸಾಹಿತ್ಯ ಸಮ್ಮೇಳನ. ಸ್ವಾಗತ ಭಾಷಣ ನಂದು. ಜನಗಳನ್ನ ಕುಂದಾಪ್ರ ಕನ್ನಡದಲ್ಲೇ ಸ್ವಾಗತ ಮಾಡಿ ಹೋಯ್, ಬಂದ್ರ್ಯಾ, ಕೂಕಣ್ಣಿ. ಸಮಾ ಕೇಣಿ. ಉಣ್ಣಿ. ಎಂದೇ ಎಲ್ಲ ಹೇಳಿದಾಗ ಕುಂದಾಪ್ರ ಕನ್ನಡಪ್ರಿಯರಿಂದ ಚಪ್ಪಾಳೆಯೇ ಬಂದಿತ್ತು. ಭಾಷಣ ಮುಗಿಸಿ ಆಸನಕ್ಕೆ ವಾಪಾಸಾಗುತ್ತಿದ್ದಂತೆಯೇ, ಮಂಗಳೂರ ಕಡೆಯಿಂದ ಬಂದವರೊಬ್ಬರು ವ್ಯಗ್ರ ಮುಖ ಮಾಡಿಕೊಂಡು ಈ ಘನ ಗಂಭೀರವಾದ ಸಾಹಿತ್ಯ ಸಮ್ಮೇಳನವನ್ನು ನಿಮ್ಮ ಕುಂದಾಪ್ರ ಕನ್ನಡದಿಂದ ಕೆಡಿಸಿಬಿಟ್ಟಿರಲ್ಲ! ಎಂದು ತಗಾದೆ ತೆಗೆದುಬಿಟ್ಟರು. ಎಲಾ ಇವರ! ಎಂದುಕೊಂಡ ನಾನು, ಕುಂದಗನ್ನಡವನ್ನು ಕಡೆಗಣಿಸಿ ಮಾತಾಡಿದ ಈ ಮಹನೀಯರಿಗೆ ಕುಂದಾಪ್ರ ಭಾಷೆಯಲ್ಲೇ ಬುದ್ಧಿಕಲಿಸಬೇಕೆಂತ ಎಣಿಸಿ ಅವರನ್ನೇ ನೋಡಿ ತ್ಯೌಡ್ಕಂತ್ರಿಯಾ ಎಂದುಬಿಟ್ಟೆ! ನನ್ನ ಈ ಪ್ರತಿಕ್ರಿಯೆ ಕೇಳಿ ವೇದಿಕೆಯಲ್ಲಿದ್ದು ಅದನ್ನು ಅರ್ಥಮಾಡಿಕೊಂಡವರೆಲ್ಲ ಘೊಳ್ಳೆಂತ ನಕ್ಕುಬಿಟ್ಟರು. ಪಾಪ, ಈ ಆಕ್ಷೇಪಣೆ ಮಹಾಶಯರಿಗೆ ನಾನು ಏನು ಹೇಳಿದ್ದಂತಲೇ ಅರ್ಥ ಆಗದೇ ಅರ್ಧಗಂಟೆ ಕಾಲ ಅವರಿವರ ಹತ್ತಿರ ಹೆಬ್ಬಾರ್ರು ಎಂತ ಹೇಳಿದ್ದು? ಎಂತ ಕೇಳುವುದರಲ್ಲೇ ಕಾಲ ಕಳೆದರು. ತ್ಯೌಡ್ಕಂತ್ರಿಯಾ ಅಂದರೆ ತೆಪ್ಪಗೆ ಬಿದ್ದಿರುತ್ತೀರಾ? ಎಂತ ಅರ್ಥ. ಕುಂದಗನ್ನಡದ ಜೋರು – ರಾಪು ಎಲ್ಲ ಅಡಗಿದ ಪದ ಅದು. ಕುಂದಗನ್ನಡ ಎಂತ ತಾತ್ಸಾರ – ತಿರಸ್ಕಾರ ಮಾಡಿದವರು ಇದೊಂದು ಪದದ ಅರ್ಥಕ್ಕೇ ಅಷ್ಟು ತಿಣುಕಾಡುತ್ತಿರಬೇಕಾದರೆ ನಮ್ಮ ಕುಂದಗನ್ನಡ ಕಡೆಗಣಿಸುವಂತಹ ಭಾಷೆ ಅಲ್ಲವೇ ಅಲ್ಲ, ಅಲ್ಲವೇ?
ನಮ್ಮೂರೇ ಚಂದ, ನಮ್ಮೂರೇ ಅಂದ, ಕುಂದಾಪ್ರ ಭಾಷಿಯೇ ಕರ್ಣಾನಂದ ಎಂತ ಒಂದು ಕಾಲದಲ್ಲಿ ಬರೆದಿದ್ದೆ. ನಮ್ಮೂರವರೇ ಆದ ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಕವನವೊಂದರಲ್ಲಿ ಪಾವಿಗೊಂದೇ ಆಣಿ, ತಕಣಿ, ತಕಣಿ ಎಂದಿದೆ. ಹರಿಶ್ಚಂದ್ರ ಕಾವ್ಯದಲ್ಲಿ ಬರುವ ಅಕ್ಕಕ್ಕು ಬಚ್ಚಲುದಕಂ ತಿಳಿದೊಡದಾರ ಮೀಹಕ್ಕೆ ಯೋಗ್ಯಂ? ಎಂಬಲ್ಲೂ ನಾವು ಕುಂದಗನ್ನಡವನ್ನೇ ಕಾಣುತ್ತೇವೆ. ಅಂದರೆ ಹಳಗನ್ನಡದ ಸಮೀಪವೇ ಇದೆ ಕುಂದಗನ್ನಡ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಕನ್ನಡ ಮಾತಾಡುತ್ತಾರೆ. ಮೈಸೂರು ಭಾಗದವರು ಮೈಸೂರು ಕನ್ನಡ, ಆಚೆಗೆ ಧಾರವಾಡ ಕನ್ನಡ, ಅಲ್ಲಿ ಬೆಳಗಾವಿ ಕನ್ನಡ, ಇನ್ನೂ ಆಚೆ ಗುಲ್ಬರ್ಗ ಕನ್ನಡ, ಮಂಗಳೂರು ಕಾಸರಗೋಡು ಕಡೆ ಮಂಗ್ಳೂರು ಕನ್ನಡ, ಹೀಗೆ ವಿವಿಧ ರೀತಿಯಲ್ಲಿ ಕನ್ನಡವನ್ನು ಜನ ಆಡುತ್ತಾರೆ. ಎಲ್ಲವೂ ಕೇಳಲು ಸೊಗಸೇ. ಯಾವುದೂ ಮೇಲಲ್ಲ – ಯಾವುದೂ ಕೀಳಲ್ಲ. ಎಲ್ಲವನ್ನೂ ಒಪ್ಪಿ ಸವಿಯುವ ದೊಡ್ಡ ಮನಸ್ಸು ಬೇಕು ಅಷ್ಟೆ.
ಕುಂದಗನ್ನಡದಲ್ಲಿ ಎಲ್ಲವೂ ಚುಟುಕು-ಹೃಸ್ವ. ಹೋಗಬೇಕು ಎಂಬುದಕ್ಕೆ ಹೋಯ್ಕು, ಬರಬೇಕು ಎಂಬುದಕ್ಕೆ ಬರ್‍ಕ್, ಕುಳಿತುಕೊಳ್ಳಿಗೆ ಕೂಕಣ್ಣಿ, ಊಟಮಾಡಿಗೆ ಉಣ್ಣಿ ಹೀಗೆ. ನೀ ವಿ. ನಾ ಕಡೀಕೆ ವಿತೆ ಅಂದರೆ ಅರ್ಥ ಆಗುತ್ತದೆಯಾ? ನೀನು ಸ್ನಾನ ಮಾಡು (ಮೀಯು) ನಾನು ಕಡೆಗೆ (ಆನಂತರ) ಮೀಯುವೆ ಎಂದರ್ಥ.
ಕುಂದಾಪುರದ ಡಾಕ್ಟರರೊಬ್ಬರ ಅಳಿಯ ಮಂಗಳೂರು ಕಡೆಯವರು. ಡಾ| ಮೋಹನ ಆಳ್ವರು ಒಮ್ಮೆ ಕುಂದಾಪುರಕ್ಕೆ ಬಂದು ಈ ಡಾಕ್ಟರರನ್ನು ಕಂಡು ಮಾತಾಡಿಸಿದ್ದರು. ಸ್ವಲ್ಪ ಸಮಯದ ನಂತರ ಡಾಕ್ಟರರು ತಮ್ಮ ಅಳಿಯನ ಹತ್ರ ಕೇಳಿದರು – ಮೋನ ಹೋನಾ? ಎಂತ. ಮಂಗ್ಳೂರ ಕಡೆಯ ಈ ಅಳಿಯ ಕಕ್ಕಾಬಿಕ್ಕಿ. ಮೋಹನ ಹೋದನಾ? ಎಂಬುದನ್ನು ಕುಂದಗನ್ನಡದಲ್ಲಿ ಚುಟುಕಾಗಿ ಮೋನ ಹೋನಾ? ಎಂದಿದ್ದರು ಡಾಕ್ಟರರು.
ಕುಂದಾಪುರ ಶಾಲೆಗೆ ಬಂದ ಉಡುಪಿ ಕಡೆಯ ಅಧ್ಯಾಪಕರೊಬ್ಬರು ಹೋಂವರ್ಕ್ ಕೊಟ್ಟು, ಮಕ್ಕಳೇ ನಾಳೆ ಇದನ್ನು ಮಾಡಿತನ್ನಿ ಎಂದಾಗ ಒಬ್ಬ ಹುಡುಗ ಎದ್ದು ನಿಂತು ಸರ್, ಬರ್ಕಾ ಬರ್ಕ? ಎಂದು ಕೇಳಿದಾಗ ಅಧ್ಯಾಪಕರು ಪೆಚ್ಚು! ಎಂತ ಮಾರಾಯ? ಬರ್ಕಾ ಬರ್ಕ ಎಂದರೆ ? ಎಂದಾಗ ಆತ ಬರೆದುಕೊಂಡು ಬರಬೇಕಾ ಎಂದರ್ಥ ಎಂದ.
ಅಪ್ಪಟ ಕುಂದಗನ್ನಡದಲ್ಲಿ ಗಾಯ್ಕೋಡು ಎಂದರೆ ಮೆಣಸಿನಕೋಡು ಎಂತ ಹೆಚ್ಚಿನವರಿಗೆ ಗೊತ್ತಿಲ್ಲ. ಕೊಗಳಗುತ್ತಿ ಎಂಬ ಪದ ಮನೆಕಟ್ಟುವವರಿಗೆ ಗೊತ್ತಿದ್ದದ್ದು- ಈಗ ಕಾಂಕ್ರೀಟ್ ಮನೆಗಳು ಶುರುವಾದ ಮೇಲೆ ಹೊಗಾಡಿಯೇ ಹೋಯ್ತು ಈ ಪದ. ಅಡುಗೆ ಕೋಣೆಯಲ್ಲಿ ಸಿಬ್ಲ, ಸಿಕ್ಕ, ಕಡೂಕಲ್ಲು- ಮಗು, ಕೋಡೊಲೆ, ಹೊಗಿಹಲ್ಗೆ, ಅಟ್ಟ ಹಾಗೂ ಮನೆಯ ಹರಣಿ, ಕೊಟ್ಟಿಗೆ, ಬಾರ್ ಕೊಟ್ಟಿಗೆ, ಗಂಟಿ, ಡಾಂಬು ಇಂತಹ ನೂರಾರು ಕುಂದಗನ್ನಡದ ಪದಗಳು ನಾಗರಿಕತೆಯ ಹೊಡೆತಕ್ಕೆ ಸಿಕ್ಕು ಕಾಡುಪಾಲಾಗಿಬಿಟ್ಟಿವೆ. ಒನಕೆ ಎಂದರೆ ಓಬವ್ವ ಹಿಡಿದದ್ದಾ? ಎಂತ ಕೇಳುವ ಮಕ್ಕಳು ಒನಕೆಯನ್ನೇ ಕಾಣದಿದ್ದವರು, ಒನಕೆ ಹೋಗಿ ಬೀಳುವ ಒರಲು ಅಂದರೆ ಒರಲದೇ ಇರುತ್ತಾರಾ? ಮಾತ್ರವಲ್ಲ, ಭತ್ತ ಕುಟ್ಟುವಾಗ ಹೆಂಗಳೆಯರು ಹಾಡುತ್ತಿದ್ದ ಕುಂದಗನ್ನಡದ ಆಶುಕವಿತೆಗಳ ರುಚಿ ಅವರೇನು ಬಲ್ಲರು?
ಭತ್ತ ಕುಟ್ಟೋ ಕೈಗೆ, ಬೈನಿಮುಳ್ಳ್ ಹೆಟ್ಟಿತ್ತ್, ಮದ್ದೀಗ್ಹೋದಣ್ಣ ಬರ್‍ಲಿಲ್ಲೆ,
ಮದ್ದೀಗ್ಹೋದಣ್ಣ ಬರ್‍ಲಿಲ್ಲೆ, ಬಸರೂರ ಸೂಳಿ ಕಂಡಲ್ಲೇ ಒರಗೀದ ಎಂತಲೂ,
ಕೂಕಾಣಿ ನೆಂಟರೇ, ಕೂಳಿಗೆ ಅಕ್ಕಿಲ್ಲೆ, ನಾ ತೊಳೂ ಬತ್ತ ನಂದಲ್ಲ,
ನಾ ತೊಳೂ ಬತ್ತ ನಂದಲ್ಲ ನೆಂಟರೇ, ಬೇಕಾರೆ ಹೋಯ್ನಿ ಹೊಳಿ ಹಾರಿ
ಇಂತಹ ಸಾವಿರಗಟ್ಟಲೆ ಕುಂದಗನ್ನಡದ ಕವನಗಳು ಹಳ್ಳಿಯ ಹೈದರ ಹೃದಯದೊಳಗಿಂದ ಹೊರ ಹೊಮ್ಮಿ ಬಂದವುಗಳಾಗಿ ಸೊಗಸು ಬೀರುತ್ತವೆ.
ಚಿಕಾಗೋದಲ್ಲಿ ನಡೆದ ಅಕ್ಕ ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ನಾನು, ಅಲ್ಲಿ ಧಾರವಾಡ ಕನ್ನಡದಲ್ಲಿ ಕವನ ವಾಚಿಸಿದ್ದನ್ನು ಕೇಳಿ ಸಂಭ್ರಮಿಸಿ, ಕುಂದಗನ್ನಡದಲ್ಲೇ ನನ್ನ ಕವನದ
ಕೆಲವು ಸಾಲುಗಳನ್ನು ಹೀಗೆ ಓದಿಬಿಟ್ಟೆ –
ನಾ ಸಣ್ಣದಿಪ್ಪತ್ತೀಗೆ – ಕುಂದಾಪ್ರದೊಳಗೆಲ್ಲ
ಎಲ್ಕಂಡ್ರೂ ಮಲ್ಲೀಗಿ ಹೂ ಇದ್ದಿತ್ತ್
ಎಲ್ ಹೋದ್ರೂ ಮಲ್ಲೀಗಿ ‘ಘಂ’ ಅಂತಿತ್ತ್
ಕುಂದೇಸ್ರ ದೇವಸ್ಥಾನ ರಸ್ತೀಯ ಬದಿಗೆಲ್ಲ
ಮಲ್ಲೀಗಿ ತೋಟದ್ದೇ ಸಾಲ್ ಇದ್ದಿತ್
ಮಲ್ಲೀಗಿ ತೋಟದ್ದೇ ಸಾಲ್ ಇದ್ದಿತ್
ದೊಡ್ ದೊಡ್ಡ ಮನ್ಸ್‌ರೆಲ್ಲ ಸಾಂಯ್ಕಾಲದ್ ಮೇಲೆಲ್ಲ
ತಲೀಮೇಲೆ ಶಾಲ್ ಹೊದ್ಕಂಡ್ ಹೋತಿದ್ರಲೆ
ಕತ್ ಕತ್ಲೆ ಆಯ್ತಂದ್ರೆ – ಅಚೀಚಿ ಕಂಡ್ ಕಂಡ್
ಪುಸ್ಕಂತ ತೋಟದೊಳ್ಗೆ ನುಗುಳ್‌ತಿದ್ರಲೆ!
ನಾ ಸಣ್ಣದಿಪ್ಪತೀಗೆ-ಕತ್ಲಾಯ್ತ್ ಅಂದರೆ
ಕೂವೋ ಕೂವೋ ಅಂತ ನರಿ ಕೂಗ್ತಿತ್ತ್
ಅದ ಕೇಂಡ್ ನಾವೆಲ್ಲ ನರೀ ಹಾಂಗೇ ಕೂಗ್ತಿತ್ತ್
ನರಿಬೇಣದಗಷ್ಟಪ್ಪ ನರಿ ಇದ್ದಿತ್ತ್
ನರಿಬ್ಯಾಣದ್ ಬದಿಯಗೆ ಭಾರೀ ಮರ ಇದ್ದಿತ್
ಬ್ರಹ್ಮರಾಕ್ಷಸ ಕೂಡಾ ಅಲ್ಲಿದ್ದಿತ್
ಸಾಂಯ್ಕಾಲ ಆಯ್ತಂದ್ರೆ ಅಲ್ಲೀ ಹೋಪೂಕಿಲ್ಲೆ
ದೊಡ್ಮನ್ಸ್ರು ಹೋತಿದ್ರೋ ನಂಗೊತ್ತಿಲ್ಲೆ!
ದದದ
ನಾ ಸಣ್ಣದಿಪ್ಪತೀಗೆ – ಸಾಂಯ್ಕಾಲ ಆಯ್ತಂದ್ರೆ
ಕುಂದಾಪ್ರ ಇಡೀ ಊರ್ ಕಪ್ಪಾತಿತ್ತ್
ಕತ್ಲಾದ್ಮೇಲ್ ಕುಂದಾಪ್ರ ಸತ್ ಹಾಂಗಿತ್ತ್.
ಯಾರ್ ಯಾರ್ ಎಲ್ಲೆಲ್ಲಿಗ್ – ಕತ್ಲಾದ್ಮೇಲ್ ಹೋತಿದ್ರೋ
ಒಂದಾದ್ರೂ ನಮ್ಗೆಲ್ಲ ಕಾಣ್ತಿರ್ಲಿಲ್ಲೆ
ಆದ್ರೂ ದೊಡ್ ದೊಡ್ಡವ್ರ್ -ಓ ಅವ್ರ್ ಓ ಇವ್ರ್
ಓ ಅವ್ಳನ್ ಇಟ್ಕಂಡೀರ್-ಅಂತಿದ್ರಲ್ಲೆ!
ಈಗಂತೂ ಕುಂದಾಪ್ರ ಬೆಳಕಾಯ್ತಲೇ-
ಕತ್ಲೆಲ್ಲ ಹೋಯ್ತೀಗ ಹಗಲಾಯ್ತಲೇ-
ಈಗೆಲ್ಲ ದೊಡ್ಡವ್ರ್ ಎಲ್ ಹೊತ್ರೋ ಏನ್ಕತಿಯೋ-
ಯಾರನ್ ಯಾರ್ ಇಟ್ಕಂಡಿರೋ -ನಂಗೊತ್ತಿಲ್ಲೆ.
ಕುಂದಾಪುರಾ ನನ್ನ ಕುಂದಾಪುರ, ಎಲ್ ಹೋಯ್ತೋ ಆ ಹಳಿಯ ಕುಂದಾಪುರಾ
ಎಂದು ಓದಿ ಮುಗಿಸಿದಾಗ ಇದರ ಪ್ರತೀ ಸಾಲನ್ನೂ ಆಸ್ವಾದಿಸಿ ನಕ್ಕು ನಲಿದ ಈ ಭಾಗದ ಕನ್ನಡ ಜನ, ಕವಿಗೋಷ್ಠಿಯ ನಂತರ ನನ್ನನ್ನು ಸುತ್ತುವರಿದು ನಾನೂ ಕುಂದಾಪ್ರದವ ನಾನು ತೆಕ್ಕಟ್ಟೆಯವ, ನಾನು ಕೋಣಿ, ನಾನು ಬೈಂದೂರು, ನಾನು ಪಾಂಡೇಶ್ವರ ಎಂಬಿತ್ಯಾದಿ ಸಂತಸದಿಂದ ಪರಿಚಯಿಸಿಕೊಂಡು ನೀವು ಕುಂದಾಪ್ರ ಕನ್ನಡದಲ್ಲಿ ಪದ ಹೇಳಿದ್ದು ನಮ್ಗೆಲ್ಲ ಎಷ್ಟ್ ಖುಷಿ ಆಯ್ತ್ ಗೊತ್ತಿತ್ತಾ? ಎಂದಾಗ ಕುಂದಗನ್ನಡವನ್ನು ಅಮೇರಿಕಾದಲ್ಲೂ ಮೆರೆಸಿದ ಹಿಗ್ಗಿನಿಂದ ನನಗೆ ಸ್ವರ್ಗಕ್ಕೆ ಮೂರೇ ಗೇಣು!.
ಎ.ಎಸ್.ಎನ್.ಹೆಬ್ಬಾರ್, ಕುಂದಾಪುರ
ನಮ್ ಹೆಬ್ಬಾರ್ ಲಾಯಿಕ್ ಮಾಡಿ ಬರ್ದಿರ್. ಓದಿ ಖುಷಿಯಾಯಿತ್.