ಕಲಿಯುಗದ ಪ್ರತ್ಯಕ್ಷ ದೇವನಿಗೆ ಪಂಚಮಿ ಸಂಭ್ರಮ
ಉಡುಪಿ ಟೈಮ್ಸ್ ಸಂಪಾದಕೀಯ
ಉಡುಪಿ (ಉಡುಪಿ ಟೈಮ್ಸ್ ವಿಶೇಷ ವರದಿ) – “ಪಂಚಮಿ ಹಬ್ಬ ಉಳಿದವು ದಿನ ನಾಕ ಅಣ್ಣ ಬರಲಿಲ್ಲ ಯಾಕ ಕರಿಯಾಕ” ಎಂಬ ಹಾಡು ಪಂಚಮಿ ಹಬ್ಬ ಹಾಗೂ ಹೆಣ್ಣಿನ ತವರು ಮನೆಯ ಸೆಳೆತವನ್ನು ಅದ್ಭುತವಾಗಿ ವಿಶ್ಲೇಷಿಸಿದೆ. ನಾಗರ ಪಂಚಮಿ ಬಂತೆಂದರೆ ಸಾಕೂ ಹಬ್ಬಗಳ ಸರಮಾಲೆ ಆರಂಭವಾಯಿತೆಂದೆ ಅರ್ಥ. ಅದರಲ್ಲೂ ಕರಾವಳಿಗರದ ನಮಗೆ ನಾಗಾರಾಧನೆ ವಿಶೇಷ .
ಪ್ರಕೃತಿಯಲ್ಲಿ ದೇವರನ್ನು ನೋಡುವ ಹಿಂದುಗಳಿಗೆ ನಾಗವೊಂದು ಬಹು ದೊಡ್ಡ ಶಕ್ತಿ, ಆತನ ಆರಾಧನೆಯಲ್ಲಿ ಯಾವುದೇ ಲೋಪ ದೋಷಗಳನ್ನು ನಮ್ಮಿಂದ ಆಗದಂತೆ ನೋಡಿಕೊಳ್ಳುತ್ತೇವೆ, ಬೇರೆ ಯಾವ ಉರಗಗಳನ್ನು ಕಂಡಾಗ ಭಯ ಪಡುವ ನಾವೂ ಸರ್ಪ ಕಾಣದ ಭಯದೊಂದಿಗೆ ಭಕ್ತಿ ಮನಸಲ್ಲಿ ಮೂಡುತ್ತದೆ.ಕಲಿಯುಗದ ಪ್ರತ್ಯಕ್ಷ ದೇವರೆಂದೇ ಕರೆಯಲ್ಪಡುವ ನಾಗನಿಗೆ ತನು ತಂಬಿಲ ಸೇವೆ ನೀಡಿ ಕೃತಾರ್ಥರಾಗುತ್ತರೆ. ನಾಗನ ಕಳೇಬರಹ ಕಣ್ಣಿಗೆ ಬಿದ್ದರೆ ಮಾನವನಂತೆ ಶಾಸ್ತ್ರೋಕ್ತ ಸಂಸ್ಕಾರ ನಡೆಸುವುದು ವಾಡಿಕೆ ಅಥವಾ ನಂಬಿಕೆ.
ಪಂಚಮಿ ಪುರಾಣ – ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ತಕ್ಷಕ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಆಸ್ತಿಕನೆಂಬ ವಟುವು ಬಂದು ಈ ಯಾಗವನ್ನು ತಡೆಯಲು ಮುಂದಾಗಿ ಆಸ್ತಿಕನು ಜನಮೇಜಯನಲ್ಲಿ ಸತ್ಯ ಸಂಗತಿಗಳನ್ನು ತಿಳಿಸಿ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.
ನಾಗ ಪೃಕೃತಿಯರಾದಕ : ನಾಗನ ವಾಸಸ್ಥಾನ ಪ್ರಕೃತಿಯ ಮಡಿಲು ವಿಶಾಲವಾಗಿ ಹರಡಿರುವ ಮರದ ಬುಡದಲ್ಲಿ ನಾಗನ ನೆಲೆ ಕಂಡು ಬರುತ್ತದೆ. ನಾಗನ ನೆಲೆ ಇದೆ ಎಂದು ತಿಳಿದ ಮೇಲೆ ಜನ ಅಲ್ಲಿ ಗಲೀಜು ಮಾಡಲು ಭಯ ಪಡುತ್ತಾರೆ ಹಾಗೂ ಮರದ ಬುಡಕ್ಕೆ ಕೊಡಲಿ ಏಟು ಬೀಳುದಿಲ್ಲ ಅದಕ್ಕಾಗಿಯೇ ಹೇಳುವುದು ಎಲ್ಲಿ ಭಯವಿರುವುದೋ ಅಲ್ಲಿ ಭಕ್ತಿ ಇರುವುದು ಹಾಗಾಗಿ ನಾಗನ ಆರಾಧನೆ ಎಂದರೆ ಸ್ವಯಂ ಪೃಕ್ರತಿ ಆರಾಧನೆ ಈ ದಿನ ಯಾರೂ ಗಿಡಗಳಿಗೆ ಕತ್ತಿ ,ಕೊಡಲಿ ತಾಗಿಸಬಾರದು, ಭೂಮಿ ಅಗೆಯಬಾರದು ಎಂಬ ಪ್ರತೀತಿ ಹಿಂದಿನ ಕಾಲದಿಂದಲೂ ಬಂದಿದೆ.
ಅಷ್ಟೇ ಅಲ್ಲದೆ ಈ ದಿನ ನಾಗನ ಬಿಂಬಕ್ಕೆ ಹಾಕಿದ ಪಂಚಾಮೃತ, ಅಕ್ಕಿ ಇಂದು ಸುರಿಯುವ ಮಳೆಯ ನೀರಿನೊಂದಿಗೆ ಮೇಳೈಸಿ ಸಮುದ್ರಕ್ಕೆ ಸೇರಿ ಇದರಿಂದ ಮೀನುಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಕರಾವಳಿಗರಿಗಿದೆ. ಕಾಲ ಬದಲಾದಂತೆ ಪ್ರಾಕೃತಿಕ ಬನಗಳ ಬದಲು ಕಾಂಕ್ರೆಟ್ ಬನಗಳು ತುಂಬಿದೆ, ಆದರೆ ನಾಗನ ನಿಜವಾದ ಆವಾಸ ಸ್ಥಾನ ಮರಗಳ ಗುಂಪು ಎನ್ನುವುದು ಸಾರ್ವಕಾಲಿಕ ಸತ್ಯ. ಪೃಕ್ರತಿಯ ರಕ್ಷಣೆ ನಿಜವಾದ ನಾಗನ ಆರಾಧನೆ.
ಫಲದಾಯಕ ನಾಗ: ಅರಿಶಿನ, ಚಂದನ ಲೇಪಿತ ಸಿಯಾಳ ಅಭಿಷೇಕ ಪ್ರಿಯನಾದ ನಾಗನನ್ನು ರೋಗ ರುಜಿನ ನಿವಾರಣೆಗಾಗಿ, ಸಂತಾನಕ್ಕಾಗಿ , ಸಂಪತ್ತಿಗಾಗಿ , ಆರೋಗ್ಯಕ್ಕಾಗಿ ಇನ್ನು ಅನೇಕ ಭಾಗ್ಯಗಳಿಗೆ ಆರಾಧಿಸುತ್ತಾರೆ. ಈ ದಿನ ತಮ್ಮ ಮೂಲ ಬನಗಳಿಗೆ ಜನ ತೆರಳಿ ನಾಗನಿಗೆ ಹಾಲೆರೆದು ಕೈ ಮುಗಿಯುತ್ತಾರೆ.
ನಾಗ ಪ್ರಿಯ ಕೇದಗೆ ; ಕೇದಗೆ ಹೂವು ನಾಗನಿಗೆ ಬಲು ಪ್ರೀತಿ ,ಗುಂಪಾಗಿ ಗಿಡದಲ್ಲಿ ಬೆಳೆಯುವ ಈ ಹೂವಿಗೆ ಅದರದೇ ಅದ ಸುವಾಸನೆ ಹಾಗೂ ಆಕಾರ, ಉದ್ದ ಎಲೆಯ ಮದ್ಯೆ ಬಂಗಾರ ಬಣ್ಣದಿಂದ ಕೂಡಿದ ಈ ಹೂವಿಗೆ ನಾಗರ ಪಂಚಮಿ ಬಂತೆಂದರೆ ಸಾಕೂ ಎಲ್ಲಿಲ್ಲದ ಬೇಡಿಕೆ ಈ ಸಮಯದಲ್ಲಿ ಒಂದು ಹೂವಿನ ಬೆಲೆ ಬೆಲೆ 100 ರಿಂದ 150 ರ ವರೆಗೆ ಇದೆ.
ನೈವೈದ್ಯ ಪ್ರಿಯ ನಾಗ- ನಾಗನಿಗೆ ವಿಶೇಷವಾದ ಭಕ್ಷ್ಯ ಅಂದರೆ ಹಾಲು ಬಾಯಿ, ಬೆಳ್ತಿಗೆ ಅಕ್ಕಿಯನ್ನ ಒಂದು ತಾಸು ಮೊದಲೇ ನೆನಸಿ ಅದಕ್ಕೆ ತೆಂಗಿನ ತುರಿಯನ್ನ ಹಾಕಿ ನುಣ್ಣಗೆ ರುಬ್ಬಿಕೊಂಡು ಸಣ್ಣ ಉರಿಯಲ್ಲಿ ಬೆಲ್ಲದೊಂದಿಗೆ ಮಣ್ಣಿ ಮೊಗಚಿದಲ್ಲಿ ಅದರಲ್ಲಿರುವ ನೀರಿನಾಂಶ ಹೋಗಿ ಮೃದುವಾದ ಹಿಟ್ಟಿನ ಹದಕ್ಕೆ ಬರುತ್ತದೆ. ಅದನ್ನ ತುಪ್ಪ ಸವರಿದ ತಟ್ಟೆಗೆ ಹಾಕಿ ತಣಿಯಲು ಬಿಟ್ಟರೆ ಮೃದುವಾದ ಹಾಲು ಬಾಯಿ ನಾಗನ ನೈವೇದ್ಯಕ್ಕೆ ಸಿದ್ದ.
ತುಳು ನಾಡಿನಲ್ಲಿ ಈ ದಿನ ಅರಿಶಿನ ಎಲೆ ಕಡಬು, ಪಂಚಮಿ ಲಾಡು ಹೀಗೆ ಅನೇಕ ಭಕ್ಷಗಳು ಭೋಜನಗಳು ತಯಾರಾಗುತ್ತದೆ .
ಸಾಂಕ್ರಾಮಿಕ ಮಹಾಮಾರಿಯಿಂದ ಕಳೆಗುಂದಿದ ಹಬ್ಬ – ಈ ಬಾರಿಯ ನಾಗರ ಪಂಚಮಿ ಕಳೆಗುಂದಿದೆ ಕಾರಣ ಈ ಬಾರಿ ನಮ್ಮ ದೇಶಕ್ಕೆ ಒಕ್ಕರಿಸಿದ ಕೊರೋನಾ ಸೋಂಕು, ಈ ಸಾಂಕ್ರಾಮಿಕ ರೋಗದ ವ್ಯಾಪಕ ಹರಡುವಿಕೆಯಿಂದಾಗಿ ಜನ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ಯಾವುದೇ ರೋಗ ರುಜಿನದಿಂದ ಮುಕ್ತವಾಗಲು ಭಕ್ತರು ಬೇಡುವುದು ಸರ್ಪದೇವನನ್ನು, ಧರಣಿಯನ್ನ ಹೊತ್ತ ಆದಿಶೇಷನ ಕೃಪೆ ಭೂಮಿ ಮೇಲೆ ಬಿದ್ದು ಮಹಾ ಸಾಂಕ್ರಾಮಿಕ ರೋಗದಿಂದ ಭೂಮಿ ರಕ್ಷೆಯಾಗಲಿ ಎಂಬ ಹಾರೈಕೆಯೊಂದಿಗೆ,
ಸರ್ವೇ ಜನ ಸುಖಿನೋ ಭವಂತು.